ಕಾಂಗ್ರೆಸ್‌ ಪ್ರಣಾಳಿಕೆ ಕದ್ದ ಬಿಜೆಪಿ: ‘ಮುಖ್ಯಮಂತ್ರಿ’ ಚಂದ್ರು ಆರೋಪ

ಶನಿವಾರ, ಏಪ್ರಿಲ್ 20, 2019
31 °C
‘ಕೈ’ ಪಕ್ಷದ ತಾರಾ ಪ್ರಚಾರಕ

ಕಾಂಗ್ರೆಸ್‌ ಪ್ರಣಾಳಿಕೆ ಕದ್ದ ಬಿಜೆಪಿ: ‘ಮುಖ್ಯಮಂತ್ರಿ’ ಚಂದ್ರು ಆರೋಪ

Published:
Updated:
Prajavani

ಚಿತ್ರದುರ್ಗ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದ 29 ಅಂಶಗಳನ್ನು ಕಳವು ಮಾಡಿದ ಬಿಜೆಪಿ, ಅವುಗಳಿಗೆ ಸುಣ್ಣ, ಬಣ್ಣ ಬಳಿದು ಅಂದಗೊಳಿಸುವಂತೆ ಮಾಡಿ ಮತದಾರರ ಮುಂದಿಟ್ಟಿದೆ ಎಂದು ಕಾಂಗ್ರೆಸ್‌ ತಾರಾ ಪ್ರಚಾರಕ ‘ಮುಖ್ಯಮಂತ್ರಿ’ ಚಂದ್ರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ನಿರ್ಮಲ ಭಾರತ ಎಂಬ ಯೋಜನೆ ಸ್ವಚ್ಛ ಭಾರತವಾಗಿದೆ. ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಬೇಟಿ ಬಚಾವೋ, ಬೇಟಿ ಪಡಾವೋ ಆಗಿದೆ. ಮೂಲ ಉಳಿತಾಯ ಖಾತೆಗೆ ಜನಧನ ಸ್ವರೂಪ ನೀಡಲಾಗಿದೆ. ಸಂಸ್ಕೃತ ವ್ಯಾಮೋಹ ಹೊಂದಿರುವ ಬಿಜೆಪಿ, ಕಾಂಗ್ರೆಸ್ ಘೋಷಣೆಗಳಿಗೆ ಬೇರೆ ಹೆಸರಿಟ್ಟಿದೆ. ವಸತಿ, ಜನೌಷಧ, ಕೃಷಿ ಹೀಗೆ ಹಲವು ಯೋಜನೆಗಳ ಅಂಶಗಳನ್ನು ನಕಲು ಮಾಡಿದೆ’ ಎಂದು ದೂರಿದರು.

‘ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿಲ್ಲ. ಐದು ವರ್ಷದ ಅಧಿಕಾರವಧಿಯಲ್ಲಿ ಮಂದಿರ ನಿರ್ಮಿಸದೇ ರಾಜಕಾರಣ ಮಾಡುತ್ತಿದೆ. ಆಧಾರ್‌, ಜಿಎಸ್‌ಟಿ ವಿರೋಧಿಸಿದ್ದ ನರೇಂದ್ರ ಮೋದಿ, ತಮ್ಮ ಸರ್ಕಾರದ ಯೋಜನೆಗಳೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನಪರ ಯೋಜನೆ ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆ’ ಎಂದು ಕುಟುಕಿದರು.

‘ದೇಶದಲ್ಲಿ ಸ್ವಾತಂತ್ರ್ಯ ರಕ್ಷಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿದ್ದರಿಂದ ಮೋದಿ ಪ್ರಧಾನಿ ಆಗಲು ಸಾಧ್ಯವಾಗಿದೆ. ಕಾಂಗ್ರೆಸ್ ಕೊಡುಗೆಯನ್ನು ಪ್ರಶ್ನಿಸುವ ಮೋದಿ, ಐದು ವರ್ಷಗಳಲ್ಲಿ ಬಡವರ ಏಳಿಗೆಗೆ ಶ್ರಮಿಸಿದ್ದನ್ನು ಬಹಿರಂಗಪಡಿಸಲಿ. ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಅವರು, ಐದು ವರ್ಷದಲ್ಲಿ ಉದ್ಯಮಿಗಳ ₹ 2.28 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಯಾವೊಬ್ಬರಿಗೂ ಟಿಕೆಟ್‌ ನೀಡಿಲ್ಲ. ಬಿಜೆಪಿಯಲ್ಲಿ ಕೇವಲ ಮೇಲ್ವರ್ಗದವರಿಗೆ ಮಾತ್ರ ಮಾನ್ಯತೆ ಸಿಗುತ್ತಿದೆ. ಕಾಂಗ್ರೆಸ್‌ ಐದು ಹಾಗೂ ಜೆಡಿಎಸ್‌ ಮೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಕಲ್ಪಿಸಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ನೇರಲಗುಂಟೆ ರಾಮಪ್ಪ, ರುದ್ರಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್‌, ಡಿ.ಎನ್‌.ಮೈಲಾರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !