ಶುಕ್ರವಾರ, ಡಿಸೆಂಬರ್ 9, 2022
21 °C

ಪೀಠತ್ಯಾಗ ಮಾಡದ ಮುರುಘಾ ಶರಣರು: ವೀರಶೈವ ಲಿಂಗಾಯತ ಸಮಾಜದ ಸಭೆ 29ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೀಠತ್ಯಾಗ ಮಾಡದ ಕಾರಣಕ್ಕೆ ವೀರಶೈವ ಲಿಂಗಾಯತ ಸಮಾಜದ ಸಭೆಯನ್ನು ಸೆ.29ಕ್ಕೆ ಕರೆಯಲಾಗಿದೆ.

ಚಿತ್ರದುರ್ಗ ಹೊರವಲಯದ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಮಾಜಿ ಸಚಿವ ಎಚ್. ಏಕಾಂತಯ್ಯ ಅವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ.

‘ಮುರುಘರಾಜೇಂದ್ರ ಮಠವು ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹೆಸರಾಗಿದೆ. ಇಂದಿನ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಮಠದ ಗೌರವ ಹಾಗೂ ಪ್ರತಿಷ್ಠೆಯನ್ನು ಕಾಪಾಡಲು ಅವರು ಪೀಠತ್ಯಾಗ ಮಾಡಿಲ್ಲ. ಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆ ನಡೆಸಲು ಹಾಗೂ ಮಠದ ಪರಂಪರೆ, ಸಂಪ್ರದಾಯ ನಿರ್ವಹಿಸಲು ಸಾಧ್ಯವಾಗದಿರುವುದು ದುರದೃಷ್ಟಕರ’ ಎಂದು ಸಮಾಜ ಬಾಂಧವರಿಗೆ ಕಳುಹಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಸಭೆಗೆ ಆಗಮಿಸಿ ಮಠದ ಮುಂದಿನ ಹಾದಿಯನ್ನು ರೂಪಿಸಲು ಸೂಕ್ತ ಸಲಹೆ ನೀಡಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ. ಸಮಾಜದ ಮುಖಂಡರಾದ ಜಿ.ವಿ.ರುದ್ರಪ್ಪ, ಎಂ.ಬಿ.ತಿಪ್ಪೇರುದ್ರಪ್ಪ, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕೆ.ವಿ.ಪ್ರಭಾಕರ್, ಎಸ್,ಷಣ್ಮುಖಪ್ಪ ಹಾಗೂ ಎ.ವಿಜಯಕುಮಾರ್ ಪತ್ರಕ್ಕೆ ಸಹಿ ಮಾಡಿದ್ದಾರೆ.

ಶುಕ್ರವಾರಕ್ಕೆ ವಿಚಾರಣೆ

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ 4 ಮತ್ತು 5ನೇ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

ಸೋಮವಾರ ಸಂಜೆ 5 ಗಂಟೆಗೆ ಜಾಮೀನು ಅರ್ಜಿಯ ವಿಚಾರಣೆ ಪ್ರಾರಂಭವಾಯಿತು. ಆರೋಪಿಗಳ ಪರ ವಕೀಲರು ಸುದೀರ್ಘ ಒಂದೂವರೆ ಗಂಟೆ ವಾದ ಮಂಡಿಸಿದರು. ನ್ಯಾಯಾಲಯದ ಕಲಾಪದ ಅವಧಿ ಮುಗಿದ ಕಾರಣ ಶುಕ್ರವಾರಕ್ಕೆ ಮುಂದುವರಿದ ವಾದ ಹಾಗೂ ಪ್ರತಿವಾದಕ್ಕೆ ನ್ಯಾಯಾಧೀಶೆ ಬಿ.ಕೆ.ಕೋಮಲಾ ಸೂಚಿಸಿ ಕಲಾಪ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು