ಹೊಳಲ್ಕೆರೆ: ಬುಧವಾರ ಬೆಳಿಗ್ಗೆಯಿಂದ ಕಾಣೆಯಾಗಿ, ಪಾಲಕರಲ್ಲಿ ಆತಂಕ ಮೂಡಿಸಿದ್ದ ಪಟ್ಟಣದ ಖಾಸಗಿ ವಸತಿ ಶಾಲೆಯೊಂದರ 10ನೇ ತರಗತಿಯ 6 ಜನ ವಿದ್ಯಾರ್ಥಿಗಳು ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಬುಧವಾರ ಬೆಳಿಗ್ಗೆ 5.30ಕ್ಕೆ ವಿದ್ಯಾರ್ಥಿಗಳು ಯಾರಿಗೂ ತಿಳಿಸದೇ ಶಾಲೆಯ ಹಾಸ್ಟೆಲ್‌ನಿಂದ ಹೋಗಿದ್ದರಿಂದ ಪಾಲಕರು, ಶಿಕ್ಷಕರು, ಶಾಲೆಯ ಆಡಳಿತ ಮಂಡಳಿ ಸದಸ್ಯರಲ್ಲಿ ಆತಂಕ ಉಂಟಾಗಿತ್ತು.
ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಊರುಗಳಿಗೆ ತೆರಳಿ, ಸೋಮವಾರ ವಾಪಸ್ಸಾಗಿದ್ದರು. ಆದರೆ, ಬುಧವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು.
‘ನಾನು ಮತ್ತು ನನ್ನ ಪತಿ ಶಾಲೆಯಲ್ಲಿಯೇ ಉಳಿದುಕೊಳ್ಳುತ್ತೇವೆ. ಮಂಗಳವಾರ ರಾತ್ರಿ ಇಬ್ಬರೂ ಶಾಲೆಯಲ್ಲಿಯೇ ಇದ್ದೆವು. ವಿದ್ಯಾರ್ಥಿಗಳು ಯಾರಿಗೂ ತಿಳಿಸದೆ ತೆರಳಿದ್ದರು’ ಎಂದು ಪ್ರಾಂಶುಪಾಲರಾದ ಶಶಿಕಲಾ ತಿಳಿಸಿದರು.
‘ನನ್ನ ಮಗನಿಗೆ ಶಾಲೆಯಲ್ಲಿ ಅಥವಾ ಹಾಸ್ಟೆಲ್‌ನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮನೆಗೆ ಬಂದಾಗ ಖುಷಿಯಾಗಿಯೇ ಇರುತ್ತಿದ್ದ. ಶಾಲೆ ಚೆನ್ನಾಗಿದೆ ಎಂದು ಹೇಳುತ್ತಿದ್ದ. ಕಳೆದ ವಾರ ಮೂರು ದಿನ ರಜೆ ಇದ್ದುದರಿಂದ ಮನೆಗೆ ಬಂದಿದ್ದ. ಸೋಮವಾರವೂ ಖುಷಿಯಾಗಿಯೇ ಶಾಲೆಗೆ ಹೋಗಿದ್ದ. ಆದರೂ ಶಾಲೆ ಬಿಟ್ಟು ಏಕೆ ಹೊರಗೆ ಹೋದ ಎಂದು ಗೊತ್ತಾಗುತ್ತಿಲ್ಲ’ ಎಂದು ಪಾಲಕರೊಬ್ಬರು ತಿಳಿಸಿದರು.
ವಿದ್ಯಾರ್ಥಿಗಳು ಕಾಣೆಯಾಗಿರುವ ವಿಷಯ ತಿಳಿಯುತ್ತಲೇ ಕಾರ್ಯೋನ್ಮುಖರಾದ ಪೊಲೀಸರು ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಶೋಧ ಕಾರ್ಯ ಕೈಗೊಂಡರು. ಸಂಜೆಯ ವೇಳೆಗೆ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಮನೆಯೊಂದರಲ್ಲಿ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ವಿದ್ಯಾರ್ಥಿಯೊಬ್ಬ ಬೆಂಗಳೂರಿನಲ್ಲಿದ್ದ ತನ್ನ ಸಂಬಂಧಿಯ ಮನೆಗೆ ಎಲ್ಲರನ್ನೂ ಕರೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.