ಚಿತ್ರದುರ್ಗ ನಗರಸಭೆ: ಮೀಸಲಾತಿ ಪ್ರಕಟ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು

7
ಗರಿಗೆದರಿದ ರಾಜಕೀಯ

ಚಿತ್ರದುರ್ಗ ನಗರಸಭೆ: ಮೀಸಲಾತಿ ಪ್ರಕಟ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಸರತ್ತು

Published:
Updated:
Deccan Herald

ಚಿತ್ರದುರ್ಗ: ನಗರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿರುವುದು ರಾಜಕೀಯ ಚಟುವಟಿಕೆ ಗರಿಗೆದರುವಂತೆ ಮಾಡಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯಲ್ಲಿ ಗದ್ದುಗೆಗೆ ಕಸರತ್ತುಗಳು ಶುರುವಾಗಿವೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ (ಎಸ್‌ಟಿ) ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘3ಬಿ’ಗೆ ನಿಗದಿಯಾಗಿದೆ. ಬಿಜೆಪಿಯಿಂದ ಆಯ್ಕೆಯಾದ ಇಬ್ಬರು ಸದಸ್ಯರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಇವರಲ್ಲಿ ಯಾರಿಗೆ ಅಧ್ಯಕ್ಷ ಪಟ್ಟ ಒಲಿಯಲಿದೆ ಎಂಬ ಕುತೂಹಲ ಶುರುವಾಗಿದೆ. ಇದಕ್ಕೆ ತೆರೆಮರೆಯ ರಾಜಕೀಯ ಕೂಡ ನಡೆಯುತ್ತಿದೆ.

1ನೇ ವಾರ್ಡ್‌ನಿಂದ ಆಯ್ಕೆಯಾದ ಆರ್‌.ನಾಗಮ್ಮ ಹಾಗೂ 19ನೇ ವಾರ್ಡ್‌ನಿಂದ ಆಯ್ಕೆಯಾದ ತಿಪ್ಪಮ್ಮ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಇಬ್ಬರು ಇದೇ ಮೊದಲ ಬಾರಿಗೆ ನಗರಸಭೆ ಪ್ರವೇಶಿಸಿದ್ದಾರೆ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮುಖಂಡರ ನಿರ್ಧಾರವೇ ಅಂತಿಮ.

ನಾಗಮ್ಮ ಅವರ ಪುತ್ರ ಮಹೇಶ್‌ ನಗರಪಾಲಿಕೆಯ ಮಾಜಿ ಸದಸ್ಯ. 2009, 2013ರಲ್ಲಿ ನಗರಸಭೆ ಸದಸ್ಯರಾಗಿದ್ದ ಮಹೇಶ್‌, ಜೆಡಿಎಸ್‌ ಜೊತೆ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಅವರನ್ನು ಬಿಜೆಪಿಯತ್ತ ಕರೆತಂದಿದ್ದವು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ 1ನೇ ವಾರ್ಡ್‌ನಿಂದ ಮಹೇಶ್‌ ಅವರು ತಾಯಿಯನ್ನು ಕಣಕ್ಕೆ ಇಳಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಆಯಾ ಆಗಿ 30 ವರ್ಷ ಸೇವೆ ಸಲ್ಲಿಸಿದ 68 ವರ್ಷದ ನಾಗಮ್ಮ ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ.

ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಪ್ರಯತ್ನದಲ್ಲಿ 19ನೇ ವಾರ್ಡ್‌ನಿಂದ ಆಯ್ಕೆಯಾದ ತಿಪ್ಪಮ್ಮ ಹೆಸರು ಮುಂಚೂಣಿಯಲ್ಲಿದೆ. ಇವರ ಪತಿ ಬಿ.ವೆಂಕಟೇಶ್‌ 16ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಕ್ರಷರ್‌ ಮಾಲೀಕರಾಗಿರುವ ವೆಂಕಟೇಶ್‌ ಆರ್ಥಿಕವಾಗಿಯೂ ಪ್ರಬಲರು. ಬಿಎಸ್‌ಆರ್‌ ಕಾಂಗ್ರೆಸ್‌ನಲ್ಲಿದ್ದ ಇವರು ಬಿ.ಶ್ರೀರಾಮುಲು ಬೆಂಬಲಿಗರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಶ್ರೀರಾಮುಲು ಪರ ಕೆಲಸ ಮಾಡಿದ್ದರು. ಈ ಶ್ರಮ ಅವರಿಗೆ ಶ್ರೀರಕ್ಷೆಯಾಗುವ ಸಾಧ್ಯತೆ ಇದೆ.

ಹಿಂದುಳಿದ ವರ್ಗ ‘3ಬಿ’ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳೇ ಇಲ್ಲ. ಪಕ್ಷದಲ್ಲಿ ಯಾವೊಬ್ಬ ಸದಸ್ಯರೂ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. 29ನೇ ವಾರ್ಡ್‌ನಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಬಿ.ಎನ್‌.ಸುಮಿತಾ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ಇವರ ಪತಿ ರಘು ಕಳೆದ ಬಾರಿ ನಗರಸಭೆ ಸದಸ್ಯರಾಗಿದ್ದರು.

11ನೇ ವಾರ್ಡ್‌ನಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಜಿ.ಎಸ್‌.ಜಯಂತಿ ಕೂಡ ಹಿಂದುಳಿದ ವರ್ಗ ‘3ಬಿ’ಗೆ ಸೇರಿದವರು. 14ನೇ ವಾರ್ಡ್‌ಗೆ ಕಾಂಗ್ರೆಸ್‌ ನೀಡಿದ್ದ ಟಿಕೆಟ್‌ ತಿರಸ್ಕರಿಸಿ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಇವರ ಪತಿ ಮಂಜುನಾಥ್‌ ಗೊಪ್ಪೆ ಕಳೆದ ಬಾರಿ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ಮಂಜುನಾಥ್‌ ಪತ್ನಿ ಜಯಂತಿ ಅವರಿಗೆ ಉಪಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಕಡಿಮೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !