ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರ ಅಧಿಕಾರ ನಿರ್ಬಂಧಿಸಿದ ಅರ್ಜಿ ವಿಚಾರಣೆ 13ಕ್ಕೆ

Last Updated 9 ಫೆಬ್ರವರಿ 2023, 14:18 IST
ಅಕ್ಷರ ಗಾತ್ರ

ಬೆಂಗಳೂರು:‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ವಿಧಿಸಲಾಗಿರುವ ನಿರ್ಬಂಧ ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್‌ ಇದೇ 13ರಂದು ವಿಚಾರಣೆ ನಡೆಸಲಿದೆ.

ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯ 2022ರ ಡಿಸೆಂಬರ್‌ 15ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಮುರುಘಾ ಶರಣರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿತ್ತು.

ವಿಚಾರಣೆ ದಿನದಂದು ಹಾಜರಾಗಿದ್ದ ಅಡ್ವೊಕೇಟ್ ಜನರಲ್‌; ಮಠದ ಆಡಳಿತಾಧಿಕಾರಿ ಪ್ರಶ್ನಿಸಿದ ಅರ್ಜಿ ವಿಚಾರಣೆ ಇದೇ ಹೈಕೋರ್ಟ್‌ನ ಮತ್ತೊಂದು ಪೀಠದಲ್ಲಿ ನಡೆಯುತ್ತಿರುವ ಕಾರಣ ಇದನ್ನೂ ಅದೇ ಅರ್ಜಿಯ ಜೊತೆಗೆ ಸೇರ್ಪಡೆ ಮಾಡಲು ಮನವಿ ಮಾಡಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ನ್ಯಾಯಪೀಠ, ಮತ್ತೊಂದು ರಿಟ್‌ ಅರ್ಜಿಯ ಜೊತೆಗೇ ಇದೂ ವಿಚಾರಣೆಗೆ ಒಳಪಡುವುದು ಸೂಕ್ತ ಎಂದು ಬೇರೊಂದು ಪೀಠಕ್ಕೆ ವರ್ಗಾಯಿಸುವಂತೆ ನಿರ್ದೇಶಿಸಿದ್ದರು. ಈ ಕಾರಣಕ್ಕಾಗಿ ಈ ಅರ್ಜಿ ಈಗ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿದೆ.

ವರ್ಗಾವಣೆಗೊಂಡಿರುವ ಅರ್ಜಿಯನ್ನು ಶುಕ್ರವಾರದಂದು (ಫೆ.10) ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಶರಣರ ಪರ ವಕೀಲರು ಗುರುವಾರ (ಫೆ.9) ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಆಡಳಿತಾಧಿಕಾರಿ ಪ್ರಶ್ನಿಸಿದ ಮತ್ತು ಅಧಿಕಾರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳನ್ನು ಇದೇ 13ಕ್ಕೆ ವಿಚಾರಣೆಗೆ ನಿಗದಿಪಡಿಸುವಂತೆ ಸೂಚಿಸಿದೆ.

ಪ್ರಕರಣಗಳು: ಮುರುಘಾ ಶರಣರ ವಿರುದ್ಧ ಪೊಕ್ಸೊ ಕಾಯ್ದೆ–2012ರ ಕಲಂ 17,5 (ಎಲ್‌),6 ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 376 (2), 376 (ಡಿಎ) 376 (3), 201, 202, 506ರ ಜೊತೆಗೆ ಓದಿಕೊಳ್ಳಲಾಗುವ 34,3 ಹಾಗೂ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಕಲಂ 2 ಹಾಗೂ 3 (ಎಫ್‌), 7 ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ಕಲಂ 3 (1) (ಡಬ್ಲ್ಯು) (i) ಮತ್ತು (ii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬೃಹನ್ಮಠದಲ್ಲೇ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು (ವಿಚಾರಣಾಧೀನ ಬಂದಿ ಸಂಖ್ಯೆ: 2261) ಕಾನೂನು ವಿಚಾರಣೆಯ ವಿವಿಧ ಹಂತಗಳ ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT