ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಪರಿಷತ್‌ ಚುನಾವಣೆ; ಗರಿಗೆದರಿದ ಕಣ

ಜಿ.ಬಿ.ನಾಗರಾಜ್‌
Published 16 ಮೇ 2024, 8:25 IST
Last Updated 16 ಮೇ 2024, 8:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ವಿಧಾನಪರಿಷತ್ ಚುನಾವಣೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಣ ಗರಿಗೆದರಿದೆ. ಮತದಾರರ ಮನವೊಲಿಸುವ ಪ್ರಯತ್ನಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಿವೆ.

ಆಗ್ನೇಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ವೈ.ಎ. ನಾರಾಯಣಸ್ವಾಮಿ ಅವರ ಅಧಿಕಾರವಧಿ ಜೂನ್‌ 21ಕ್ಕೆ ಕೊನೆಗೊಳ್ಳಲಿದೆ. ಈ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಮೇ 9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್‌ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ವೈ.ಎ. ನಾರಾಯಣಸ್ವಾಮಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಚಿತ್ರದುರ್ಗ, ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು), ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಜೂನ್‌ 3ರಂದು ಮತದಾನ ನಡೆಯಲಿದ್ದು, ಜೂನ್‌ 6ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಲೋಕಸಭೆಯ ಮಾದರಿಯಲ್ಲಿ ವಿಧಾನಪರಿಷತ್‌ ಚುನಾವಣೆಗೂ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ.

ವೈ.ಎ. ನಾರಾಯಣಸ್ವಾಮಿ ಅವರು 18 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ ಪ್ರಬಲ ಎದುರಾಳಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ‘ರುಪ್ಸಾ’ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಅಖಾಡಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮೇ 16ರವರೆಗೆ ಅಕವಾಶವಿದ್ದು, ದಿನ ಕಳೆದಂತೆ ಚುನಾವಣಾ ಕಣ ರಂಗೇರುತ್ತಿದೆ.

ಜಿಲ್ಲೆಯಲ್ಲಿ 3,238 ಪುರುಷರು ಹಾಗೂ 1,377 ಮಹಿಳೆಯರು ಸೇರಿ 4,615 ಶಿಕ್ಷಕ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯನ್ನು ಹಿಡಿದು ಮತಯಾಚನೆ ಮಾಡುವಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ. ಬೇಸಿಗೆ ರಜೆಯಲ್ಲಿರುವ ಶಿಕ್ಷಕರನ್ನು ಭೇಟಿಯಾಗಲು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮನೆಮನೆಗೆ ತೆರಳುತ್ತಿದ್ದಾರೆ. ಶಿಕ್ಷಕರು ಹೆಚ್ಚಾಗಿ ವಾಸವಿರುವ ಬಡಾವಣೆಗಳನ್ನು ಗುರುತಿಸಿ ಮನೆಬಾಗಿಲು ತಟ್ಟುತ್ತಿದ್ದಾರೆ.

ಕ್ಷೇತ್ರಕ್ಕೆ ಅಭ್ಯರ್ಥಿಯನ್ನು 8 ತಿಂಗಳ ಮೊದಲೇ ಘೋಷಣೆ ಮಾಡಿದ ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಪ್ರತಿಷ್ಠಿತ ಚುನಾವಣೆಯಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್‌ ಕೈಪಡೆಯ ಅಭ್ಯರ್ಥಿಯಾಗಿದ್ದಾರೆ. ರಾಜ್ಯ ಗೊಲ್ಲ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ್‌, ಮೂರು ವರ್ಷಗಳ ಹಿಂದೆ ನಡೆದಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಕ್ಷೇತ್ರ ಪ್ರತಿನಿಧಿಸುತ್ತಿರುವ ಹಾಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುದೀರ್ಘ ಅವಧಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವ ಅವರಿಗೆ ಬಿಜೆಪಿಯು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಎರಡೂ ರಾಜಕೀಯ ಪಕ್ಷಗಳ ಮುಖಂಡರು ಮತದಾರರ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಶಿಕ್ಷಕರಿಗೆ ಭರ್ಜರಿ ‘ಪಾರ್ಟಿ’
ಕ್ಷೇತ್ರ ವ್ಯಾಪ್ತಿಯ ಶಿಕ್ಷಕ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಭಾರಿ ಕಸರತ್ತು ಮಾಡುತ್ತಿದ್ದಾರೆ. ತೋಟದ ಮನೆ ಹೋಟೆಲ್‌ ಸೇರಿ ಹಲವೆಡೆ ಭರ್ಜರಿ ‘ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದಾರೆ. ಮತದಾರರ ಪಟ್ಟಿ ಹಿಡಿದು ಕ್ಷೇತ್ರ ಸುತ್ತುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಭಿನ್ನ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಗೋಪ್ಯವಾಗಿ ಮತದಾರರನ್ನು ಒಂದೆಡೆ ಸೇರಿಸಿ ಮತಯಾಚನೆ ಮಾಡುತ್ತಿದ್ದಾರೆ. ಇಲ್ಲಿ ಬಾಡೂಟ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT