ಮಂಗಳವಾರ, ಮಾರ್ಚ್ 28, 2023
34 °C
27ರಂದು ನರೇಂದ್ರ ಮೋದಿ ಜತೆ ಸಂವಾದ

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ‘ಪರೀಕ್ಷಾ ಪೇ’ ಚರ್ಚೆಗೆ ಮಿಥುನ್ ನಾಯ್ಕ್ ಆಯ್ಕೆ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಹನುಮಂತ ದೇವರಕಣಿವೆಯ ಅಲೆಮಾರಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಿಥುನ್ ಬಿ. ನಾಯ್ಕ್ ಜ.27ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯುವ ‘ಪರೀಕ್ಷಾ ಪೇ’ ಚರ್ಚೆ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ.

ತಾಲ್ಲೂಕಿನ ತುಪ್ಪದಹಳ್ಳಿಯ ಮಿಥುನ್ ಅವರ ತಂದೆ ನಿಧನರಾಗಿದ್ದಾರೆ. ತಾಯಿ ಮೂಗಿಯಾಗಿದ್ದು, ಕಡು ಬಡತನದ ಕುಟುಂಬಕ್ಕೆ ಸೇರಿರುವ ಈ ವಿದ್ಯಾರ್ಥಿ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದಕ್ಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಂತಸಗೊಂಡಿದ್ದಾರೆ.

ಕೇಂದ್ರ ಸರ್ಕಾರವು ವಿದ್ಯಾರ್ಥಿ ಗಳಿಂದ ‘ನಿನಗೆ ಗೊತ್ತಿರುವ ಸ್ವಾತಂತ್ರ್ಯ ಹೋರಾಟಗಾರ’ ಎಂಬ ವಿಷಯದ ಬಗ್ಗೆ ಅಭಿಪ್ರಾಯ ಆಹ್ವಾನಿಸಿತ್ತು. ರಾಜ್ಯದ 65,558 ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಭಿಪ್ರಾಯ ಬರೆದು ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದರು. 15,829 ಶಿಕ್ಷಕರು, 5,751 ಪೋಷಕರು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ತಾಲ್ಲೂಕಿನ ಹನುಮಂತದೇವರ ಕಣಿವೆಯ ಮೊರಾರ್ಜಿ ದೇಸಾಯಿ ಶಾಲೆಯ ಮಿಥುನ್ ಬಿ. ನಾಯ್ಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆರ್. ಪ್ರಕೃತಿ ಹಾಗೂ ಇದೇ ಶಾಲೆಯ ಶಿಕ್ಷಕಿ ಎಂ.ಎಸ್. ವರ್ಧಿನಿ ‘ಪರೀಕ್ಷಾ ಪೇ’ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಜ.26ರಂದು ನವದೆಹಲಿಯಲ್ಲಿ ರಾಜಪಥದಲ್ಲಿ ನಡೆಯುವ ಗಣ ರಾಜ್ಯೋತ್ಸವ ಪರೇಡ್ ವೀಕ್ಷಿಸಲು ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ಜ.27ರಂದು ನರೇಂದ್ರ ಮೋದಿ ಅವರೊಂದಿಗೆ ನಡೆಯುವ ‘ಪರೀಕ್ಷಾ ಪೇ’ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

‘ಬಡ ಕುಟುಂಬದ ವಿದ್ಯಾರ್ಥಿಯೊಬ್ಬ ಉನ್ನತ ಸಾಧನೆ ಮಾಡಿರುವುದು ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಇಂತಹ ಅದ್ಬುತ ಪ್ರತಿಭೆ ಇರುವುದು ನಮ್ಮ ಶಾಲೆಯ ಹೆಮ್ಮೆ’ ಎಂದು ಪ್ರಾಂಶುಪಾಲ ಶಿವಮೂರ್ತಿ ನಾಯ್ಕ್ ಸಂತಸ ವ್ಯಕ್ತಪಡಿಸಿದ್ದಾರೆ.

  ದೇಶದ ಹೆಮ್ಮೆಯ ಪ್ರಧಾನಿಗಳೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳುತ್ತಿರು ವುದು ನನ್ನ ಜೀವನದ ಅಮೂಲ್ಯ ಕ್ಷಣವಾಗಲಿದೆ. ಅವಕಾಶ ಸಿಕ್ಕಿದರೆ ಪರೀಕ್ಷೆ ಎದುರಿಸುವ ಸವಾಲುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವೆ.

-ಮಿಥುನ್ ಜಿ.ನಾಯ್ಕ್, ವಿದ್ಯಾರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು