ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಶಾಲೆಯೇ ಆರೈಕೆ ಕೇಂದ್ರ

ಮನೆಯ ಚಿಕಿತ್ಸೆ ತಪ್ಪಿಸಲು ಸಂಸದ ಎ.ನಾರಾಯಣಸ್ವಾಮಿ ಕೋರಿಕೆ
Last Updated 19 ಮೇ 2021, 15:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನೆಯಲ್ಲೇ ಪ್ರತ್ಯೇಕವಾಗಿದ್ದು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ವಿಧಾನ ಗ್ರಾಮೀಣ ಪ್ರದೇಶಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರಿ ಶಾಲೆಗಳನ್ನು ಕಿರು ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿ ಎಂದು ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳ ಮನವೊಲಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ನಿರ್ದೇಶನಗಳನ್ನು ನೀಡಿದರು. ವಿಪತ್ತಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾದ ಮಹತ್ವದ ಬಗ್ಗೆ ತಿಳಿಸಿ ಸ್ಫೂರ್ತಿ ತುಂಬಿದರು.

‘ಹಳ್ಳಿ ಮನೆಗಳಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸೋಂಕು ಇನ್ನಷ್ಟು ಹರಡಲು ಇದು ಕಾರಣವಾಗುತ್ತಿದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಸೋಂಕಿತರ ಮೇಲೆ ನಿಗಾ ಇಲ್ಲದಿರುವ ಕಾರಣಕ್ಕೆ ರೋಗ ಲಕ್ಷಣಗಳು ಉಲ್ಬಣಿಸಿ ಉಸಿರಾಟದ ತೊಂದರೆ ಉಂಟಾಗುತ್ತಿದೆ. ನಿರೀಕ್ಷಿತ ಪ್ರಮಾಣದ ಆಮ್ಲಜನಕ ಲಭ್ಯ ಇಲ್ಲದಿರುವುದರಿಂದ ಆರಂಭಿಕ ಹಂತದಲ್ಲಿ ಸೋಂಕು ಗುಣಪಡಿಸಲು ಪ್ರಯತ್ನಿಸಬೇಕು’ ಎಂದರು.

‘ಮನೆ ಬದಲು ಆರೈಕೆ ಕೇಂದ್ರಗಳಿಗೆ ದಾಖಲಾಗುವಂತೆ ರೋಗಿಗಳನ್ನು ಮನವೊಲಿಸಬೇಕು. ಯಾವುದೇ ಕಾರಣಕ್ಕೂ ಕೊರಳಪಟ್ಟಿ ಹಿಡಿದು ಎಳೆದು ತರುವ ಮನಸ್ಥಿತಿ ಪ್ರದರ್ಶಿಸುವಂತಿಲ್ಲ. ಸಮಾಜ ಸೇವೆಯ ರೀತಿಯಲ್ಲಿ ಕಾರ್ಯನಿರ್ವಹಿಸಿ. ಆರೈಕೆ ಕೇಂದ್ರಕ್ಕೆ ಅಗತ್ಯವಿರುವ ಊಟ ಹಾಗೂ ಇತರ ಸೌಲಭ್ಯವನ್ನು ಕೇಳಿ ಪಡೆಯಿರಿ. ಸೋಂಕಿತರ ಊಟಕ್ಕೆ ಬೇಕಿರುವ ದವಸ–ಧಾನ್ಯಗಳನ್ನು ನಾನೇ ನೀಡುತ್ತೇನೆ’ ಎಂದು ಧೈರ್ಯ ತುಂಬಿದರು.

‘ಶಾಲೆಯಲ್ಲಿ ತೆರೆಯುವ ಆರೈಕೆ ಕೇಂದ್ರಕ್ಕೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ. ಸ್ವಯಂ ಸೇವಕರ ನೆರವು ಪಡೆಯಲು ಪ್ರಯತ್ನಿಸಿ. ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಶುಶ್ರೂಷಕರು, ವೈದ್ಯರು ಆಗಾಗ ಭೇಟಿ ನೀಡಿ ಆರೋಗ್ಯ ಪರಿಶೀಲಿಸುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಿ. ಸೋಂಕು ಹೆಚ್ಚಾಗುತ್ತಿರುವ ರೀತಿ ಭೀತಿ ಹುಟ್ಟಿಸುತ್ತಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಕೋವಿಡ್‌ ಪರಿಸ್ಥಿತಿಯ ನಿಯಂತ್ರಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ ನಿಗಾ ಇಟ್ಟರೆ ಎಲ್ಲವೂ ಸರಿಯಾಗುತ್ತದೆ. ಎಲ್ಲ ಇಲಾಖೆಯ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಹೊಣೆಗಾರಿಕೆ ಹಂಚಿಕೆ ಮಾಡಿ’ ಎಂದು ಸೂಚಿಸಿದರು.

‘ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ದೂರು ಬರುತ್ತಿವೆ. ವೈದ್ಯರು ಹಾಗೂ ಇತರ ಸಿಬ್ಬಂದಿ ಸಕಾಲಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಗೊತ್ತಾಗಿದೆ. ಸಮಯಕ್ಕೆ ಸರಿಯಾಗಿ ಆಹಾರ ವಿತರಣೆ ಕೂಡ ಮಾಡಿದ್ದರೆ ರೋಗಿ ಹೇಗೆ ಗುಣಮುಖ ಆಗುತ್ತಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ ಅವರನ್ನು ಪ್ರಶ್ನಿಸಿದರು.

ಎಫ್‌ಐಆರ್‌ ದಾಖಲಿಸಿ

ಜ್ವರ, ಕೆಮ್ಮು, ಶೀಥ ಸೇರಿ ಕೋವಿಡ್‌ ಲಕ್ಷಣಗಳಿಗೆ ಚಿಕಿತ್ಸೆ ನೀಡಿ ಸೋಂಕು ಹರಡಲು ಕಾರಣರಾಗುತ್ತಿರುವ ಆರ್‌ಎಂಪಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಿ. ಇಲ್ಲದೇ ಹೋದರೆ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನಾರಾಯಣಸ್ವಾಮಿ ಸೂಚನೆ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವವರು ಕೊರೊನಾ ಸೋಂಕಿತರ ದಿಕ್ಕು ತಪ್ಪಿಸುತ್ತಿದ್ದಾರೆ. ಸೋಂಕಿನ ಲಕ್ಷಣ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿ ಕೈಚಲ್ಲುತ್ತಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಳಿಕ ಸೋಂಕಿತರು ಆಸ್ಪತ್ರೆಗೆ ಬರುತ್ತಿದ್ದಾರೆ. ಇದು ಸಾವಿನ ಪ್ರಮಾಣ ಹೆಚ್ಚಿಸಿದೆ’ ಎಂದರು.

ವಾರ್‌ರೂಂಗೆ ತಾಕೀತು

‘ಕೋವಿಡ್ ನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ತೆರೆದಿರುವ ವಾರ್‌ರೂಂ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದು ಸಮಸ್ಯೆಯನ್ನು ಜಟಿಲಗೊಳಿಸಿದೆ. ಜನರಿಗೆ ವಾರ್‌ರೂಂ ಸ್ಪಂದಿಸಬೇಕು’ ಎಂದು ಸಂಸದರು ತಾಕೀತು ಮಾಡಿದರು.

‘ದಿನದ 24 ಗಂಟೆಯೂ ವಾರ್‌ರೂಂ ಕೆಲಸ ಮಾಡಬೇಕು. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕೋವಿಡ್‌ ಸಂಬಂಧಿಸಿದ ಎಲ್ಲ ಮಾಹಿತಿಯೂ ಇಲ್ಲಿ ಲಭ್ಯವಾಗಬೇಕು. ಹಾಸಿಗೆ, ಆಮ್ಲಜನಕ, ರೆಮ್‌ಡಿಸಿವಿರ್‌ ಹಾಗೂ ಔಷಧಗಳ ಬಗ್ಗೆ ಪರಿಪೂರ್ಣ ಮಾಹಿತಿ ಲಭ್ಯ ಇರುವಂತೆ ಸಜ್ಜಾಗಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು.

***

ಆರ್‌ಎಟಿ ಕಿಟ್‌ಗಳು ಶೀಘ್ರದಲ್ಲೇ ಜಿಲ್ಲೆಗೆ ಬರಲಿವೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ಸೋಂಕು ದೃಢಪಟ್ಟವರನ್ನು ಪ್ರತ್ಯೇಕಿಸಿ ಕೋವಿಡ್‌ ನಿಯಂತ್ರಿಸಲಾಗುವುದು.

ಕವಿತಾ ಎಸ್‌.ಮನ್ನಿಕೇರಿ
ಜಿಲ್ಲಾಧಿಕಾರಿ

***

ಲಾಕ್‌ಡೌನ್‌ ಅನುಷ್ಠಾನಗೊಂಡಿರುವ ಕಾರಣಕ್ಕೆ ಅಂತರ ಜಿಲ್ಲಾ ಸಂಚಾರಕ್ಕೆ ನಿರ್ಬಂಧವಿದೆ. ವೈದ್ಯಕೀಯ ಉದ್ದೇಶಕ್ಕೆ ಮಾತ್ರ ರಿಯಾಯಿತಿ ಇದೆ. ಹೊರ ಜಿಲ್ಲೆಯ ರೋಗಿಗಳನ್ನು ನಿರ್ಬಂಧಿಸುವುದು ಅಸಾಧ್ಯ.

ಜಿ.ರಾಧಿಕಾ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT