ಗುರುವಾರ , ಮಾರ್ಚ್ 4, 2021
16 °C
ಆಹಾರ ಧಾನ್ಯ ವಿತರಿಸಿ ಮಾನವೀತೆ ಮೆರೆದ ಮುರುಘಾ ಮಠ

ಚಿತ್ರದುರ್ಗ: ಲಾಕ್‌ಡೌನ್‌ ನಡುವೆ ನಡೆದ ದಾಸೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುರುಘಾ ಮಠದ ಆವರಣದ ಹಸಿರು ಹಾಸಿನ ಮೇಲೆ ಕುಳಿತವರ ಮೊಗದಲ್ಲಿ ದುಗುಡವಿತ್ತು. ಅಕ್ಕಿ, ಬೇಳೆ, ರಾಗಿ ಸೇರಿ ಆಹಾರ ಧಾನ್ಯಗಳ ಚೀಲ ಕೈಸೇರುತ್ತಿದ್ದಂತೆ ಅನೇಕರ ಭಾವನೆಗಳು ಬದಲಾದವು. ಲಾಕ್‌ಡೌನ್ ನಡುವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕುಟುಂಬ ನಿರ್ವಹಣೆಗೆ ಪರಿತಪಿಸುತ್ತಿದ್ದವರು ಮುಗುಳ್ನಗೆ ಬೀರಿದರು.

ಕೊರೊನಾ ನಿಯಂತ್ರಣಕ್ಕೆ ಘೋಷಣೆ ಮಾಡಿದ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿದ ಬಡವರ ಕುಟುಂಬಕ್ಕೆ ಶಿವಮೂರ್ತಿ ಮುರುಘಾ ಶರಣರು ತಿಂಗಳು ಕಾಲ ನೆರವಾಗಿದ್ದಾರೆ. ಏ.4 ರಿಂದ ಆರಂಭವಾದ ಆಹಾರ ಧಾನ್ಯ ವಿತರಿಸುವ ‘ದಾಸೋಹ’ ನಿರಂತರವಾಗಿ ನಡೆಯಿತು. ಸಾವಿರಾರು ಜನರು ಇದರ ಪ್ರಯೋಜನ ಪಡೆದರು.

ಸಂಕಷ್ಟ ಸಿಲುಕಿದ ಕುಟುಂಬಗಳು ಮುರುಘಾ ಮಠಕ್ಕೆ ಧಾವಿಸಿ ನೆರವು ಪಡೆದವು. ಕುಟುಂಬವೊಂದಕ್ಕೆ ಅಗತ್ಯ ಇರುವ ಧಾನ್ಯಗಳನ್ನು ಚೀಲದಲ್ಲಿ ತುಂಬಿ ನೀಡಲಾಯಿತು. ಅಗತ್ಯ ಇರುವವರು ಒಂದು ದಿನ ಮುಂಚಿತವಾಗಿ ಟೋಕನ್‌ ಪಡೆಯಬೇಕಿತ್ತು. ನಿತ್ಯ ಬೆಳಿಗ್ಗೆ 10.30ಕ್ಕೆ ಧಾನ್ಯ ವಿತರಣೆ ನಡೆಯಿತು. ನೆರವು ಕೇಳಿ ಬರುವವರಿಗೆ ಬೆಳಗಿನ ಉಪಾಹಾರವನ್ನು ನೀಡಲಾಯಿತು.

ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದ ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿಯ ನೆರವಿಗೂ ಮಠ ಧಾವಿಸಿತು. ಸೋಂಕಿನಿಂದ ರಕ್ಷಣೆ ನೀಡುವ ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ನೀಡಿತು. ಅಗತ್ಯ ಸ್ಥಗಳಲ್ಲಿ ಸಿಂಪಡೆಣೆ ಮಾಡಲು ರಾಸಾಯನಿಕ ದ್ರಾವಣ ಹಾಗೂ ಯಂತ್ರವನ್ನು ಒದಗಿಸಿತು.

ದೇವರನ್ನು ಕಟ್ಟಿಹಾಕಿದ ಸೋಂಕು:

ಆಹಾರ ಧಾನ್ಯ ವಿತರಿಸಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ‘ಕೊರೊನಾ ಸೋಂಕು ಅಸಹಾಯಕತೆ ಸೃಷ್ಟಿಸಿದೆ. ದೇವರು, ಧರ್ಮವನ್ನು ಕಟ್ಟಿಹಾಕಿದೆ. ಬಡ ಕುಟುಂಬಗಳು ಅನ್ನವಿಲ್ಲದೇ ಪರಿತಪ್ಪಿಸುತ್ತಿವೆ. ಕೆಲವರ ಬಳಿ ಅನ್ನವಿದ್ದರೂ ತಿನ್ನಲಾರದ ಸ್ಥಿತಿಯಲ್ಲಿದ್ದಾರೆ. ಜಗುಪ್ಸೆ, ಏಕಾಂಗಿತನ ಎಲ್ಲರನ್ನೂ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂತಹ ವಿಷಮ ಸ್ಥಿತಿಯಲ್ಲಿ ಮನೆಗಳೇ ಸುರಕ್ಷಿತ. ಬೀದಿ ಸಂಚಾರ ಅಪಾಯ ತಂದೊಡ್ಡಬಹುದು. ಎಲ್ಲರೂ ಗೃಹ ಬಂಧನ ಹಾಗೂ ರಾಷ್ಟ್ರ ಬಂಧನದಲ್ಲಿದ್ದೇವೆ. ಶಿಸ್ತುಬದ್ಧ ಜೀವನ ಶೈಲಿ ರೂಪಿಸಿಕೊಂಡು ಅಂತರ ಕಾಯ್ದುಕೊಂಡರೆ ಅಪಾಯದಿಂದ ಪಾರಾಬಹುದು’ ಎಂದು ಹೇಳಿದರು.

‘ಮನೆ–ಮಠಕ್ಕೆ ಬರಬೇಡಿ ಎಂದು ಹೇಳುವ ಸಂದರ್ಭದಲ್ಲಿ ಭಕ್ತರಿಗೆ ಆಹ್ವಾನ ನೀಡಿದೆವು. ಸಂಕಷ್ಟಕ್ಕೆ ಸಿಲುಕಿದವರಿಗೆ ಧಾನ್ಯ ವಿತರಿಸಿ ಮಾನವೀಯತೆ ಮೆರೆದಿದ್ದೇವೆ. ಮುರುಘಾ ಮಠದ ಸೇವೆ ಮುಂದೊಂದು ದಿನ ಇತಿಹಾಸದಲ್ಲಿ ದಾಖಲಾಗಲಿದೆ’ ಎಂದು ಅಭಿಪ್ರಾಯಪಟ್ಟರು.

50 ಕ್ವಿಂಟಲ್‌ ಅಕ್ಕಿ:

ಬಡ ಕುಟುಂಬಗಳಿಗೆ ನೆರವು ನೀಡಿದ ಮಠಕ್ಕೆ 50 ಕ್ವಿಂಟಲ್ ಅಕ್ಕಿ ನೀಡುವುದಾಗಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಘೋಷಣೆ ಮಾಡಿದರು.

‘ಜನರ ಕಷ್ಟಕ್ಕೆ ನೆರವಾದ ಮಠದ ಕಾರ್ಯ ಶ್ಲಾಘನೀಯ. ನಿರ್ಗತಿಕರು ಹಾಗೂ ಬಡ ಕುಟುಂಬಗಳ ಏಳಿಗೆಗೆ ಶ್ರಮಿಸುತ್ತಿರುವ ಪರಿ ಅನುಕರಣೀಯ. ಜಯದೇವ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ ಪರಂಪರೆಯಲ್ಲಿ ಸಾಗುತ್ತಿರುವ ಮುರುಘಾ ಶರಣರು ಮಠವನ್ನು ವಿಶ್ವವಿಖ್ಯಾತಗೊಳಿಸಿದ್ದಾರೆ. ಸರ್ವ ಜನಾಂಗಗಳಿಗೂ ಆಹಾರ ಧಾನ್ಯ ವಿತರಿಸಿದ್ದಾರೆ’ ಎಂದು ಹೇಳಿದರು.

‘ಹಸಿರು ವಲಯದಲ್ಲಿದ್ದ ದಾವಣಗೆರೆಯಲ್ಲಿ ಏಕಾಏಕಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ಪರಿಸ್ಥಿತಿ ಚಿತ್ರದುರ್ಗಕ್ಕೆ ಬರಬಾರದು. ಇಟಲಿ, ಅಮೆರಿಕದಂತಹ ದೇಶಗಳೇ ದಯನೀಯ ಸ್ಥಿತಿಗೆ ತಲುಪಿವೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಅಂತರವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್, ಜಯಣ್ಣ, ಪೈಲ್ವಾನ್ ತಿಪ್ಪೇಸ್ವಾಮಿ, ವಕೀಲರಾದ ಉಮೇಶ್, ಸಿಪಿಐ ಗಿರೀಶ್, ವೀರೇಂದ್ರಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.