ಎನ್.ಎಸ್.ಮಹಂತೇಶ

ಮಧ್ಯಕಾಲೀನ ಕರ್ನಾಟಕದಲ್ಲಿ ವಿಜಯನಗರೋತ್ತರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ನಾಯಕ (ಪಾಳೆಯಗಾರ) ಮನೆತನಗಳಲ್ಲಿ ಚಿತ್ರದುರ್ಗ ಸಂಸ್ಥಾನ ಪ್ರಮುಖವಾದದು. ವಿಜಯನಗರ ಸಾಮ್ರಾಟರ ಸಾಮಂತರಾಗಿ ಅಧಿಕಾರಕ್ಕೆ ಬಂದ ಇವರು 1568 ರಿಂದ 1779 ರವರೆಗೆ ಸುಮಾರು 211ವರ್ಷ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಚಿತ್ರದುರ್ಗವನ್ನು ಕೇಂದ್ರಸ್ಥಾನ ಮಾಡಿಕೊಂಡು 13 ನಾಯಕ ಅರಸರು ಆಳಿದ್ದಾರೆ. ‘ವಾಲ್ಮೀಕಿ ಗೋತ್ರದ ಶ್ರೀಮನ್ಮಹಾನಾಯಕಚಾರ್ಯ ಕಾಮಗೇತಿ ಕಸ್ತೂರಿ’ ಎಂಬ ಅಭಿದಾನವನ್ನು ಹೊಂದಿದ್ದ ಈ ಅರಸರು ‘ಹಗಲುಕಗ್ಗೋಲೆಯ ಮಾನ್ಯ’, ‘ಗಂಡುಗೊಡಲಿಯ ಸರ್ಜಾ’, ‘ಚಂದ್ರಗಾವಿ ಛಲದಾಂಕ್ಯ’, ‘ಧೂಳ್ ಕೋಟೆ ವಜೀರ’, ‘ಗಾದ್ರಿಮಲೆ ಹೆಬ್ಬುಲಿ’ ಇತ್ಯಾದಿ ಬಿರುದುಗಳಿಂದ ಪುರಸ್ಕೃತರಾಗಿದ್ದರು.

ಚಿತ್ರದುರ್ಗ ಸಂಸ್ಥಾನದ ಮೊದಲ ನಾಯಕ ಅರಸನೆಂದರೆ ಮತ್ತಿ ತಿಮ್ಮಣ್ಣ ನಾಯಕ ( 1568-1589), ಈತನ ತರುವಾಯ ಒಂದನೇ ಓಬಣ್ಣ ನಾಯಕ (1589-1603), ಒಂದನೇ ಕಸ್ತೂರಿ ರಂಗಪ್ಪ ನಾಯಕ (1603-1652), ಇಮ್ಮಡಿ ಮದಕರಿ ನಾಯಕ (1652-1675), ಇಮ್ಮಡಿ ಓಬಣ್ಣ ನಾಯಕ (1675) , ಕಸ್ತೂರಿ ಚಿಕ್ಕಣ್ಣನಾಯಕ (1675-1686), ಮುಮ್ಮಡಿ ಮದಕರಿ ನಾಯಕ (1686-1688), ದೊಣ್ಣೆ ರಂಗಪ್ಪ ನಾಯಕ (1688), ಸೂರ್ಯಕಾಂತಿ ರಂಗಪ್ಪನಾಯಕ (1689), ಬಿಚ್ಚುಗತ್ತಿ ಭರಮಣ್ಣ ನಾಯಕ (1689-1721), ಹಿರೇಮದಕರಿ ನಾಯಕ (1721-1749), ಇಮ್ಮಡಿ ಕಸ್ತೂರಿ ರಂಗಪ್ಪ ನಾಯಕ (1749-1754), ರಾಜವೀರ ಮದಕರಿ ನಾಯಕ (1754-1779). ಈ ಅರಸರು ಮಹಾರಣಪಂಡಿತರು, ಮಹಾಧರ್ಮನಿಷ್ಠರೂ, ಗುರುಭಕ್ತಿಯುಳ್ಳವರು, ಪ್ರಜಾವತ್ಸಲರೂ, ಪಕ್ಷಪಾತರಹಿತ ರಾಜನೀತಿ ನಿಪುಣರು, ಕೃಷಿ-ವಾಣಿಜ್ಯಗಳ ಪೋಷಕರು ಹಾಗೂ ಸಂರಕ್ಷಕರು ಆಗಿದ್ದರು.

ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಚಿತ್ರದುರ್ಗ ನಾಯಕ ಅರಸರಲ್ಲಿ ಕೊನೆಯ ದೊರೆ ರಾಜವೀರ ಮದಕರಿ ನಾಯಕ. ಈತನನ್ನು ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ. ಈತನು ಜಾನಕಲ್ಲು ತೊದಲು ಭರಮಪ್ಪ ನಾಯಕನ ಎರಡನೇ ಮಗನಾಗಿದ್ದನು. 1754 ರಲ್ಲಿ ಕಸ್ತೂರಿ ರಂಗಪ್ಪ ನಾಯಕ ಮರಣ ಹೊಂದಿದ ಸಂದರ್ಭದಲ್ಲಿ ಈತನ ತಾಯಿ ಗಂಡಿಲ ಓಬವ್ವ ನಾಗತಿಯು ಜಾನಕಲ್ಲಿನಿಂದ ಭರಮಪ್ಪನ ಮಗ ‘ಚಿಕ್ಕ ಮದಕರಿ’ಯನ್ನು ಕರೆತಂದು ದುರ್ಗದಲ್ಲಿ ಪಟ್ಟಕಟ್ಟಿದಳು. ಈತ ಪಟ್ಟಾಭಿಷಿಕ್ತನಾದಾಗ ಕೇವಲ 12 ವರ್ಷದ ಬಾಲಕ.

ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲಾ ಹರಡಲು ಕಾರಣವೆನಿಸಿದವು. ಈತನ ಆಳ್ವಿಕೆಯಿಂದಾಗಿಯೆ ಚಿತ್ರದುರ್ಗ ಸಂಸ್ಥಾನವು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು. ಮುಖ್ಯವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ-ಸಾಹಸಗಳನ್ನು ಪ್ರತಿನಿಧಿಸುತ್ತವೆ. ತನ್ನ ಬದುಕಿನ ಬಹುಕಾಲ ಯುದ್ಧೋತ್ಸವಗಳಲ್ಲೆ ಭಾಗಿಯಾಗುತ್ತಿದ್ದ ಮದಕರಿಯು ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭೀಕ್ಷೆಯಿಂದ ಇಟ್ಟುಕೊಳ್ಳುವಲ್ಲಿ ವಹಿಸುತ್ತಿದ್ದ ಪಾತ್ರ ವಿಶೇಷವಾದುದು.

ಸ್ವಾಭಿಮಾನಿ, ಸಾಹಸಿ, ನಿರ್ಭೀಡೆ ನಡೆಯ ಮದಕರಿ ದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮಹತ್ವ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದವನು. ಸುತ್ತಲಿನ ಹರಪನಹಳ್ಳಿ, ರಾಯದುರ್ಗ, ಬಿದನೂರು, ಸವಣೂರು ಮುಂತಾದ ಸಂಸ್ಥಾನಿಕರೊಂದಿಗೆ ನಿರಂತರ ಕಾಳಗಗಳಲ್ಲಿ ನಿರತನಾಗಿರುತ್ತಿದ್ದ. ಹೈದರಾಲಿಯೊಂದಿಗೆ ವಿಶೇಷ ಸ್ನೇಹ ಇರಿಸಿಕೊಂಡಿದ್ದ ಮದಕರಿ ಆತನ ದಂಡಯಾತ್ರೆಗಳಲ್ಲಿ ಪಾಲ್ಗೊಂಡು ಅನೇಕ ಬಗೆಯಲ್ಲಿ ಸಹಾಯ ಮಾಡಿದ. ಕೊನೆಯಲ್ಲಿ ಹೈದರ್ ಕಣ್ಣು ದುರ್ಗದ ಮೇಲೆ ಬಿದ್ದು ಚಿತ್ರದುರ್ಗದ ಮೇಲೆಯೂ ದಂಡೆತ್ತಿ ಬಂದನು. ನಾಲ್ಕು ಬಾರಿ ದುರ್ಗದ ಮೇಲೆ ಯುದ್ಧ ಮಾಡಿದ. ಕೊನೆಯ ಯುದ್ಧ 1779 ರ ಫೆಬ್ರುವರಿಯಲ್ಲಿ ಪ್ರಾರಂಭವಾಗಿ ನಾಲ್ಕು ತಿಂಗಳುಗಳ ಕಾಲ ನಡೆದು ಮೇ ತಿಂಗಳಲ್ಲಿ ದುರ್ಗದ ಪತನದೊಂದಿಗೆ ಅಂತ್ಯವಾಯಿತು.

ರಾಜವೀರ ಮದಕರಿ ನಾಯಕನನ್ನು ಕುರಿತಂತೆ ಸಮಕಾಲೀನ ಕವಿ ಚಂದ್ದಭೀಮನ ‘ಮದಕರಿ ರಾಜೇಂದ್ರನ ದಂಡಕ’, ‘ಭೀಮಾಜಿ ಪಂತನ’, ‘ಚಿತ್ರದುರ್ಗದ ಬಖೈರು’ ಹಾಗೂ ಚಿನ್ನದಮನೆ ರಾಮಪ್ಪನ ‘ಚಿನ್ಮೂಲಾದ್ರಿಗಿರಿದುರ್ಗದಲ್ಲಿ ಆಳಿದ ಹಿಂದಿನ ಅರಸರು’ ಕೃತಿಗಳು ವಸ್ತುನಿಷ್ಠ ಮಾಹಿತಿಗಳನ್ನು ನೀಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.