ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಕರಿನಾಯಕ; ಶೇ 50ರಷ್ಟು ನೈಜತೆ ಇರಬೇಕು

ಸಿನಿಮಾದಲ್ಲಿ ನೈಜತೆ ಮರೆಮಾಚಿದರೆ ಕಾನೂನಾತ್ಮಕ ಹೋರಾಟ; ಕೆ.ಟಿ. ಪ್ರಶಾಂತ ಕುಮಾರ್
Last Updated 10 ಡಿಸೆಂಬರ್ 2019, 9:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮದಕರಿನಾಯಕ ಹೆಸರಿನಲ್ಲಿ ತೆಗೆಯಲು ಮುಂದಾಗಿರುವ ಸಿನಿಮಾದಲ್ಲಿ ಶೇ 50ರಷ್ಟಾದರೂ ನೈಜತೆ ಇರಬೇಕು’ ಎಂದು ಚಿತ್ರನಾಯಕ ವೇದಿಕೆ ಅಧ್ಯಕ್ಷ ಕೆ.ಟಿ. ಪ್ರಶಾಂತ ಕುಮಾರ್ ಒತ್ತಾಯಿಸಿದರು.

‘ಕಾದಂಬರಿ ಹಾಗೂ ಕಾಲ್ಪನಿಕ ಕಥೆ ಆಧರಿತ ಸಿನಿಮಾ ಮಾಡಲು ಚಿತ್ರದ ನಿರ್ಮಾಪಕರು, ನಿರ್ದೇಶಕರು ಮುಂದಾಗಿದ್ದಾರೆ. ನೈಜ ಇತಿಹಾಸ ಮರೆಮಾಚಿದರೆ, ಸಂಭಾಷಣೆಯಲ್ಲಿ ಅವಾಚ್ಯ, ಅಸಭ್ಯ ಶಬ್ಧಗಳನ್ನು ಬಳಸಿದರೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿನ್ಮೂಲಾದ್ರಿ ಸಂಸ್ಥಾನ ಪತನವಾದ ನಂತರದಿಂದ ಈವರೆಗೂ ಮದಕರಿನಾಯಕರ ಹೆಸರನ್ನು ಅನೇಕ ಕ್ಷೇತ್ರಗಳಲ್ಲಿ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕ ಹಾಗೂ ಅವರ ವಂಶಸ್ಥರಿಗೆ ಸಿಗಬೇಕಾದ ಗೌರವ ಸ್ಥಾನಮಾನ ಸಿಕ್ಕಿಲ್ಲ. ಅದಕ್ಕೆ ಚಿತ್ರತಂಡವೂ ಹೊರತಲ್ಲ’ ಎಂದು ದೂರಿದರು.

‘ಮದಕರಿನಾಯಕರ ಇತಿಹಾಸ ತಿಳಿಯಲು ವಂಶಸ್ಥರನ್ನು ಚಿತ್ರತಂಡ ಭೇಟಿ ಮಾಡಿ ಚರ್ಚಿಸಬಹುದಿತ್ತು. ಆದರೆ, ಈ ಕೆಲಸಕ್ಕೆ ಮುಂದಾಗದೇ ಅಗೌರವ ತೋರಿಸಿದ್ದಾರೆ. ಐತಿಹಾಸಿಕ ಘಟನಾವಳಿಗಳು ಮತ್ತು ದಾಖಲೆಗಳು ವಂಶಸ್ಥರ ಬಳಿ ಮಾತ್ರ ಇದ್ದು, ಕಥೆ ಹಾಗೂ ಕಾದಂಬರಿ ಆಧರಿತ ಚಿತ್ರ ತೆಗೆಯಲು ಹೊರಟಿರುವವರು ಎಷ್ಟರಮಟ್ಟಿಗೆ ನೈಜತೆ ಕೊಡಬಲ್ಲರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.

‘ಮದಕರಿನಾಯಕರ ಜನಪರ ಆಡಳಿತ, ಶೌರ್ಯ, ಪರಾಕ್ರಮ, ತ್ಯಾಗ ಬಲಿದಾನಕ್ಕೆ ಎಲ್ಲಿಯೂ ಧಕ್ಕೆ ಉಂಟಾಗದ ರೀತಿಯಲ್ಲಿ ಚಿತ್ರ ನಿರ್ಮಿಸಬೇಕು. ವಂಶಸ್ಥರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಬಳಸಿಕೊಳ್ಳಬೇಕು. ಸುದೀಪ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಲ್ಲ. ಸಿನಿಮಾದಲ್ಲಿ ಯಾರೇ ಅಭಿನಯಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸತ್ಯಕ್ಕೆ ಹತ್ತಿರವಾದ ಶೈಲಿಯಲ್ಲಿ ಸಿನಿಮಾ ಮೂಡಿಬರಬೇಕು’ ಎಂದು ಆಗ್ರಹಿಸಿದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಜೆ. ಓಬಳೇಶಕುಮಾರ್, ನಾಯಕ ಸಮುದಾಯದ ಮುಖಂಡರಾದ ತಿಪ್ಪೇಸ್ವಾಮಿ, ಓಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT