ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜು ಸ್ಥಳಾಂತರಕ್ಕೆ ವಿರೋಧ: ಪಾದಯಾತ್ರೆಗೆ ತಡೆ, ಶಾಸಕ ಬಂಧನ

ತುರುವನೂರು ಪದವಿ ಕಾಲೇಜು ಸ್ಥಳಾಂತರ ವಿರೋಧಿಸಿ ಬೆಂಗಳೂರಿಗೆ ಪಾದಯಾತ್ರೆ
Last Updated 10 ಆಗಸ್ಟ್ 2020, 14:04 IST
ಅಕ್ಷರ ಗಾತ್ರ

ಚಿತ್ರದುರ್ಗ/ನಾಯಕಹಟ್ಟಿ: ತಾಲ್ಲೂಕಿನ ತುರುವನೂರು ಸರ್ಕಾರಿ ಪದವಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರಿಸಿದ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದ ಶಾಸಕ ಟಿ.ರಘುಮೂರ್ತಿ ಸೇರಿ 60ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ತುರುವನೂರು ಹೊರಭಾಗದಲ್ಲಿ ಹೊರಟಿದ್ದ ಪಾದಯಾತ್ರೆಯನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂಬ ಆಕ್ರೋಶವೂ ವ್ಯಕ್ತವಾಯಿತು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮೈದಾನಕ್ಕೆ ಕರೆತಂದು ಬಿಡುಗಡೆ ಮಾಡಲಾಯಿತು.

ಕಾಲೇಜು ಸ್ಥಳಾಂತರ ವಿರೋಧಿಸಿ ಶಾಸಕ ರಘುಮೂರ್ತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಆ.6ರಿಂದ ಧರಣಿ ನಡೆಯಿತು. ಮೂರು ದಿನಗಳ ಬಳಿಕ ಹೋರಾಟವನ್ನು ತೀವ್ರಗೊಳಿಸಲು ಮುಂದಾದ ಶಾಸಕರು, ಬೆಂಗಳೂರಿಗೆ ಪಾದಯಾತ್ರೆಗೆ ಹೊರಟಿದ್ದರು. ತುರುವನೂರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದ್ದರು.

ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಕಾಲೇಜು ಆರಂಭವಾಗಿ ನಾಲ್ಕೈದು ವರ್ಷದಲ್ಲಿ ಸ್ಥಳಾಂತರ ಮಾಡಿದರೆ ಹಿಂದುಳಿದ ಜಿಲ್ಲೆಗೆ ಅನ್ಯಾಯವಾಗುತ್ತದೆ. ಸಕಾಲಕ್ಕೆ ಮಳೆ ಬಾರದೇ ನೀರಾವರಿ ಸೌಲಭ್ಯವಿಲ್ಲದೇ ಜನರು ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರ ಎನ್ನುವುದಕ್ಕಾಗಿ ಕಾಲೇಜನ್ನು ಬೇರಡೆ ಸ್ಥಳಾಂತರಿಸಲು ಮುಂದಾಗಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಲೇಜು ಕಟ್ಟಡಕ್ಕೆ ₹ 50ಲಕ್ಷ ಪಾವತಿಸಿ ಖಾಸಗಿ ಭೂಮಿ ಖರೀದಿಸಲಾಗಿದೆ. ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. 57 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಆರು ಉಪನ್ಯಾಸಕರಿದ್ದಾರೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಭಗೀರಥ ಪೀಠದ ಪ್ರಸನ್ನನಂದಪುರಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇದ್ದರು.

ಹೋರಾಟ ನಿಲ್ಲದು: ರಘುಮೂರ್ತಿ

ಪಾದಯಾತ್ರೆ ತಡೆದು, ಬಂಧಿಸಿದಾಕ್ಷಣ ಹೋರಾಟವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಬೆಂಗಳೂರಿನ ವಿಧಾನಸೌಧದ ಮುಂಭಾಗದ ಗಾಂಧಿ ಪ್ರತಿಮೆಯ ಎದುರು ಧರಣಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.

ಬಿಡುಗಡೆಗೊಂಡ ಬಳಿಕ ಮಾತನಾಡಿದ ಅವರು, ‘ಇದು ಸಾಂಕೇತಿಕ ಹೋರಾಟವಲ್ಲ. ಕಾಲೇಜು ಉಳಿಸಿಕೊಳ್ಳುವುದು ನಮ್ಮ ಗುರಿ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಸಿದ್ದರಾಮಯ್ಯ ಟ್ವೀಟ್‌

ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರಿಸಿದ ಆದೇಶ ಖಂಡಿಸಿ ವಿರೋಧ ಪಕ್ಷದ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಕಾಲೇಜನ್ನು ಸ್ಥಳಾಂತರಿಸುವುದು ಕ್ಷುಲ್ಲಕ ರಾಜಕಾರಣ. ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಸಜ್ಜಾಗಿದ್ದಾರೆ. ಈ ಹಂತದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದು ದುಷ್ಟತನ. ಮುಖ್ಯಮಂತ್ರಿ ಕೂಡಲೇ ಮಧ್ಯಪ್ರವೇಶಿಸಿ ಸ್ಥಳಾಂತರ ಆದೇಶ ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ಸ್ಥಳಾಂತರ ಆದೇಶ ರದ್ದುಪಡಿಸಿ’

ಪದವಿ ಕಾಲೇಜು ಸ್ಥಳಾಂತರ ಆದೇಶವನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಒತ್ತಾಯಿಸಿದ್ದಾರೆ.

‘ತುರುವನೂರು ಇತಿಹಾಸ ಪ್ರಸಿದ್ಧ ಸ್ಥಳ. ಸ್ವಾತಂತ್ರ್ಯ ಹೋರಾಟದಲ್ಲಿ ಈ ಊರಿನ ಕೊಡಗೆ ಅಪಾರ. ಕಾಲೇಜು ಕಿತ್ತುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಗಾಂಧೀಜಿ ಅವರಿಗೆ ಅನ್ಯಾಯ ಮಾಡುತ್ತಿದೆ. ಶಾಸಕರು ಐದು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸ್ಪಂದಿಸದ ಸರ್ಕಾರದ ನಡೆ ಖಂಡನೀಯ’ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT