ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು | ಬರದಲ್ಲೂ ಲಾಭ ನೀಡಿದ ಚಂಡು ಹೂ

Published 25 ಅಕ್ಟೋಬರ್ 2023, 5:42 IST
Last Updated 25 ಅಕ್ಟೋಬರ್ 2023, 5:42 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಮಳೆ ಕೈಕೊಟ್ಟಿರುವುದು, ಅಸಮರ್ಪಕ ವಿದ್ಯುತ್‌ ಪೂರೈಕೆ ಮತ್ತಿತರ ಸಮಸ್ಯೆಗಳ ನಡುವೆಯೂ ಸಮೀಪದ ಪಾಡಿಗಟ್ಟೆ ಗ್ರಾಮದ ರೈತ ಹೊರಕೇರಪ್ಪ ಅಡಿಕೆಯ ನಡುವೆ ಅಂತರ ಬೆಳೆಯಾಗಿ ಚಂಡು ಹೂ ಹಾಗೂ ಮೆಣಸಿನಕಾಯಿ ಬೆಳೆದು ಲಾಭ ಗಳಿಸಿದ್ದಾರೆ.

ಇವರಿಗೆ ಮೂರು ಎಕರೆ ಜಮೀನಿದ್ದು, ಅದರಲ್ಲಿ 1.18 ಎಕರೆ ಪ್ರದೇಶದಲ್ಲಿ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಈ ಸಸಿಗಳೊಂದಿಗೆ ಅಂತರ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ. ಆರಂಭದ ವರ್ಷಗಳಲ್ಲಿ ಟೊಮೆಟೊ, ಮೆಣಸಿನಕಾಯಿ, ಬದನೆ ಮತ್ತಿತರ ತರಕಾರಿ ಬೆಳೆಯುತ್ತಿದ್ದರು. ಪ್ರಸಕ್ತ ವರ್ಷ ಚೆಂಡು ಹೂ ಬೆಳೆದಿದ್ದಾರೆ.

ಅಂತರ ಬೆಳೆಯಾಗಿ 3,000 ‘ಎಲ್ಲೋ ಗೋಲ್ಡ್‌’ ಚೆಂಡು ಹೂ ಸಸಿಗಳನ್ನು ನಾಟಿ ಮಾಡಲಾಗಿದೆ. ಇದುವರೆಗೆ ಸಸಿ, ನಾಟಿ, ಬೇಸಾಯ, ಮೇಲು ಗೊಬ್ಬರಕ್ಕಾಗಿ ₹ 12,000 ಖರ್ಚು ಮಾಡಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಮೊದಲ ಕೊಯ್ಲು ಮಾಡಿದ್ದು, ಪ್ರತಿ ಕೆ.ಜಿ.ಗೆ ₹ 60ರಂತೆ, ಮೂರು ಕ್ವಿಂಟಲ್‌ನಷ್ಟು ಹೂ ಮಾರಾಟ ಮಾಡಿದ್ದಾರೆ. ಇದರಿಂದ ₹ 18,000 ಆದಾಯ ಬಂದಿದೆ.

‘ದೀಪಾವಳಿ ಹಬ್ಬದವರೆಗೂ ಹೂ ಸಿಗುತ್ತದೆ. ಸುಮಾರು 15ರಿಂದ 20 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಇದೆ. ಕೊಯ್ಲು ಮುಗಿಯುವ ವೇಳೆಗೆ ಸುಮಾರು 23ರಿಂದ 25 ಕ್ವಿಂಟಲ್‌ನಷ್ಟು ಇಳುವರಿ ಸಿಗುವ ಸಾಧ್ಯತೆ ಇದೆ. ಅಂದಾಜು ₹ 75,000 ಆದಾಯದ ನಿರೀಕ್ಷೆ ಇದೆ’ ಎನ್ನುತ್ತಾರೆ   ಹೊರಕೇರಪ್ಪ.

ಮೆಣಸಿನ ಕಾಯಿಯಲ್ಲೂ ಆದಾಯ

ಜಮೀನಿನ ಮತ್ತೊಂದೆಡೆ ಅಡಿಕೆ ಮರಗಳ ನಡುವೆ ‘ಸೌಂದರ್ಯ’ ತಳಿಯ ಮೆಣಸಿನಕಾಯಿ ಸಸಿ ನಾಟಿ ಮಾಡಲಾಗಿದೆ.

‘ಸಸಿ, ಬೇಸಾಯ, ನಾಟಿ, ಕಳೆ ತೆಗೆಯಲು ಹಾಗೂ ಮೇಲು ಗೊಬ್ಬರಕ್ಕಾಗಿ ಈವರೆಗೆ ಅಂದಾಜು ₹ 16,000 ಖರ್ಚು ಮಾಡಿದ್ದೇವೆ. ಹದಿನೈದು ದಿನಗಳಿಂದ ಕೊಯ್ಲು ಶುರುವಾಗಿದೆ. ಈವರೆಗೆ ₹ 15ರಂತೆ 15 ಕ್ವಿಂಟಲ್‌ ಮಾರಾಟ ಮಾಡಿದ್ದೇವೆ. ಅಲ್ಲದೆ, ಸ್ಥಳೀಯವಾಗಿ ನಡೆಯುವ ಸಂತೆಗಳಿಗೂ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದೇವೆ. ಈವರೆಗೆ ₹ 31,000 ಮೌಲ್ಯದ ಬೆಳೆ ಬಂದಿದೆ. ಈ ವಾರ ಸುಮಾರು 7 ಕ್ವಿಂಟಲ್‌ನಷ್ಟು ಕಾಯಿ ಗಿಡದಲ್ಲಿದ್ದು ಅದನ್ನು ಮಾರಾಟ ಮಾಡಬೇಕು. ಸರಿಯಾದ ಸಮಯಕ್ಕೆ ನೀರು ಕೊಟ್ಟು, ಗೊಬ್ಬರ ಹಾಕಿದಲ್ಲಿ, ಇನ್ನೂ 15 ಕ್ವಿಂಟಲ್‌ನಷ್ಟು ಕಾಯಿ ಸಿಗುವ ನಿರೀಕ್ಷೆ ಇದ್ದು, ₹ 50,000 ಆದಾಯ ಬರುವ ನಿರೀಕ್ಷೆ ಇದೆ’ ಎಂದು ವಿಶ್ವಾಸದಿಂದ ಹೇಳಿದರು.

ಮಳೆ ಕೊರತೆ, ವಿದ್ಯುತ್‌ ಸಮಸ್ಯೆ

‘ಮಳೆ ಬಾರದ್ದರಿಂದ ಕೊಳವೆ ಬಾವಿಯ ನೀರು ಎಷ್ಟು ದಿನಗಳವರೆಗೆ ಬರುವುದೋ ಎಂಬ ಆತಂಕ ಇದೆ. ಆದರೂ, ಕೈಕಟ್ಟಿ ಕೂರುವ ಬದಲು ಕೃಷಿ ಮಾಡುತ್ತಿರುವ ತೃಪ್ತಿ ನಮಗಿದೆ. ಪತ್ನಿ ಸರೋಜಮ್ಮ, ಮಗ ಅಜಯ್‌, ತಂದೆ ರಂಗಪ್ಪ ಅವರು ಕೃಷಿಗೆ ಕೈಜೋಡಿಸಿರುವುದರಿಂದ ಕೂಲಿ ವೆಚ್ಚ ಕಡಿಮೆಯಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.

ಚಿಕ್ಕಜಾಜೂರು ಸಮೀಪದ ಪಾಡಿಗಟ್ಟೆ ಗ್ರಾಮದ ರೈತ ಹೊರಕೇರಪ್ಪ ಅವರ ಜಮೀನಿನಲ್ಲಿ ಬೆಳೆದ ಚೆಂಡು ಹೂವನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ಕಳುಹಿಸಲು ರಾಶಿ ಮಾಡಿರುವುದು
ಚಿಕ್ಕಜಾಜೂರು ಸಮೀಪದ ಪಾಡಿಗಟ್ಟೆ ಗ್ರಾಮದ ರೈತ ಹೊರಕೇರಪ್ಪ ಅವರ ಜಮೀನಿನಲ್ಲಿ ಬೆಳೆದ ಚೆಂಡು ಹೂವನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ಕಳುಹಿಸಲು ರಾಶಿ ಮಾಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT