ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ಲಾಠಿ ರುಚಿ

ಅಗತ್ಯ ಸೇವೆಗೆ ಅವಕಾಶ, ಮಾರುಕಟ್ಟೆ– ರಸ್ತೆ ಖಾಲಿ–ಖಾಲಿ
Last Updated 12 ಜುಲೈ 2020, 13:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಅನುಷ್ಠಾನಗೊಳಿಸಿದ ಭಾನುವಾರದ ಲಾಕ್‌ಡೌನ್‌ಗೆ ಕೋಟೆನಾಡು ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆ ಹೊರತುಪಡಿಸಿ ಉಳಿದ ವಹಿವಾಟು ಸ್ಥಗಿತಗೊಂಡಿತ್ತು.

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದರು. ಮಾಸ್ಕ್‌ ಧರಿಸದೇ ಸಂಚರಿಸಿದವರಿಗೆ ದಂಡ ವಿಧಿಸಿದರು. ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ಎಚ್ಚರಿಕೆ ನೀಡಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮುಖ್ಯ ರಸ್ತೆ, ಮಾರುಕಟ್ಟೆ ಭಣಗುಡುತ್ತಿದ್ದವು.

ಭಾನುವಾರದ ಲಾಕ್‌ಡೌನ್‌ಗೆ ಜನರು ಸಹಜವಾಗಿಯೇ ಒಗ್ಗಿಕೊಂಡಿರುವಂತೆ ಕಂಡುಬಂದಿತು. ಎರಡನೇ ವಾರದ ಲಾಕ್‌ಡೌನ್‌ನಲ್ಲಿ ಯಾವುದೇ ಗೊಂದಲಗಳು ಕಂಡುಬರಲಿಲ್ಲ. ಔಷಧ, ಕಿರಾಣಿ, ಆಸ್ಪತ್ರೆ, ಪೆಟ್ರೋಲ್‌ ಬಂಕ್‌ ಹೊರತುಪಡಿಸಿ ಉಳಿದ ಅಂಗಡಿಗಳು ಬಾಗಿಲು ತೆರೆದಿರಲಿಲ್ಲ. ಬಹುತೇಕರು ಇಡೀದಿನ ಮನೆಯಲ್ಲೇ ಕಳೆದರು. ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಹಾಕಿದ್ದ ಪೊಲೀಸರು ವಾಹನ, ಜನ ಸಂಚಾರವನ್ನು ನಿಯಂತ್ರಿಸಿದರು.

ತರಕಾರಿ, ಹಾಲು, ಹಣ್ಣು ಖರೀದಿಗೆ ಬೆಳಿಗ್ಗೆ 9ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ನಸುಕಿನಲ್ಲೇ ಹಾಲು ಖರೀದಿ ಭರದಿಂದ ನಡೆಯಿತು. ಬೆಳಕು ಕಾಣಿಸಿಕೊಳ್ಳುತ್ತಿದ್ದಂತೆ ವಹಿವಾಟು ನಿಧನಗತಿಯಲ್ಲಿ ಸಾಗಿತು. ರೈತರು ಹಳ್ಳಿಯಿಂದ ತಂದಿದ್ದ ತರಕಾರಿಗೆ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬೀದಿ ಸುತ್ತಿ ತರಕಾರಿ ಮಾರಾಟ ಮಾಡುವುದಕ್ಕೆ ಅನುವು ಮಾಡಿಕೊಡಲಿಲ್ಲ. ಆದರೂ, ಅನೇಕ ಬಡಾವಣೆಯಲ್ಲಿ ತಳ್ಳುವ ಗಾಡಿ, ವಾಹನಗಳಲ್ಲಿ ತರಕಾರಿ ಮಾರಾಟ ನಡೆಯಿತು.

ಕೊರೊನಾ ಸೋಂಕು ಶತಕ ದಾಟಿದ ಬಳಿಕ ಕೋಟೆನಾಡಿನ ಜನರಲ್ಲಿ ಆತಂಕ ಶುರುವಾಗಿದೆ. ಹಿರಿಯೂರು ನಗರದ ಮಹಿಳೆಯೊಬ್ಬರು ಮೃತಪಟ್ಟ ಬಳಿಕ ಆತಂಕ ಇನ್ನೂ ಹೆಚ್ಚಾದಂತೆ ಕಂಡುಬರುತ್ತಿದೆ. ಅಗತ್ಯ ಸೇವೆ ಒದಗಿಸುವ ಔಷಧ, ಕಿರಾಣಿ ಅಂಗಡಿಗಳಲ್ಲಿ ಕೆಲವರು ಮಾತ್ರ ಬಾಗಿಲು ತೆರೆದಿದ್ದರು. ವಾಹನ, ಜನ ಸಂಚಾರವೂ ವಿರಳವಾಗಿತ್ತು. ಹೋಟೆಲ್‌ ಸೇರಿ ಹಲವು ಉದ್ಯಮಗಳು ಸೇವೆ ಒದಗಿಸಲಿಲ್ಲ.

ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮಾತ್ರ ನಿರಾತಂಕವಾಗಿ ಸಾಗಿದ್ದವು. ಚಳ್ಳಕೆರೆ ಗೇಟಿನಿಂದ ಪ್ರವಾಸಿ ಮಂದಿರದವರೆಗಿನ ಬಿ.ಡಿ. ರಸ್ತೆ ವಿಸ್ತರಣೆ ಕಾಮಗಾರಿ ಭಾನುವಾರವೂ ಮುಂದುವರಿದಿತ್ತು. ರಸ್ತೆ ವಿಸ್ತರಣೆಗೆ ಅಗತ್ಯವಿರುವ ಕಟ್ಟಡ ತೆರವು ಕಾಮಗಾರಿಯೂ ಸಾಗಿತು. ರಸ್ತೆ ಶುಚಿಗೊಳಿಸುವ ಕಾರ್ಯಕ್ಕೆ ಯಾವುದೇ ಅಡ್ಡಿ ಉಂಟಾಗಲಿಲ್ಲ.

ಶನಿವಾರ ರಾತ್ರಿಯಿಂದ ರಸ್ತೆಗೆ ಇಳಿದ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಹಾಕಿದ್ದರು. ಚಳ್ಳಕೆರೆ ಗೇಟ್‌, ತುರುವನೂರು ಗೇಟ್‌, ದಾವಣಗೆರೆ ರಸ್ತೆ, ಹೊಳಲ್ಕೆರೆ ರಸ್ತೆ, ಗಾಂಧಿ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ನಡೆಸಿದರು. ಗಸ್ತು ವಾಹನದಲ್ಲಿ ನಗರವನ್ನು ಸುತ್ತಿ ಪರಿಶೀಲನೆ ಮಾಡುತ್ತಿದ್ದರು. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುತ್ತಿದ್ದರು.

ವಾಯುವಿಹಾರಿಗಳಿಗೆ ಲಾಕ್‌ಡೌನ್‌ನಿಂದ ಯಾವುದೇ ಅಡ್ಡಿ ಉಂಟಾಗಲಿಲ್ಲ. ಆಡುಮಲ್ಲೇಶ್ವರ, ತುರುವನೂರು ರಸ್ತೆ, ಯಂಗಮ್ಮನಕಟ್ಟೆ ಸೇರಿ ಹಲವೆಡೆ ಎಂದಿನಂತೆ ಭಾನುವಾರ ಬೆಳಿಗ್ಗೆಯೂ ವಾಯುವಿಹಾರ ಮಾಡಿದರು. ಹೀಗೆ, ವಾಯುವಿಹಾರಕ್ಕೆ ಬಂದಿದ್ದವರಲ್ಲಿ ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ.

ಕೈಮುಗಿದು ಅಂಗಲಾಚಿದ ಯುವಕ

ಲಾಕ್‌ಡೌನ್‌ ನಿಯಮಗಳನ್ನು ಬಿಗಿಗೊಳಿಸಿದ ಪೊಲೀಸರು ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದರು. ಸ್ಪಷ್ಟ ಕಾರಣವಿಲ್ಲದೇ ಸಂಚರಿಸುತ್ತಿದ್ದವರಿಗೆ ಲಾಠಿ ಬೀಸಿದರು.

ಹೊಳಲ್ಕೆರೆ ರಸ್ತೆಯ ಮಾರಮ್ಮನ ದೇವಸ್ಥಾನದ ಬಳಿ ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ಧಾವಿಸಿದನು. ಬೈಕ್‌ ಸವಾರರನನ್ನು ತಡೆದ ಪೊಲೀಸರು ವಿಚಾರಣೆ ನಡೆಸಿದರು. ಸ್ಪಷ್ಟ ಕಾರಣ ತಿಳಿಸದ ಪರಿಣಾಮ ಮನೆಗೆ ಹಿಂದಿರುಗುವಂತೆ ಸೂಚನೆ ನೀಡಿದರು. ಕೈಮುಗಿದು ಅಂಗಲಾಚಿದರೂ ಪೊಲೀಸರು ಮಾತ್ರ ಯುವಕನ ಸಂಚಾರಕ್ಕೆ ಅವಕಾಶ ಕಲ್ಪಿಸಲಿಲ್ಲ.

ಗಾಂಧಿ ವೃತ್ತದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಕುಳಿತಿದ್ದ ಪೊಲೀಸರು ಪ್ರತಿಯೊಬ್ಬರನ್ನು ವಿಚಾರಣೆ ಮಾಡುತ್ತಿದ್ದರು. ಅನಗತ್ಯವಾಗಿ ಸಂಚರಿಸುವವರಿಗೆ ಲಾಠಿ ಏಟು ನೀಡಿದರು. ಮಾಸ್ಕ್‌ ಧರಿಸದೆ ಬಂದವರು ದಂಡ ತೆತ್ತು ಮನೆಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT