ಭಾನುವಾರ, ಮೇ 29, 2022
23 °C
ಕಡತ ಸಹಿತ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ

ಅಕ್ಷಯ ಫುಡ್‌ಪಾರ್ಕ್‌ ಕಾರ್ಯವೈಖರಿಗೆ ಸಚಿವ ಎನ್‌.‌‌ಮುನಿರತ್ನ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನಲ್ಲಿ ನಿರ್ಮಾಣದ ಹಂತದಲ್ಲಿರುವ ಅಕ್ಷಯ ಫುಡ್‌ಪಾರ್ಕ್‌ ಕಾರ್ಯವೈಖರಿಗೆ ತೋಟಗಾರಿಕೆ ಸಚಿವ ಎನ್‌.ಮುನಿರತ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಾರ್ಕ್‌ಗೆ ಸಂಬಂಧಿಸಿದ ಕಡತ ಹಾಗೂ ವರದಿಯನ್ನು ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಕ್ಷಯ ಫುಡ್‌ಪಾರ್ಕ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸಿಕ್ಕಿದೆ. ಇದು ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. ರಸ್ತೆ ಇಲ್ಲದಿರುವ ನೆಪ ಮುಂದಿಟ್ಟುಕೊಂಡು ಗುತ್ತಿಗೆದಾರ ಅಸಹಕಾರ ನೀಡುತ್ತಿರುವುದು ತಪ್ಪು. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ಹೇಳಿದರು.

‘ಫುಡ್‌ಪಾರ್ಕ್‌ನಲ್ಲಿರುವ ಕೋಲ್ಡ್‌ಸ್ಟೋರೇಜ್ ರೈತರಿಗೆ ಉಪಯೋಗವಾಗಬೇಕು. ರಸ್ತೆ ನಿರ್ಮಾಣಕ್ಕೆ ₹ 18 ಕೋಟಿಯ ಕ್ರಿಯಾಯೋಜನೆ ಸಿದ್ಧವಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸಿ ಸಹಕರಿಸಬೇಕು. ಫುಡ್‌ಪಾರ್ಕ್‌ ಸ್ಥಗಿತವಾಗಲು ಅಥವಾ ನನೆಗುದಿಗೆ ಬೀಳಲು ಅವಕಾಶ ನೀಡಬಾರದು’ ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಫುಡ್‌ಪಾರ್ಕ್‌ಗೆ 106 ಎಕರೆ ಭೂಮಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಬ್ಸಿಡಿ ಸಿಕ್ಕಿದೆ. ಪಾರ್ಕ್‌ ನಿರ್ಮಾಣವಾಗಿ ಹಲವು ವರ್ಷ ಕಳೆದರೂ ಜಿಲ್ಲೆಯ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೂಡಲೇ ಸಭೆ ಕರೆಯಬೇಕು’ ಎಂದರು.

ಶಾಸಕಿ ಕೆ.ಪೂರ್ಣಿಮಾ, ‘ಫುಡ್‌ಪಾರ್ಕ್‌ ನಾಲ್ಕು ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಪಾರ್ಕ್‌ ಸ್ಥಾಪನೆಯಾಗಿ ಹಲವು ವರ್ಷಗಳಾದರೂ ರೈತರಿಗೆ ಪ್ರಯೋಜನವಾಗಿಲ್ಲ. ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಇಲ್ಲಿ ಖರೀದಿ ಮಾಡುತ್ತಿಲ್ಲ. ರಸ್ತೆ ಇಲ್ಲದಿರುವ ನೆಪ ಹೇಳಿಕೊಂಡು ಕಾಲಾಹರಣ ಮಾಡಲಾಗುತ್ತಿದೆ. ಖಾಸಗಿ ವ್ಯಕ್ತಿಗೆ ನೀಡಿದ ಭೂಮಿಯನ್ನು ಸರ್ಕಾರ ಮರಳಿ ಪಡೆಯುವುದು ಸೂಕ್ತ’ ಎಂದು ಸಲಹೆ ನೀಡಿದರು.

ಕೋಲ್ಡ್‌ ಸ್ಟೋರೇಜ್‌ಗೆ ಒತ್ತು

‘ಜಿಲ್ಲೆಯಲ್ಲಿ ಹೂ, ಹಣ್ಣು ಮತ್ತು ತರಕಾರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ಇವುಗಳನ್ನು ದಾಸ್ತಾನು ಮಾಡುವ ಹಾಗೂ ಮಾರುಕಟ್ಟೆ ಒದಗಿಸುವ ಸಮಸ್ಯೆ ರೈತರಿಗೆ ಎದುರಾಗಿದೆ. ಚಳ್ಳಕೆರೆಯಲ್ಲಿ ಒಣಮೆಣಸಿನಕಾಯಿ ಹಾಗೂ ಹುಣಸೆಗೆ ಖಾಸಗಿ ಕೋಲ್ಡ್‌ಸ್ಟೋರೇಜ್‌ ನಿರ್ಮಾಣವಾಗಿವೆ. ಸರ್ಕಾರದ ವತಿಯಿಂದ ಕನಿಷ್ಠ ಎರಡು ಕಡೆ ಕೋಲ್ಡ್‌ಸ್ಟೋರೇಜ್‌ ನಿರ್ಮಿಸುವ ಅಗತ್ಯವಿದೆ’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಗಮನ ಸೆಳೆದರು.

‘ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆಯುವ ಕತ್ತಳೆ ವಿದೇಶಕ್ಕೆ ರಫ್ತಾಗುತ್ತಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಈ ಬೆಳೆಗೆ ಉತ್ತೇಜನ ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯ ಹಲವು ಪ್ರದೇಶದಲ್ಲಿ ಈ ಇದನ್ನು ಬೆಳೆಯಲು ಅವಕಾಶವಿದೆ. ಅಧಿಕಾರಿಗಳು ಸೂಕ್ತ ಸಲಹೆ ಹಾಗೂ ಪ್ರೋತ್ಸಾಹ ನೀಡಬೇಕು’ ಎಂದು ಕೋರಿಕೊಂಡರು.

ಇದಕ್ಕೆ ಸ್ಪಂದಿಸಿದ ಸಚಿವ ಮುನಿರತ್ನ, ‘ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಸೇರಿ ಜಿಲ್ಲೆಯ ಹಲವೆಡೆ ಅಂತರ್ಜಲಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸುವ ಅಗತ್ಯವಿದೆ. ಬೆಳೆ ದಾಸ್ತಾನಿಗೆ ಕೋಲ್ಡ್‌ಸ್ಟೋರೇಜ್‌ ನಿರ್ಮಾಣಕ್ಕೂ ಕ್ರಮವಹಿಸಲಾಗುವುದು. ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು’ ಎಂದು ಹೇಳಿದರು.

‘ವಿಶಾಲ ಸ್ಮಶಾನ ನಿರ್ಮಿಸಿ’

ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ನಿರ್ಮಿಸುವ ಅಗತ್ಯವಿದೆ. ಎರಡು ಅಥವಾ ಮೂರು ಎಕರೆಯಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿದರೆ ಸಾಲದು. ಸಾಧ್ಯವಾದಷ್ಟು ಹೆಚ್ಚು ಭೂಮಿ ಸ್ವಾಧೀನಕ್ಕೆ ಪಡೆದು ಸ್ಮಶಾನ ನಿರ್ಮಿಸಿ ಎಂದು ಸಚಿವ ಮುನಿರತ್ನ ಸಲಹೆ ನೀಡಿದರು.

‘ಸಾರ್ವಜನಿಕ ಸ್ಮಶಾನಗಳಲ್ಲಿ ಎಲ್ಲ ಸಮುದಾಯದ ಜನರಿಗೂ ಅವಕಾಶ ಸಿಗಲಿದೆ. ಜನಸಂಖ್ಯೆ ಬೆಳೆದಂತೆ ಸ್ಮಶಾನ ಸಾಕಾಗದು. ಬೆಂಗಳೂರಿನ ಪರಿಸ್ಥಿತಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಸ್ಮಶಾನ ಸಂರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಸೂಚನೆ ನೀಡಿದರು.

ತೋಟಗಾರಿಕೆ ಕಾಲೇಜು ಮೇಲ್ದರ್ಜೆಗೆ ನೆರವು

ಹಿರಿಯೂರು ತಾಲ್ಲೂಕಿನ ತೋಟಗಾರಿಕೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುನಿರತ್ನ ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕಿ ಕೆ.ಪೂರ್ಣಿಮಾ, ‘ಹಿರಿಯೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಕಾಲೇಜು ಇದೆ. ಪದವಿ ವ್ಯಾಸಂಗಕ್ಕೆ ಅವಕಾಶವಿದೆ. ಸ್ನಾತಕೋತ್ತರ ಪದವಿಗೂ ಅವಕಾಶ ಕಲ್ಪಿಸಿ, ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿದರೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಕೆರೆ ಅಂಗಳದಲ್ಲಿ ಟ್ರೀಪಾರ್ಕ್‌

ತಿಮ್ಮಣ್ಣನಾಯಕ ಕೆರೆ ಅಂಗಳದಲ್ಲಿ ಟ್ರೀಪಾರ್ಕ್‌ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸುವಂತೆ ತೋಟಗಾರಿಕೆ ಸಚಿವ ಮುನಿರತ್ನ ಸೂಚನೆ ನೀಡಿದರು. ಕೆರೆ ಅಂಗಳದಲ್ಲಿ ಟ್ರೀಪಾರ್ಕ್‌ ನಿರ್ಮಾಣ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ ಎಂಬ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಕೋರಿಕೆಗೆ ಸ್ಪಂದಿಸಿದರು.

‘ಕೋಟೆ, ಮೃಗಾಲಯಕ್ಕೆ ಹೊಂದಿಕೊಂಡಿರುವ ತಿಮ್ಮಣ್ಣನಾಯಕ ಕೆರೆ ಅಂಗಳದಲ್ಲಿ ಉದ್ಯಾನ ನಿರ್ಮಿಸುವುದು ಸೂಕ್ತ. ಈ ಹಿಂದೆ ನಡೆದ ಪ್ರಯತ್ನ ನನೆಗುದಿಗೆ ಬಿದ್ದಿದೆ. ಸರ್ಕಾರ ಮತ್ತೊಮ್ಮೆ ಇದನ್ನು ಕೈಗೆತ್ತಿಕೊಳ್ಳಬೇಕು’ ಎಂದು ತಿಪ್ಪಾರೆಡ್ಡಿ ಮನವಿ ಮಾಡಿಕೊಂಡರು.

ಪಿಂಚಣಿ ಪಡೆಯಲು ಸಾರ್ವಜನಿಕರನ್ನು ಅಲೆದಾಡಿಸುವುದು ತಪ್ಪು. ಪಿಂಚಣಿ ನಂಬಿಕೊಂಡು ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಸಕಾಲಕ್ಕೆ ನೆರವು ಸಿಗದಿದ್ದರೆ ತೊಂದರೆ ಆಗುತ್ತದೆ. ಈ ವಿಚಾರದಲ್ಲಿ ಲೋಪವಾದರೆ ಸಹಿಸಲು ಸಾಧ್ಯವಿಲ್ಲ.

- ಎನ್‌.ಮುನಿರತ್ನ, ಸಚಿವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು