ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಗಡಿಯಲ್ಲಿನ ಅಬಕಾರಿ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ

ಅಕ್ರಮ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ 24 ಠಾಣೆ ಸ್ಥಾಪನೆ
Published 24 ಜೂನ್ 2023, 15:55 IST
Last Updated 24 ಜೂನ್ 2023, 15:55 IST
ಅಕ್ಷರ ಗಾತ್ರ

-ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದ ಗಡಿ ಭಾಗಗಳಲ್ಲಿ ಸ್ಥಾಪಿಸಿರುವ ವಿಶೇಷ ಅಬಕಾರಿ ತನಿಖಾ ಠಾಣೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ.

ರಾಜ್ಯದಲ್ಲಿ ಗೋವಾ ಗಡಿಗೆ ಹೊಂದಿಕೊಂಡ ಜಾಗದಲ್ಲಿ ಮಾತ್ರ ಅಬಕಾರಿ ತನಿಖಾ ಠಾಣೆಗಳಿದ್ದು, ಆ ಮಾದರಿಯ ಠಾಣೆಗಳನ್ನು ಎಲ್ಲ ಗಡಿಗಳಿಗೂ ವಿಸ್ತರಿಸಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಸೀಮಾಂಧ್ರ, ತೆಲಂಗಾಣದೊಂದಿಗೆ ಸಂಪರ್ಕ ಬೆಸೆಯುವ ರಾಜ್ಯದ 24 ಕಡೆಗಳಲ್ಲಿ ಈ ಠಾಣೆಗಳನ್ನು ಸ್ಥಾಪಿಸಲು 2022ರ ನವೆಂಬರ್‌ನಲ್ಲಿ ಆದೇಶಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸೀಮಾಂಧ್ರ ಗಡಿಗೆ ಹೊಂದಿಕೊಂಡಿರುವ ಮೊಳಕಾಲ್ಮುರಿನ ಎದ್ದಲಬೊಮ್ಮಯ್ಯನಹಟ್ಟಿ, ಚಳ್ಳಕೆರೆಯ ದೊಡ್ಡಬಾದಿಹಳ್ಳಿ, ಹಿರಿಯೂರಿನ ಮದ್ದಿಹಳ್ಳಿಯಲ್ಲಿ ಠಾಣೆಗಳನ್ನು ಮಂಜೂರು ಮಾಡಲಾಗಿತ್ತು. ಇದೇ ಫೆಬ್ರುವರಿಯಲ್ಲಿ ಕಂಟೈನರ್ ಮಾದರಿಯ ಠಾಣೆ ಸ್ಥಾಪಿಸಲಾಗಿದೆ.

ಪ್ರತಿ ಕೇಂದ್ರಕ್ಕೆ ತಲಾ ಒಂದು ಅಬಕಾರಿ ನಿರೀಕ್ಷಕ ಮತ್ತು ಉಪ ಅಬಕಾರಿ ನಿರೀಕ್ಷಕ ಹಾಗೂ 6 ಕಾನ್‌ಸ್ಟೆಬಲ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳದ ಕಾರಣ ಈ ಠಾಣೆಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ತಾಲ್ಲೂಕು ಅಬಕಾರಿ ಸಿಬ್ಬಂದಿಯನ್ನೇ ತಾತ್ಕಾಲಿಕವಾಗಿ ಗಡಿ ಠಾಣೆಗಳಿಗೆ ನಿಯೋಜಿಸಲಾಗುತ್ತಿದೆ. ಅವರು ಸರದಿಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಾಲ್ಲೂಕು ನಿರೀಕ್ಷಕ ಮಹಮದ್ ಸಾದಿತ್ ತಿಳಿಸಿದರು.

ಸಿಬ್ಬಂದಿ ಕೊರತೆಯ ಕಾರಣಕ್ಕೆ, ಈ ಠಾಣೆಗಳು ಬಾಗಿಲು ತೆರೆಯುವುದೇ ಅಪರೂಪ ಎಂದು ಗಡಿ ಭಾಗದ ನಿವಾಸಿಗಳು ಹೇಳುತ್ತಾರೆ.

‘ಯಾವಾಗಲೋ ಒಮ್ಮೆ ಠಾಣೆ ತೆರೆಯಲಾಗುತ್ತಿದೆ. ಇದಕ್ಕೆ ನಿಗದಿತ ಸಮಯ ಎಂಬುದಿಲ್ಲ. ಈ ಲೋಪವು, ಮದ್ಯ ಅಕ್ರಮ ಸಾಗಣೆಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಮಂಜೂರಾಗಿರುವ ಹುದ್ದೆಗಳನ್ನು ಭರ್ತಿ ಮಾಡಿ, ಠಾಣೆಗಳು ದಿನಪೂರ್ತಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

Quote - ಸೀಮಾಂಧ್ರಕ್ಕೆ ಹೊಂದಿಕೊಂಡ ಜಾಗಗಳಲ್ಲಿ ಗಡಿ ಠಾಣೆ ಸ್ಥಾಪಿಸಿರುವುದರಿಂದ ಅಷ್ಟೇನೂ ಉಪಯೋಗ ಆಗುವುದಿಲ್ಲ. ಇದರಿಂದ ನಮಗೆ ನಷ್ಟವೇ ಆಗುತ್ತದೆ.  ಮಾದೇಶ್ ಅಬಕಾರಿ ಜಿಲ್ಲಾಧಿಕಾರಿ ಚಿತ್ರದುರ್ಗ

Cut-off box - ಮದ್ಯದ ದರ ನಮ್ಮಲ್ಲೇ ಕಡಿಮೆ ‘ಅಂತರರಾಜ್ಯಗಳ ನಡುವೆ ನಡೆಯುವ ಮದ್ಯದ ಅಕ್ರಮ ವಹಿವಾಟು ತಡೆಯುವುದು ಈ ಠಾಣೆಗಳ ಪ್ರಮುಖ ಕೆಲಸ. ನಮ್ಮ ರಾಜ್ಯದಲ್ಲಿ ಮದ್ಯದ ದರ ಕಡಿಮೆ ಇದೆ. ಇಲ್ಲಿಂದ ಸೀಮಾಂಧ್ರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚಲಾಗುವುದು. ಜೊತೆಗೆ ಈ ಭಾಗಕ್ಕೆ ತೆರಳುವ  ವಾಹನಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ’ ಎಂದು ಅಬಕಾರಿ ಜಿಲ್ಲಾಧಿಕಾರಿ ಮಾದೇಶ್ ತಿಳಿಸಿದರು. ‘ಆಂಧ್ರ ಹಾಗೂ ತೆಲಂಗಾಣದಲ್ಲಿ ಮದ್ಯದ ದರ ಹೆಚ್ಚಿದೆ. ಹೀಗಾಗಿ ಅಲ್ಲಿಂದ ನಮ್ಮ ರಾಜ್ಯಕ್ಕೆ ಕಳ್ಳ ಮಾರ್ಗದಲ್ಲಿ ಮದ್ಯ ತರುವ ಸಾಧ್ಯತೆಯಿಲ್ಲ. ಆದರೆ ತೆಲಂಗಾಣದ ಸೇಂದಿ ನಮ್ಮ ರಾಜ್ಯದ ಕೆಲವೆಡೆ ಮಾರಾಟವಾಗುತ್ತಿದೆ. ಅದನ್ನು ಪತ್ತೆ ಹಚ್ಚಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT