ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೂರ್ತಿ ಮುರುಘಾ ಶರಣರ ಶೂನ್ಯಪೀಠಾರೋಹಣ

ಶ್ರೀಮಠದ ಕರ್ತೃ ಮುರುಗಿ ಶಾಂತವೀರಸ್ವಾಮೀಜಿ ಅವರ ಗದ್ದುಗೆಗೆ ಭಕ್ತಿ ಸಮರ್ಪಿಸಿದ ಶರಣರು
Last Updated 9 ಅಕ್ಟೋಬರ್ 2019, 11:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಶರಣಸಂಸ್ಕೃತಿ ಉತ್ಸವದ ವೀಕ್ಷಣೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಶಿವಮೂರ್ತಿ ಮುರುಘಾ ಶರಣರು ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಶೂನ್ಯ ಪೀಠಾರೋಹಣ’ ಮಾಡಿದರು.

ಶೂನ್ಯಪೀಠ ಪರಂಪರೆಯಂತೆ ಶ್ರೀಮಠದ ಪೀಠಾಧ್ಯಕ್ಷರಾದ ಮುರುಘಾ ಶರಣರು ಮಠದ ಪ್ರಾಂಗಣದಲ್ಲಿರುವ ಮುರುಘಾಮಠದ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿ ಅವರ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.

ಚಿನ್ನದ ಕಿರೀಟ ಸೇರಿ ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಕೈಯಲ್ಲಿ ಹಿಡಿದರು. ನಾಡಿನ ವಿವಿಧ ಮಠದ ಸ್ವಾಮೀಜಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರು, ಸದಸ್ಯರು, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ನೂರಾರು ಜನ ಸಮೂಹ ಜಯಘೋಷಣೆಗಳೊಂದಿಗೆ ಪೀಠಾರೋಹಣ ವೀಕ್ಷಿಸಿದರು.

ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾಮಠದ ಶೂನ್ಯಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಶಿವಮೂರ್ತಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟಧಾರಣೆ ಮಾಡಿ, ಸರಳವಾಗಿ ಪೀಠಾರೋಹಣ ಮಾಡಿದರು. ಹಿಂದಿನ ಸ್ವಾಮೀಜಿಗಳು ಚಿನ್ನದ ಕಿರೀಟ ಹಾಗೂ ಬಂಗಾರದ ಪಾದುಕೆ ಧರಿಸಿ ಪೀಠಾರೋಹಣ ಮಾಡುತ್ತಿದ್ದರು. ಶರಣರು ಪೀಠಾಧ್ಯಕ್ಷರಾದ ಬಳಿಕ ಈ ಪರಂಪರೆ ಬದಲಾಗಿದೆ.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ಶೂನ್ಯಪೀಠಾರೋಹಣ ವೀಕ್ಷಣೆ ಮಾಡಿ, ಶರಣರಿಗೆ ಫಲಪುಷ್ಪ ಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದರು.

ಭೋವಿ ಗುರುಪೀಠದಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಹರಳಯ್ಯ ಗುರುಪೀಠದ ಶರಣ ಹರಳಯ್ಯ ಸ್ವಾಮೀಜಿ, ಮೇದಾರ ಗುರುಪೀಠದ ಬಸವಪ್ರಭು ಕೇತೇಶ್ವರ ಸ್ವಾಮೀಜಿ ಶೂನ್ಯಪೀಠಾರೋಹಣದ ಕ್ಷಣಕ್ಕೆ ಸಾಕ್ಷಿಯಾದರು.

ಶರಣಸಂಸ್ಕೃತಿ ಉತ್ಸವದ ಐತಿಹಾಸಿಕ ಸನ್ನಿವೇಶಗಳಿಗೆ ಶ್ರೀಮಠವನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ರಾಜಾಂಗಣದಲ್ಲಿ ಬಿಡಿಸಿದ್ದ ಹೂವಿನ ಬೃಹತ್ ಅಲಂಕಾರ ಎಲ್ಲರ ಗಮನ ಸೆಳೆಯಿತು. ಸಾವಿರಾರು ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT