ಕೇಂದ್ರ ಸಚಿವ ಸ್ಥಾನ ಸಾಧ್ಯತೆ: ಕುಟುಂಬ ಸಹಿತ ದೆಹಲಿಗೆ ತೆರಳಿದ ಎ.ನಾರಾಯಣಸ್ವಾಮಿ

ಚಿತ್ರದುರ್ಗ: ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಅವಕಾಶ ಸಿಗುವ ಮುನ್ಸೂಚನೆಗಳು ಕಾಣುತ್ತಿದ್ದು, ಅವರು ಕುಟುಂಬ ಸಹಿತ ದೆಹಲಿಗೆ ತೆರಳಿದ್ದು ಕುತೂಹಲ ಮೂಡಿಸಿದೆ.
ಬಿಜೆಪಿ ವಲಯದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದ್ದು, ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಅವರು ದೆಹಲಿಗೆ ತೆರಳಿರುವುದಾಗಿ ಪಕ್ಷದ ಮುಖಂಡರು ಖಚಿತಪಡಿಸಿದ್ದಾರೆ.
ರಮೇಶ ಜಿಗಜಿಣಿಗಿ ಅವರು ಪರಿಶಿಷ್ಟ ಸಮುದಾಯದ ಕೋಟಾದಲ್ಲಿ ಕೇಂದ್ರ ಸಚಿವ ಸಂಪುಟ ಸೇರಿದ್ದರು. ಎರಡನೇ ಅವಧಿಯಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೇ ಅವಕಾಶ ಸಂಸದ ನಾರಾಯಣಸ್ವಾಮಿ ಅವರನ್ನು ಅರಸಿ ಬರುವ ಸಾಧ್ಯತೆ ಇದೆ. ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ತಂತ್ರಗಾರಿಕೆಯೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ನಿವಾಸಿಯಾದ ನಾರಾಯಣಸ್ವಾಮಿ ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿದು ವಿಜೇತರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.