ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿಯಿಂದ ದಡ್ಲು ಮಾರಮ್ಮನಿಗೆ ಬೀಳ್ಕೊಡುಗೆ

Published 1 ಫೆಬ್ರುವರಿ 2024, 15:42 IST
Last Updated 1 ಫೆಬ್ರುವರಿ 2024, 15:42 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಗ್ರಾಮದೇವತೆ ದಡ್ಲು ಮಾರಮ್ಮದೇವಿ ಜಾತ್ರೆ ಪಟ್ಟಣದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದು, ಗುರುವಾರ ದೇವಿಯನ್ನು ಬೀಳ್ಕೊಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು.

ದಡ್ಲು ಮಾರಮ್ಮದೇವಿ ನಾಯಕನಹಟ್ಟಿ ಗ್ರಾಮ ದೇವತೆಯಾಗಿದ್ದು, ಪ್ರಸ್ತುತ ಹೋಬಳಿಯ ಎನ್.ದೇವರಹಳ್ಳಿಯಲ್ಲಿ ನೆಲೆಸಿದ್ದಾಳೆ. ‌ನಾಲ್ಕು ವರ್ಷಗಳ ಹಿಂದೆ ಪಟ್ಟಣಕ್ಕೆ ಕರೆತಂದು ಜಾತ್ರೆ ಆಚರಿಸಲಾಗಿತ್ತು. ಪ್ರಸಕ್ತ ವರ್ಷದ ಶೂನ್ಯಮಾಸದ ನಿಮಿತ್ತ ಮೂರು ದಿನಗಳ ಹಿಂದೆ ನಾಯಕನಹಟ್ಟಿ ದೈವಸ್ಥರು ದೇವಿಯನ್ನು ಗ್ರಾಮಕ್ಕೆ ಕರೆತಂದು ಭವ್ಯವಾಗಿ ಜಾತ್ರೆಯನ್ನು ನೆರವೇರಿಸಿದರು.

ಕೋಟೆ ಬಡಾವಣೆಯಲ್ಲಿರುವ ದೊರೆಗಳ ಮನೆ, ದೂಪದ ಸೇವೆಯವರ ಮನೆ ಹಾಗೂ ಗೊಂಚಿಗಾರರ ಮನೆಗೆ ದೇವಿಯನ್ನು ಹೊತ್ತು ತಂದು ಉಡಿ ಅಕ್ಕಿ ತುಂಬಿ ಪೂಜೆ ನೆರವೇರಿಸಲಾಯಿತು. ಮನೆ ಮಗಳು ತವರು ಮನೆಯಿಂದ ತೆರಳುವಾಗ ಆಗುವ ಸಂಕಟ, ದುಃಖ ಹೇಗಿರುತ್ತದಯೋ ಹಾಗೇ ದೇವಿಯನ್ನು ಹೊತ್ತ ಪೂಜಾರಿ ಭಾರದ ಹೆಜ್ಜೆಗಳನ್ನಿಡುತ್ತಾ ನಿಧಾನಕ್ಕೆ ಸಾಗಿದರು. ನಂತರ ಹಟ್ಟಿಮಲ್ಲಪ್ಪನಾಯಕ ವೃತ್ತಕ್ಕೆ ಬಂದು ಜೋರಾಗಿ ಹೊರಟಿತು. ತೇರುಬೀದಿ, ವಾಲ್ಮೀಕಿವೃತ್ತ, ಜೆ.ಸಿ.ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಎನ್.ಮಹದೇವಪುರ ಗ್ರಾಮಕ್ಕೆ ತೆರಳಲಾಯಿತು.

ಎನ್.ಮಹದೇವಪುರಕ್ಕೆ ಕಾಲ್ನಡಿಗೆಯಲ್ಲಿ ತೆರಳಿ, ಅಲ್ಲಿ ಪೂಜೆ ನೆರವೇರಿಸಿಕೊಂಡು ಎನ್.ಗೌರಿಪುರ ಮಾರ್ಗವಾಗಿ ಎನ್.ದೇವರಹಳ್ಳಿ ಗ್ರಾಮಕ್ಕೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ರಸ್ತೆಗೆ ನೀರು ಹಾಕಿ ದೇವಿಗೆ ಕೈ ಮುಗಿದರು. ಜಾನಪದ ವಾದ್ಯಗಳಾದ ಉರುಮೆ, ತಪ್ಪಡಿಗಳ ಸದ್ದಿಗೆ ಸಾವಿರಾರು ಯುವಕರು ಹೆಜ್ಜೆಹಾಕಿದರು. ದಾರಿಯುದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT