ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ‘ಸಪ್ಪೆ’ ರೋಗಕ್ಕೆ ‘ಬೈವೋಲ್ಟಿನ್’ ರೇಷ್ಮೆ ಬೆಳೆಗಾರರು ತತ್ತರ

ನಿಯಂತ್ರಣಕ್ಕೆ ಬಾರದ ರೋಗ; ರಾಜ್ಯದೆಲ್ಲೆಡೆ ವಿಸ್ತರಣೆ
Published 8 ಸೆಪ್ಟೆಂಬರ್ 2023, 4:27 IST
Last Updated 8 ಸೆಪ್ಟೆಂಬರ್ 2023, 4:27 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ): ಬೈವೋಲ್ಟಿನ್ ರೇಷ್ಮೆಗೆ (ಬಿಳಿಗೂಡು) ಎಂಟು ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ‘ಸಪ್ಪೆ’ ರೋಗ ನಿಯಂತ್ರಣಕ್ಕೆ ಬಂದಿಲ್ಲ. ರೋಗ ದಿನೇ ದಿನೇ ಉಲ್ಬಣಿಸುತ್ತಿರುವುದರಿಂದ ಕಂಗಾಲಾಗಿರುವ ರೇಷ್ಮೆ ಬೆಳೆಗಾರರು ಪುನಃ ಸಾಂಪ್ರದಾಯಿಕ ಹಳದಿಗೂಡು ರೇಷ್ಮೆ ಉತ್ಪಾದನೆಯತ್ತ ಮುಖಮಾಡುತ್ತಿದ್ದಾರೆ. 

ಬಿಳಿಗೂಡನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳ ಬೆಳೆಗಾರರು ಇದನ್ನು ಹೆಚ್ಚಾಗಿ ಉತ್ಪಾದಿಸುತ್ತಿದ್ದರು. ಅಧಿಕ ದರ ಸಿಗುತ್ತದೆ ಎಂಬ ಕಾರಣಕ್ಕೆ ದುಬಾರಿ ವೆಚ್ಚದಲ್ಲಿ ಹುಳು ಸಾಕಣೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಸಪ್ಪೆ ರೋಗದಿಂದ ಬೆಳೆ ಸತತವಾಗಿ ಕೈತಪ್ಪುತ್ತಿರುವುದರಿಂದ ಬೆಳೆಗಾರರೆಲ್ಲಾ ಸಾಲಗಾರರಾಗುತ್ತಿದ್ದಾರೆ. 

ಹುಳು ಸಾಕಣೆಯ ಕೊನೆಯ ಹಂತದಲ್ಲಿ (5ನೇ ಜ್ವರ) ರೋಗ ಕಾಣಿಸಿಕೊಂಡು ಹುಳು ಸಾಯುತ್ತಿರುವ ಪರಿಣಾಮ ನಷ್ಟ ಉಂಟಾಗುತ್ತಿದೆ. ಪ್ರತಿ 100 ಮೊಟ್ಟೆ ಸಾಕಣೆ ಮಾಡುವವರು ಸರಿಸುಮಾರು ₹40,000 ದಿಂದ ₹60,000ವರೆಗೆ ನಷ್ಟ ಅನುಭವಿಸುವಂತಾಗಿದೆ.

‘ಅಧಿಕ ಸಾಕಣೆ ವೆಚ್ಚ, ರೋಗಬಾಧೆ ಹಾಗೂ ಬೆಳೆ ನಷ್ಟದಿಂದ ಬೇಸತ್ತಿರುವ ಬೆಳೆಗಾರರು ರೋಗ ನಿರೋಧಕ ಶಕ್ತಿ ಹೆಚ್ಚಿರುವ ಸಾಂಪ್ರದಾಯಿಕ ಹಳದಿಗೂಡು ರೇಷ್ಮೆಯತ್ತ ಮುಖ ಮಾಡುತ್ತಿದ್ದಾರೆ’ ಎಂದು ರೇಷ್ಮೆ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ.ಗುರುಲಿಂಗಪ್ಪ ತಿಳಿಸಿದರು. 

‘ರೋಗಕ್ಕೆ ನಿಖರ ಕಾರಣ ಗೊತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ರೇಷ್ಮೆ ಇಲಾಖೆಯ ಮಾರ್ಗದರ್ಶನ ಸಿಗುತ್ತಿಲ್ಲ. ಮೊಟ್ಟೆ ಪೂರೈಸುವವರು ತಮ್ಮಿಂದ ಯಾವುದೇ ಲೋಪವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಿಂದೆಲ್ಲಾ ಹುಳು ಸತ್ತರೆ ಬದಲಾಯಿಸಿ ಕೊಡುತ್ತಿದ್ದರು. ಈಗ, ಬೇಕಾದರೆ ತೆಗೆದುಕೊಳ್ಳಿ ಇಲ್ಲವೇ ಬಿಡಿ ಎಂದು ತಾಕೀತು ಮಾಡುತ್ತಿದ್ದಾರೆ. ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು. ಬೆಳೆ ನಷ್ಟವಾಗಿ ದಿಕ್ಕು ತೋಚದಂತಾಗಿದೆ’ ಎಂದು ರೇಷ್ಮೆ ಬೆಳೆಗಾರ ಕೊಂಡ್ಲಹಳ್ಳಿಯ ಬಿ.ಟಿ.ಹನುಮಾರೆಡ್ಡಿ ಅಳಲು ತೋಡಿಕೊಂಡರು.

‘ರೋಗವು ರಾಜ್ಯದ ಇತರೆ ಭಾಗಗಳಲ್ಲೂ ಕಾಣಿಸಿಕೊಂಡಿದ್ದು, ಇದನ್ನು ಮೈಸೂರಿನ ಕೇಂದ್ರೀಯ ರೇಷ್ಮೆ ಮಂಡಳಿ ಗಮನಕ್ಕೂ ತರಲಾಗಿದೆ’ ಎಂದು ರೇಷ್ಮೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಮಾರಪ್ಪ ಹೇಳಿದರು.

‘ಕಳೆದ ವಾರ ಕೇಂದ್ರದ ವಿಜ್ಞಾನಿಗಳು ಆನ್‌ಲೈನ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದಾರೆ. ಹುಳು ತಯಾರಿಕಾ ಹಂತದಲ್ಲಿ ರೋಗ ಬರುವ ಶಂಕೆಯಿದ್ದು, ಹುಳು ತಯಾರಕರ ಸಭೆ ನಡೆಸಬೇಕಿದೆ. ಶೇ 30ರಿಂದ ಶೇ 50ರಷ್ಟು ಬೆಳೆ ನಷ್ಟಕ್ಕೀಡಾಗುತ್ತಿದೆ. ನಷ್ಟ ಹಾಗೂ ರೋಗಕ್ಕೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಇನ್ನೂ ಸಲ್ಲಿಸಿಲ್ಲ’ ಎಂದು ತಿಳಿಸಿದರು.

ಮೊಳಕಾಲ್ಮುರು ತಾಲ್ಲೂಕಿನ ತೋಟವೊಂದರಲ್ಲಿ ರೋಗಕ್ಕೆ ತುತ್ತಾಗಿರುವ ಬೈವೋಲ್ಟಿನ್ (ಬಿಳಿಗೂಡು) ರೇಷ್ಮೆಹುಳು
ಮೊಳಕಾಲ್ಮುರು ತಾಲ್ಲೂಕಿನ ತೋಟವೊಂದರಲ್ಲಿ ರೋಗಕ್ಕೆ ತುತ್ತಾಗಿರುವ ಬೈವೋಲ್ಟಿನ್ (ಬಿಳಿಗೂಡು) ರೇಷ್ಮೆಹುಳು
ಎಸ್.ಕೆ. ಗುರುಲಿಂಗಪ್ಪ
ಎಸ್.ಕೆ. ಗುರುಲಿಂಗಪ್ಪ

ಅನೇಕ ರೈತರು ನಷ್ಟಕ್ಕೀಡಾಗಿ ಸಾಲಗಾರರಾಗಿದ್ದಾರೆ. ಸರ್ಕಾರ ಪರಿಹಾರ ಪ್ರಕಟಿಸಬೇಕು. ರೋಗಕ್ಕೆ ನಿಖರ ಕಾರಣ ಹುಡುಕಿ ರೇಷ್ಮೆ ಬೆಳಗಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು–ಎಸ್.ಕೆ. ಗುರುಲಿಂಗಪ್ಪ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಮೊಳಕಾಲ್ಮುರು

ಹುಳುವಿನ ತಳಿಯಲ್ಲಿರುವ ಸಮಸ್ಯೆ ಸರಿಪಡಿಸಬೇಕಿದೆ. ರೋಗಬಾಧೆ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಬೈವೋಲ್ಟಿನ್ ರೇಷ್ಮೆ ಕೃಷಿಯೇ ಸಂಪೂರ್ಣ ನಾಶವಾಗಬಹುದು
ನವೀನ್ ಗೌಡ, ಹುಳು ಸರಬರಾಜುದಾರ, ಕಿರಣಗೆರೆ, ಮಂಡ್ಯ

ಪಿ-1 ಪಿ-2 ತಳಿಗಳಲ್ಲಿ ದೋಷ?

‘ಬೈವೋಲ್ಟಿನ್‌ನ ಪಿ-1 ಪಿ-2 ತಳಿಗಳಲ್ಲೇ ಸಮಸ್ಯೆಯಿದೆ’ ಎಂದು ಮಂಡ್ಯದ ಕಿರಣಗೆರೆಯ ಹುಳು ವಿತರಕ ನವೀನ್ ಗೌಡ ಹೇಳಿದರು.  ‘ಈಚೆಗೆ ತಲಘಟ್ಟಪುರದಲ್ಲಿ ನಡೆದ ರೇಷ್ಮೆ ಹುಳು ಪೂರೈಕೆದಾರರು ಮತ್ತು ವಿಜ್ಞಾನಿಗಳ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ. ರಾಜ್ಯದಲ್ಲಿ ತಿಂಗಳಿಗೆ 12 ಲಕ್ಷದಷ್ಟು ಹುಳುಗಳಿಗೆ ಬೇಡಿಕೆಯಿದ್ದು 5-6 ಲಕ್ಷ ಮಾತ್ರ ಪೂರೈಸಲಾಗುತ್ತಿದೆ. ಹುಳು ಸರಬರಾಜುದಾರರ ಸಂಘದಿಂದಲೇ ಮೂಲ ತಳಿಯನ್ನು ಅಭಿವೃದ್ಧಿಪಡಿಸಿ ವಿತರಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು. ‘ಈಗ ಪೂರೈಕೆಯಾಗುತ್ತಿರುವ ಹುಳುಗಳಿಂದ ಶೇ 80ರಷ್ಟು ಬೆಳೆಗಾರರು ನಷ್ಟಕ್ಕೀಡಾಗುತ್ತಿರುವುದು ಗಮನಕ್ಕೆ ಬಂದಿದೆ. ಬದಲಿ ಹುಳು ನೀಡುವುದನ್ನೂ ಸ್ಥಗಿತಗೊಳಿಸಲಾಗಿದೆ. ಬದಲಿಸಿಕೊಡುವಂತೆ ಉತ್ಪಾದಕರು ಕೇಳಿದರೆ ಮಾತ್ರ ಕೊಡುತ್ತೇವೆ’ ಎಂದೂ ನವೀನ್ ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT