ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರ ಸಂಘರ್ಷದ ಕೇಂದ್ರವಲ್ಲ: ಶರಣರು

ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ 19 ಜೋಡಿ
Last Updated 5 ಏಪ್ರಿಲ್ 2021, 10:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಸಾರ ಸದಾ ಸಂಘರ್ಷದ ಕೇಂದ್ರವಾಗಬಾರದು. ಬದುಕನ್ನು ಮುತ್ತಾಗಿಸುವ ಪ್ರಯತ್ನ ಸಂಸಾರದಲ್ಲಿ ಇರಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನವದಂಪತಿಗಳಿಗೆ ಸಲಹೆ ನೀಡಿದರು.

ಮುರುಘಾ ಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ 31ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಂಪತಿಗಳನ್ನು ಹರಸಿ ಅವರು ಮಾತನಾಡಿದರು. 19 ಜೋಡಿ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

‘ದಾಂಪತ್ಯದಲ್ಲಿ ಪ್ರೀತಿ–ಪ್ರೇಮವನ್ನು ಹೆಚ್ಚಿಸುವ ಸಂವಹನದ ಅಗತ್ಯವಿದೆ. ಈ ಮೂಲಕ ಸಂಸಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಹೃದಯವನ್ನು ಹಗುರ ಮಾಡುವ ನುಡಿಗಳು ಬೇಕಿದೆ. ವಿವಾಹದಲ್ಲಿ ವ್ಯವಹಾರ ಬಂದಾಗ ಮಾತ್ರ ವಿವಾದಕ್ಕೆ ಅವಕಾಶವಾಗುತ್ತದೆ’ ಎಂದು ಹೇಳಿದರು.

‘ಪುರುಷ ಹಾಗೂ ಮಹಿಳೆ ಸಮಾನರು ಎಂಬುದನ್ನು ಬಸವಣ್ಣ ಪ್ರತಿಪಾದಿಸಿದ್ದಾರೆ. ಬುದ್ಧ, ಅಂಬೇಡ್ಕರ್‌, ಪೈಗಂಬರ್‌ ಸೇರಿ ಅನೇಕರು ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಸತಿ–ಪತಿಗಳಿಬ್ಬರು ಸತ್ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದರು.

ಚನ್ನಗಿರಿಯ ಹಾಲಸ್ವಾಮಿ ವಿರಕ್ತಮಠದ ಬಸವ ಜಯಚಂದ್ರ ಸ್ವಾಮೀಜಿ, ‘ಭಕ್ತಿ ಇಲ್ಲವಾದರೆ ಶ್ರದ್ಧೆ ಬರಲು ಸಾಧ್ಯವಿಲ್ಲ. ಹೀಗಾಗಿ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡುವ ಅಗತ್ಯವಿದೆ. ಮುರುಘಾ ಮಠ ಇಂತಹ ಸತ್ಕಾರ್ಯದಲ್ಲಿ ತೊಡಗಿಕೊಂಡಿದೆ. ಎಷ್ಟೇ ಜನ ಬಂದರೂ ವಿವಾಹ ನಡೆಯುತ್ತದೆ. ನಿರಂತರ ಅನ್ನದಾಸೋಹ ನಡೆಯುತ್ತದೆ’ ಎಂದು ಹೇಳಿದರು.

ದಾವಣಗೆರೆ ತಹಶೀಲ್ದಾರ್ ಬಿ.ಎನ್. ಗಿರೀಶ್, ‘ಅದ್ದೂರಿಯಾಗಿ ನಡೆದ ಮದುವೆಗಳು ಕೂಡ ಮುರಿದು ಬೀಳುತ್ತಿವೆ. ಪತಿ–ಪತ್ನಿಯ ನಡುವಿನ ಸ್ವಪ್ರತಿಷ್ಠೆ ಇದಕ್ಕೆ ಕಾರಣವಾಗಿದೆ. ಇದರಿಂದ ಹಲವು ಸಂಸಾರಗಳು ಹಾಳಾಗಿವೆ. ಗಂಡ–ಹೆಂಡತಿ ಇರುವುದಷ್ಟೇ ಕುಟುಂಬವಲ್ಲ. ಅಲ್ಲಿ ಅಪ್ಪ–ಅಮ್ಮ, ಅಜ್ಜ–ಅಜ್ಜಿಗೂ ಸ್ಥಾನವಿದೆ. ಆಗ ಬಾಂಧವ್ಯವೂ ಬೆಸೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಗುತ್ತಿನಾಡು ಪ್ರಕಾಶ್, ದಾಸೋಹಿಗಳಾದ ಯಂಗಮ್ಮ, ಎಂ.ಆರ್. ಗೋವಿಂದರೆಡ್ಡಿ ಇದ್ದರು.

***

ಕೃಷಿ ಕೆಲಸದ ಬಗ್ಗೆ ಹೆಮ್ಮೆ ಇರಬೇಕು. ರೈತರು ದುಡಿದರೆ ಇತರರಿಗೆ ಆಹಾರ ಸಿಗುತ್ತದೆ. ಜೀವನದಲ್ಲಿ ಆರೋಗ್ಯವಾಗಿ ಇರುವುದೇ ಶ್ರೀಮಂತಿಕೆ.

–ಬಿ.ಎನ್. ಗಿರೀಶ್, ತಹಶೀಲ್ದಾರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT