ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿತು ಸಂತೇಗುಡ್ಡ ಕೆರೆ; ಗ್ರಾಮಸ್ಥರಲ್ಲಿ ಸಂತಸ

ಬಾಂಡ್ರಾವಿ ಸುತ್ತ ಮಲೆನಾಡ ವಾತಾವರಣ
Published 11 ಜೂನ್ 2024, 8:09 IST
Last Updated 11 ಜೂನ್ 2024, 8:09 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕಣ್ಣು ಹಾಯಿಸಿದಷ್ಟು ದೂರ ಕಂಗೊಳಿಸುವ ಹಸಿರು.. ರಸ್ತೆಬದಿಯ ಜಮೀನುಗಳಲ್ಲಿ ನಿಂತಿರುವ ನೀರು... ತಂಪಾದ ಗಾಳಿ, ಗುಡ್ಡಗಳ ನಡುವೆ ನೀರಿನ ಜುಳು ಜುಳು ಶಬ್ದ....

ಇದು ತಾಲ್ಲೂಕಿನ ಸಂತೇಗುಡ್ಡ, ಜಾಗೀರಬುಡ್ಡೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಸಿಗುತ್ತಿರುವ ಚಿತ್ರಣ.

ತಿಂಗಳ ಹಿಂದಷ್ಟೇ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಇಲ್ಲಿನ ಜನರು ಕುಡಿಯುವ ನೀರು, ಜಾನುವಾರು ಮೇವಿಗಾಗಿ ಪರಿತಪಿಸುತ್ತಿದ್ದರು. ಆದರೆ 15 ದಿನಗಳ ಹಿಂದೆ ಬಿದ್ದಿರುವ ಮಳೆಗೆ ಇಡೀ ಚಿತ್ರಣವೇ ಬದಲಾಗಿದೆ. ಅಪರೂಪಕ್ಕೆ ತುಂಬುತ್ತಿದ್ದ ಸಂತೇಗುಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಜಾಗೀರಬುಡ್ಡೇನಹಳ್ಳಿಯ ಬೃಹತ್‌ ಪಕ್ಕುರ್ತಿ ಕೆರೆ ತುಂಬಲು ಒಂದು ಅಡಿ ಬಾಕಿ ಉಳಿದಿದೆ. ಅರಣ್ಯದಲ್ಲಿನ ಚೆಕ್‌ ಡ್ಯಾಂಗಳು ತುಂಬಿಕೊಂಡಿವೆ.

ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ಪಡೆದಿರುವ ಬಾಂಡ್ರಾವಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ವೈವಿಧ್ಯಮಯ ಮರಗಳು 2 ವರ್ಷಗಳಿಂದ ಮಳೆ ಇಲ್ಲದೇ ಒಣಗುತ್ತಿದ್ದವು. ಈಗ ಬಿದ್ದಿರುವ ಮಳೆಯಿಂದ ಮತ್ತೆ ಕಂಗೊಳಿಸುತ್ತಿವೆ. ಆದರೆ ಇಲ್ಲಿ ಇನ್ನೂ ಹೆಚ್ಚಿನ ಸಸಿಗಳನ್ನು ನೆಡುವ ಅಗತ್ಯದ ಜತೆಗೆ ಮರ ಕಡಿಯದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪರಿಸರ ಪ್ರೇಮಿಗಳ ಮನವಿ.

‘ಮುಂಗಾರು ಆರಂಭದಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಮಳೆ ಬಂದಿರುವುದು ಖುಷಿ ಕೊಟ್ಟಿದೆ. ಹೊಲಗಳ ಸಿದ್ಧತೆ ಕಾರ್ಯ ಚುರುಕುಗೊಂಡಿದೆ. ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆಯಾಗಿರುವುದು ನೆಮ್ಮದಿ ತಂದಿದೆ. ವರ್ಷ ಪೂರ್ತಿ ಮಳೆ ಬಂದರೂ ತುಂಬದ ನಮ್ಮೂರ ಕೆರೆ ಒಂದೇ ಮಳೆಗೆ ತುಂಬಿರುವುದು ಅಚ್ಚರಿ ಮೂಡಿಸಿದೆ’ ಎಂದು ಸಂತೇಗುಡ್ಡದ ಹನುಮಯ್ಯ ಖುಷಿಯಿಂದ ಹೇಳಿದರು.

ರಾಂಪುರದಿಂದ ಬಾಂಡ್ರಾವಿಗೆ ಹೋಗುವಾಗ ಮೇಗಲಕಣಿವೆ ಬಳಿಯ ಬೆಟ್ಟದಲ್ಲಿ ಮಳೆಯಿಂದ ಮೋಹಲ ಜಲಪಾತ ಸೃಷ್ಟಿಯಾಗಿದೆ. ಹಿಂಬದಿಯ ಕೃಷ್ಣರಾಜಪುರ ಅರಣ್ಯ ಪ್ರದೇಶದ ನೀರು ಕೋಡಿ ಹರಿದು ಈ ಜಲಪಾತ ನಿರ್ಮಾಣವಾಗುತ್ತದೆ. ಈ ವರ್ಷ 15ಕ್ಕೂ ಹೆಚ್ಚು ದಿನಗಳಿಂದ ಈ ಜಲಪಾತ ಜಿನುಗುತ್ತಿದೆ. ಸ್ವಲ್ಪ ಮಳೆ ಬಂದರೂ ಜಲಪಾತ ಸೃಷ್ಟಿಯಾಗುವ ಮಟ್ಟಿಗೆ ವಾತಾವರಣ ಬದಲಾಗಿದೆ. ಜಲಪಾತವನ್ನು ಮೇಲಿನಿಂದ ನೋಡಲು ಹೋಗಿ ಸೆಲ್ಫಿ ತೆಗೆದುಕೊಳ್ಳುವುದು ಅಪಾಯಕಾರಿಯಾಗಿದ್ದು, ಜಾಗೃತಿ ಫಲಕ ಹಾಕಬೇಕಿದೆ ಎಂದು ಉಪನ್ಯಾಸಕ ಬೊಮ್ಮಣ್ಣ ಸಲಹೆ ನೀಡಿದರು.

ಮೊಳಕಾಲ್ಮುರು ತಾಲ್ಲೂಕಿನ ಮೇಗಲಕಣಿವೆ ಬಳಿಯ ಬೆಟ್ಟದಲ್ಲಿ ಸೃಷ್ಟಿಯಾಗಿರುವ ಜಲಪಾತ
ಮೊಳಕಾಲ್ಮುರು ತಾಲ್ಲೂಕಿನ ಮೇಗಲಕಣಿವೆ ಬಳಿಯ ಬೆಟ್ಟದಲ್ಲಿ ಸೃಷ್ಟಿಯಾಗಿರುವ ಜಲಪಾತ

ಹೆಚ್ಚುವರಿ ನೀರು ಆಂಧ್ರದ ಪಾಲು

ಜೆ.ಬಿ. ಹಳ್ಳಿ ಕೋನಾಪುರ ಕೆರೆಗಳು ತುಂಬುತ್ತಿದ್ದು ಮುಂದಿನ ಮಳೆಗಳಿಗೆ ಇಲ್ಲಿನ ಕೋಡಿ ನೀರು ದೇವಸಮದ್ರ ಕೆರೆ ಮೂಲಕ ಚಿನ್ನಹಗರಿ ಸೇರಿ ಆಂಧ್ರಪ್ರದೇಶ ಹರಿಯುತ್ತದೆ. ಗಡಿಯಲ್ಲಿ ಆಂಧ್ರಪ್ರದೇಶ ಸರ್ಕಾರ ಚಿನ್ನಹಗರಿ ನೀರಿಗೆ ದೊಡ್ಡ ಬ್ಯಾರೇಜ್‌ ನಿರ್ಮಿಸಿದೆ. ನಮ್ಮಲ್ಲೂ ನಿರ್ಮಿಸಿದಲ್ಲಿ ದೇವಸಮದ್ರ ಹೋಬಳಿಯಾದ್ಯಂತ ಅಂತರ್ಜಲ ಮಟ್ಟ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಮಿನಿ ಉದ್ಯಾನ ಮಾಡಿ ಬಾಂಡ್ರಾವಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿಕ್ಕ ಮೃಗಾಲಯ ಸ್ಥಾಪಿಸಿ ಅರಣ್ಯ ವ್ಯೂ ಪಾಯಿಂಟ್‌ ಅಭಿವೃದ್ಧಿ ಮಕ್ಕಳ ಆಟಿಕೆ ಸಾಧನಗಳನ್ನು ಅಳವಡಿಸಿದಲ್ಲಿ ತಾಲ್ಲೂಕು ಪ್ರವಾಸಿ ತಾಣ ಆಗುತ್ತದೆ. ಈ ಕುರಿತು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳಿಸಿದೆ. ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT