ಮೊಳಕಾಲ್ಮುರು: ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ಭಾನುವಾರ ಶೋಭಾಯಾತ್ರೆ ಹಮ್ಮಿಕೊಂಡಿದ್ದು ಪಟ್ಟಣ ಕೇಸರಿಮಯವಾಗಿ ಸಿಂಗಾರಗೊಂಡಿದೆ.
ಸ್ಥಳೀಯ ಮಹಾ ಗಣಪತಿ ಸೇವಾ ಸಮಿತಿ ಗಣೇಶ ಪ್ರತಿಷ್ಠಾಪಿಸಿದ್ದು, ಕಳೆದ 9 ದಿನಗಳಿಂದ ವಿಶೇಷ ಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶೋಭಾಯಾತ್ರೆ ಬಗ್ಗೆ ಜಾಗೃತಿ ಮೂಡಿಸಲು ಶನಿವಾರ ಜಾಥಾ ಹಮ್ಮಿಕೊಳ್ಳಲಾಗಿತ್ತು. ನೂರಾರು ದ್ವಿಚಕ್ರ ವಾಹನಗಳು ಇದರಲ್ಲಿ ಭಾಗವಹಿಸಿದ್ದವು. ರ‍್ಯಾಲಿಗೆ ಬಿಇಒ ಕಚೇರಿ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಟಿ. ರವಿಕುಮಾರ್ ಚಾಲನೆ ನೀಡಿದರು. ನಂತರ ಹಾನಗಲ್- ರಾಯದುರ್ಗ ರಸ್ತೆ, ಕೆಇಬಿ ವೃತ್ತ, ಕೋನಸಾಗರ ರಸ್ತೆ, ಎನ್‌ಐ ಕಾಲೋನಿ, ರೈಲ್ವೆ ನಿಲ್ದಾಣ, ಗಿರಿಜಯ್ಯನಹಟ್ಟಿ, ಮುಬಾರಕ್ ಮೊಹಲ್ಲಾ, ಶ್ರೀನಿವಾಸ ನಾಯಕ ಬಡಾವಣೆ, ಕೆಎಚ್‌ಡಿಸಿ ಕಾಲೋನಿ, ಬೋವಿ ಕಾಲೋನಿ ಮೂಲಕ ಸಂಚರಿಸಿ ಮರಳಿ ಬಿಇಒ ಕಚೇರಿ ಮುಂಭಾಗದಲ್ಲಿ ಜಾಥಾ ಕೊನೆಯಾಯಿತು.
ಭಾನುವಾರ ಮಧ್ಯಾಹ್ನ 2 ಗಂಟೆಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಭಾಗವಹಿಸಲಿದ್ದಾರೆ. ವಿವಿಧ ಕಲಾತಂಡಗಳ ವ್ಯವಸ್ಥೆ ಮಾಡಲಾಗಿದೆ.
ಶಾಂತಿಯುತ ಶೋಭಾಯಾತ್ರೆ ನಡೆಸುವ ನಿಟ್ಟಿನಲ್ಲಿ ಒಟ್ಟು 130 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯಬೀದಿಗಳಲ್ಲಿ ಹೆಚ್ಚುವರಿ ಜಿಲ್ಲಾ ಎಸ್‌ಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಶ಼ನಿವಾರ ಪಥಸಂಚಲನೆ ನಡೆಸಿದರು. ಡಿವೈಎಸ್‌ಪಿ ರಾಜಣ್ಣ, ಸಿಪಿಐ ವಸಂತ್ ಆಸೋದೆ, ಪಿಎಸ್‌ಐಗಳಾದ ಪಾಂಡುರಂಗಪ್ಪ, ಈರೇಶ್ ಭಾಗವಹಿಸಿದ್ದರು.
ರಾಂಪುರದಲ್ಲೂ ಸಕಲ ಸಿದ್ಧತೆ
ತಾಲ್ಲೂಕಿನ ರಾಂಪುರದ ಕುಬೇರ ನಗರದಲ್ಲಿ ಸ್ಥಳೀಯ ಹಿಂದೂ ಮಹಾಗಣಪತಿ ಹಾಗೂ ವಿನಾಯಕ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಮಹಾ ಗಣಪತಿಯ ಶೋಭಾಯಾತ್ರೆ ಸೆ.15 ರಂದು ನಡೆಯಲಿದೆ. ಗ್ರಾಮದಲ್ಲಿ ಶನಿವಾರ ಜಾಗೃತಿ ಮೆರವಣಿಗೆ ನಡೆಸಲಾಯಿತು. ಮೂರ್ತಿಗೆ ಮತ್ತು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ವೀರಶೈವ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಮಂಜುನಾಥ್ ಚಾಲನೆ ನೀಡಿದರು. ಮುಖಂಡರಾದ ಅಧ್ಯಕ್ಷರಾದ ರಮೇಶ್ ಮೋಹನ್ ಅಜಯ್ ಕುಮಾರ್ ಡಿ. ಮಂಜುನಾಥ ಅನಿಲ್ ಕುಮಾರ್ ಅಭಿ ಅರುಣ್ ಪ್ರವೀಣ್ ವಿಜಯ್ ಧನಂಜಯ್ ಉಮೇಶ್ ಯೋಗಾನಂದ ಮೂರ್ತಿ ಭಾಗವಹಿಸಿದ್ದರು. ಭಾನುವಾರ 12ಕ್ಕೆ ಕುಬೇರ ನಗರದಿಂದ ಆರಂಭವಾಗುವ ಮೆರವಣಿಗೆ ಮುಖ್ಯಬೀದಿಗಳಲ್ಲಿ ಸಂಚರಿಸಿ ಕೆರೆ ಕೊಂಡಾಪುರ ಬಳಿ ಇರುವ ಕೃಷಿ ಹೊಂಡದಲ್ಲಿ ವಿಸರ್ಜನೆ ಮಾಡಲಾಗುವುದು. ಮೆರವಣಿಯಲ್ಲಿ ವೀರಗಾಸೆ ಗೊಂಬೆ ಕುಣಿತ ಚಂಡೆಮೇಳ ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.