ಗುರುವಾರ , ಆಗಸ್ಟ್ 5, 2021
23 °C
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ಜೋಡಿ, ಆಷಾಢದಲ್ಲಿ ನಡೆದ ಶುಭಸಮಾರಂಭ

ಲಾಕ್‌ಡೌನ್‌ ನಡುವೆಯೂ ಚಿತ್ರದುರ್ಗದಲ್ಲಿ ಸಾಮೂಹಿಕ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಲಾಕ್‌ಡೌನ್‌ ನಡುವೆಯೂ ಮುರುಘಾ ಮಠದಲ್ಲಿ ಭಾನುವಾರ ಸಾಮೂಹಿಕ ವಿವಾಹ ನಡೆಯಿತು. ಐದು ಜೋಡಿ ವಧು–ವರರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಆಷಾಢ ಮಾಸದಲ್ಲಿ ಮದುವೆಯಾದ ನವ ದಂಪತಿಯನ್ನು ಶಿವಮೂರ್ತಿ ಮುರುಘಾ ಶರಣರು ಹರಸಿದರು.

ಅನುಭವ ಮಂಟಪದ ವಿಶಾಲ ಸಭಾಂಗಣದಲ್ಲಿ 35 ಜನರು ಮಾತ್ರ ಪಾಲ್ಗೊಂಡಿದ್ದರು. ಪ್ರತಿಯೊಬ್ಬರು ಅಂತರ ಕಾಯ್ದುಕೊಂಡು ಆಸೀನರಾಗಿದ್ದರು. ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಂಡು ಮಾಸ್ಕ್‌ ಧರಿಸಿದ್ದರು. ವೈಶ್ಯ ಸಮುದಾಯದ ವರ ಹಾಗೂ ಭೋವಿ ಸಮುದಾಯದ ವಧು ಅಂತರ್ಜಾತಿ ವಿವಾಹವಾಗಿದ್ದು ಗಮನ ಸೆಳೆಯಿತು.

30ನೇ ವರ್ಷದ ಏಳನೇ ತಿಂಗಳ ಸಾಮೂಹಿಕ ವಿವಾಹದ ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಗುರುಪೂರ್ಣಿಮೆ ಹಾಗೂ ಚಂದ್ರಗ್ರಹಣ ಒಂದೇ ದಿನ ಇವೆ. ಇಂತಹ ಸಮಯದಲ್ಲಿ ವಿವಾಹವಾಗುವುದು ಅಮಂಗಲವಲ್ಲ, ಶುಭಮಂಗಲ. ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ನಿಸರ್ಗ ಸಹಜ ಪ್ರಕ್ರಿಯೆ. ಇವು ಆಗಾಗ ಸಂಭವಿಸುತ್ತವೆ. ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ, ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ’ ಎಂದು ಅಭಿಪ್ರಾಯಪಟ್ಟರು.

‘ಬುದ್ಧ, ಬಸವಣ್ಣ, ದಾಸರು, ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಅಸಮಾನತೆಯನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ. ಆದರೂ, ಆಧುನಿಕ ಮಾನವನನ್ನು ಎಲ್ಲಿಲ್ಲದ ಅಸಮಾನತೆ ಕಾಡುತ್ತಿದೆ. ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಮಾನವ ಬದುಕನ್ನು ಕಾಡುವ ಗ್ರಹಣ’ ಎಂದು ಹೇಳಿದರು.

‘ಶಾಂತಿ ಕದಡುವ ಕೆಲಸವನ್ನು ಚೀನಾ ಮಾಡುತ್ತಿದೆ. ಭಾರತ ಶಾಂತಿಗೆ ಹೆಸರಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗಡಿಗೆ ತೆರಳಿ ಸೈನಿಕರಿಗೆ ಧೈರ್ಯ ತುಂಬಿದ್ದಾರೆ. ಭಾರತದ ಮೇಲೆ ವಿನಾ ಕಾರಣ ದಾಳಿ ನಡೆಸುತ್ತಿರುವ ಚೀನಾದ ಕ್ರಮವನ್ನು ಖಂಡಿಸಬೇಕಿದೆ’ ಎಂದು ಹೇಳಿದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಸಿ.ಎಂ.ಚಂದ್ರಪ್ಪ, ಜ್ಞಾನಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು