ಶುಕ್ರವಾರ, ಏಪ್ರಿಲ್ 23, 2021
31 °C
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಹೇಳಿಕೆ

ದಾಹ ನೀಗಿಸಲು ಮಜ್ಜಿಗೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬೇಸಿಗೆ ಧಗೆ ತಗ್ಗಿಸಲು ಹಾಗೂ ಜನರ ದಾಹ ನೀಗಿಸುವ ಉದ್ದೇಶದಿಂದ ಮಜ್ಜಿಗೆಯನ್ನು ಎರಡು ತಿಂಗಳು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ದಂತ ವೈದ್ಯಕೀಯ ಕಾಲೇಜು ಸಮೀಪ ಮುರುಘಾ ಮಠದ ವತಿಯಿಂದ ಏರ್ಪಡಿಸಿದ ಮಜ್ಜಿಗೆ ವಿತರಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳು ಶಿವದಾನ ಕಾರ್ಯಕ್ರಮ ನಡೆಯಲಿದೆ. ಇದೊಂದು ಉತ್ತಮ ಸೇವೆ ಎಂದು ಪರಿಗಣಿಸಿ ಮಠ ಈ ಪರಂಪರೆ ಆರಂಭಿಸಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈಗಾಗಲೇ 36 ಡಿಗ್ರಿ ತಾಪಮಾನವಿದೆ. ಎರಡು ತಿಂಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮಠದ ಕಾರ್ಯದಿಂದ ಪ್ರೇರಣೆಗೊಂಡ ಅನೇಕರು ಇದಕ್ಕೆ ಕೈಜೋಡಿಸಿದ್ದಾರೆ. ಯಾರ ನೆರವು ಸಿಗದಿದ್ದರೂ ಮಠ ಇದನ್ನು ಮುಂದುವರಿಸುತ್ತದೆ’ ಎಂದರು.

‘ಉತ್ತಮ ಕಾರ್ಯಗಳಿಗೆ ಮುರುಘಾ ಮಠ ಸದಾ ಮುಂದೆ ಇರುತ್ತದೆ. ಒಂದಿಲ್ಲೊಂದು ಪ್ರಯೋಗಮುಖಿ ಕಾರ್ಯಗಳನ್ನು ಮಾಡುತ್ತಿದೆ. ಮುರುಘಾ ಮಠದ ಸಮಾಜೋಪಯೋಗಿ ಕಾರ್ಯಗಳು ಅನುಕರಣೀಯ. ಉತ್ತಮ ಕೆಲಸಗಳಿಗೆ ಮುಂದೆ ಇದ್ದು, ಕೆಟ್ಟ ಕೆಲಸಗಳಿಗೆ ಹಿಂದಿರಬೇಕು’ ಎಂದು ಕಿವಿಮಾತು ಹೇಳಿದರು.

ಸರ್ಕಾರಕ್ಕೆ ಧನ್ಯವಾದ: ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಕಲ್ಪಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬಯಲುಸೀಮೆಯ ರೈತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

‘ಪ್ರಾಕೃತಿಕ ಅಸಮತೋಲನದ ಪರಿಣಾಮವಾಗಿ ಮಧ್ಯ ಕರ್ನಾಟಕದ ಚಿತ್ರದುರ್ಗ, ತುಮಕೂರು ಹಾಗೂ ‌ಕೋಲಾರ ಜಿಲ್ಲೆಗಳು ಶಾಶ್ವತ ಬರಪೀಡಿತವಾಗಿವೆ. ಈ ಭಾಗಕ್ಕೆ ನೀರಾವರಿ ಯೋಜನೆ ಕಲ್ಪಿಸಿದರೆ ಜನರ ಬದುಕು ಹಸನವಾಗುತ್ತದೆ. ಇದೇ ಉದ್ದೇಶದಿಂದ ಮಠಾಧೀಶರು ಹೋರಾಟಕ್ಕೆ ನೇತೃತ್ವ ವಹಿಸಿದ್ದರು’ ಎಂದರು.

‘ರೈತರು ಹಾಗೂ ನೀರಾವರಿ ಹೋರಾಟಗಾರರ ಶ್ರಮದಿಂದ ಯೋಜನೆ ಸಾಕಾರಗೊಂಡಿದೆ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ ಶಿಫಾರಸಿಗೆ ಕೇಂದ್ರ ಒಪ್ಪಿಗೆ ನೀಡಿದೆ. ₹ 16 ಸಾವಿರ ಕೋಟಿ ಅನುದಾನ ಸಿಗುತ್ತಿರುವುದು ಸಂತಸವುಂಟು ಮಾಡಿದೆ’ ಎಂದು ಹೇಳಿದರು.

ದೇನಾ ಭಾಗವತ್ ಗುರೂಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮೀಜಿ, ಹನುಮಲಿ ಷಣ್ಮುಖಪ್ಪ, ಎ.ಜೆ. ಪರಮಶಿವಯ್ಯ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.