ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಹಣದ ಆಸೆಗೆ ಪರೀಕ್ಷೆ ಬರೆದ ವ್ಯಕ್ತಿ ಬಂಧನ

Last Updated 23 ನವೆಂಬರ್ 2020, 16:55 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಭಾನುವಾರ ನಡೆದ ಕೆಎಸ್‌ಆರ್‌ಪಿ, ಐಆರ್‌ಬಿ ಕಾನ್‌ಸ್ಟೆಬಲ್‌ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಹಣದ ಆಸೆಗೆ ಅಭ್ಯರ್ಥಿ ಬದಲಿಗೆ ಬರೆಯಲು ಬಂದಿದ್ದ ನಕಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋಕಾಕ್ ತಾಲ್ಲೂಕಿನ ಮರಡಿ ಶಿವಪುರ ಗ್ರಾಮದ ಸಿದ್ಧಾರೂಢ ಮಲ್ಲಪ್ಪ ಒಡೆಯರ್ ಬಂಧಿತ ಆರೋಪಿ. ಬಸವರಾಜ ಸಿದ್ದಪ್ಪ ಚೆನ್ನಪ್ಪ ಗೋಳ್ ಎಂಬುವರ ಬದಲಿಗೆ ಪರೀಕ್ಷೆ ಬರೆಯಲು ಚಿತ್ರದುರ್ಗಕ್ಕೆ ಬಂದಿದ್ದ. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಬಂಧಿತ ನಕಲಿ ಅಭ್ಯರ್ಥಿಗೆ ಗೋಕಾಕ್ ತಾಲ್ಲೂಕಿನ ಅಡಗಿನಾಳ್ ಗ್ರಾಮದ ಭೀಮ್ ಶೀ ಹುಲ್ಲೋಳ್, ಉದಗಟ್ಟಿ ಗ್ರಾಮದ ಲಕ್ಷ್ಮಣ್ ಪರನ್ನವರ್ ಎಂಬುವವರು ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆದು ಪಾಸಾದರೆ, ₹ 2 ಲಕ್ಷ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದಕ್ಕಾಗಿ ಪರೀಕ್ಷೆ ಬರೆಯಲು ಬಂದಿದ್ದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹೇಳಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

‘ಅಧಿಕಾರಿಗಳು ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅನುಮಾನಸ್ಪದವಾಗಿ ಕಂಡ ಈ ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ. ಪರೀಕ್ಷಾ ಪ್ರವೇಶ ಪತ್ರ, ಅಭ್ಯರ್ಥಿ ಭಾವಚಿತ್ರ, ಆಧಾರ್ ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆಗಳು ಒಂದಕ್ಕೊಂದು ತಾಳೆಯಾಗಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಭಾವಚಿತ್ರದಲ್ಲಿ ಬದಲಾವಣೆ ಕಂಡಿದ್ದರಿಂದ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಪರೀಕ್ಷಾ ಉಸ್ತುವಾರಿ ಅಧಿಕಾರಿ ಆರ್.ವಿ.ಶ್ರೀಧರ್ ಅವರ ಗಮನಕ್ಕೆ ಮೇಲ್ವಿಚಾರಕರು ತಂದಿದ್ದಾರೆ. ಕೂಲಂಕಷವಾಗಿ ಮತ್ತೊಮ್ಮೆ ವಿಚಾರಿಸಿದಾಗ ನಕಲಿ ಅಭ್ಯರ್ಥಿ ಎಂಬುದಾಗಿ ತಿಳಿದ ಕಾರಣ ಪೊಲೀಸರು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪರೀಕ್ಷಾ ಅವ್ಯವಹಾರ, ವಂಚನೆ, ಅಭ್ಯರ್ಥಿ ಹೆಸರಿನಲ್ಲಿ ಕೋಟಾ ರುಜು (ಫೋರ್ಜರಿ ಸಹಿ) ಸಂಬಂಧ ವಿವಿಧ ಐಪಿಸಿ ಕಲಂನಡಿ ಹಾಗೂ ರಾಜ್ಯ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ನಗರಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT