ಸೋಮವಾರ, ಮೇ 16, 2022
21 °C
ತಾಕೀತು

ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಲಿಂಗಾಯತ ಸಮುದಾಯದ ಒಳಪಂಗಡಗಳ ನಡುವೆ ತಾರತಮ್ಯ ಮಾಡುತ್ತಿರುವ ಮುಖ್ಯ
ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿ ರಾಜೀನಾಮೆ ಪಡೆಯಿರಿ. ಇಲ್ಲವೇ, ನಮ್ಮೊಂದಿಗೆ ಪಾದಯಾತ್ರೆಗೆ ಬನ್ನಿ’ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿ ಶಾಸಕರಿಗೆ ತಾಕೀತು ಮಾಡಿದರು.

ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ 2ಎ’ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಅವರು ಸೋಮವಾರ ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಉರಿ ಬಿಸಿಲಿನಲ್ಲಿ ಪಾದಯಾತ್ರೆ ಮಾಡುತ್ತಿದ್ದರೂ ಶಾಸಕರು ಮೌನವಾಗಿರುವುದು ಅನುಮಾನಕ್ಕೆ ಎಡೆಮಾಡಿ
ಕೊಟ್ಟಿದೆ. ನೀವು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥರು. ಅಂಜುವ ಅಗತ್ಯವಿಲ್ಲ. ವಿಧಾನಮಂಡಲದ ಅಧಿವೇಶನದಲ್ಲಾದರೂ ಧ್ವನಿ ಎತ್ತಲು ಪ್ರಯತ್ನಿಸಿ’ ಎಂದರು.

‘ಎಲ್ಲಿಯವರೆಗೆ ಬೇರೊಬ್ಬರ ಹಿಂಬಾಲಕರಾಗಿ ಇರುತ್ತೀರಿ? ನಿಮ್ಮಲ್ಲಿ ನಾಯಕತ್ವದ ಗುಣವಿದೆ. ಮುಖ್ಯಮಂತ್ರಿ ಹುದ್ದೆಗೆ ಏರುವ ಸಾಮರ್ಥ್ಯವಿದೆ. 18 ದಿನಗಳಿಂದ ಪಾದಯಾತ್ರೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಪಂಚಮಸಾಲಿ ಸಮುದಾಯದ 17 ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದು ದೂರು ನೀಡಿ. ಒಳಪಂಗಡಗಳ ನಡುವೆ ತಾರತಮ್ಯ ನೀತಿ ಇದೇ ರೀತಿ ಮುಂದುವರಿಸಿದರೆ ಮುಖ್ಯಮಂತ್ರಿ ಕುರಿತ ಕೆಲ ಸತ್ಯಾಂಶಗಳನ್ನು ಹೊರಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬಸವರಾಜ ಹೊರಟ್ಟಿ ವಿರುದ್ಧ ವಾಗ್ದಾಳಿ

‘ಲಿಂಗಾಯತ ಚಳವಳಿ ಸಂದರ್ಭದಲ್ಲಿ ಕೂಡಲಸಂಗಮ ಪೀಠದ ಗುರುಗಳನ್ನು ಕರೆದು ನೇತೃತ್ವ ನೀಡುವಾಗ ಪೂಜೆಯ ಬಗ್ಗೆ ನೆನಪು ಆಗಲಿಲ್ಲವೇ’ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಅವರನ್ನು ಪ್ರಶ್ನಿಸಿದರು.

‘ಸ್ವಾಮೀಜಿಗಳು ಪೂಜೆ ಮಾಡಿಕೊಂಡು ಇರಬೇಕು’ ಎಂಬ ಹೊರಟ್ಟಿ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ‘ಅವರ ಸಮುದಾಯಕ್ಕೆ ಈಗಾಗಲೇ ಪ್ರವರ್ಗ 2ಎ ಮೀಸಲಾತಿ ಸೌಲಭ್ಯ ಸಿಕ್ಕಿದೆ. ಪಂಚಮಸಾಲಿ ಸಮುದಾಯ ಉದ್ಧಾರ ಆಗುವುದು ಅವರಿಗೆ ಬೇಕಾಗಿಲ್ಲ. ನಿಜಕ್ಕೂ ನಿಮಗೆ ಕಾಳಜಿ ಇದ್ದರೆ ಮೀಸಲಾತಿ ಸೌಲಭ್ಯವನ್ನು ಬಿಸಾಕಿ’ ಎಂದು ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು