ಮೊಳಕಾಲ್ಮುರು: ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಶುಕ್ರವಾರವೂ ಹೊಸದಾಗಿ 21 ಜನ ಅಸ್ವಸ್ಥರಾಗಿದ್ದು, ಗ್ರಾಮಸ್ಥರ ಆತಂಕ ಮುಂದುವರಿದಿದೆ.
ಗುರುವಾರ ಸಂಜೆವರೆಗೆ 56 ಪ್ರಕರಣಗಳು ವರದಿಯಾಗಿದ್ದವು. ಗುರುವಾರ ರಾತ್ರಿ 3, ಶುಕ್ರವಾರ ಸಂಜೆವರೆಗೆ 21 ಪ್ರಕರಣ ಸೇರಿದಂತೆ ಒಟ್ಟು 80 ಜನರಲ್ಲಿ ವಾಂತಿ ಭೇದಿ ಕಂಡುಬಂದಿದೆ. ಈ ಪೈಕಿ ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 11, ನಾಗಸಮುದ್ರ ಕೇಂದ್ರದಲ್ಲಿ ಇಬ್ಬರು ದಾಖಲಾಗಿದ್ದಾರೆ. ಶುಕ್ರವಾರ ಸಿಂಧು, ಗಂಗಾಧರ್ ಸೇರಿದಂತೆ ಒಟ್ಟು 4 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸುಧಾರಣೆಯಾಗುತ್ತಿದೆ.
‘ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಠಿಕಾಣಿ ಹೂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಸಿಬ್ಬಂದಿ ತಂಗಲಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಕುಮಾರ್ ತಿಳಿಸಿದರು.
‘ಘಟನೆಗೆ ಕಲುಷಿತ ನೀರು ಪೂರೈಕೆ ಮುಖ್ಯ ಕಾರಣವಾಗಿದೆ. ಗ್ರಾಮದಿಂದ ಪಡೆದಿದ್ದ 4 ನೀರಿನ ಮಾದರಿಗಳಲ್ಲಿ ಎಲ್ಲ ಮಾದರಿಗಳೂ ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಘಟನೆಗೆ ಯಾವ ಬ್ಯಾಕ್ಟೀರಿಯ ಕಾರಣ ಎಂದು ಪತ್ತೆ ಹಚ್ಚಲು ನೀರಿನ ವರದಿಯನ್ನು ಬೆಂಗಳೂರಿಗೆ ಕಳಿಸಿದ್ದು, ಇದರ ವರದಿ ಸೋಮವಾರ ಕೈಸೇರಲಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ವರದಿ ನೀಡಲಾಗಿದೆ’ ಎಂದು ಹೇಳಿದರು.
‘ಘಟನೆ ನಂತರ ನೀರು ಪೂರೈಕೆ ಮಾಡುವ ಪೈಪ್‌ಪೈನ್ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದ್ದು, 8 ಕಡೆ ಪೈಪ್ ಒಡೆದಿತ್ತು. ಪ್ರಕರಣ ಹೆಚ್ಚು ಕಂಡುಬಂದಿರುವ 2, 3ನೇ ವಾರ್ಡ್‌ಗೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಕಡ್ಡಾಯವಾಗಿ ಶುದ್ಧೀಕರಣ ಘಟಕದ ನೀರು ಕುಡಿಯುವಂತೆ ತಾಕೀತು ಮಾಡಲಾಗಿದೆ. ಗ್ರಾಮದಲ್ಲಿ ಪೈಪ್ ಒಡೆಯಲು ಲಾರಿಗಳ ಓಡಾಟ ಕಾರಣವಾಗಿದ್ದು, ಲಾರಿಗಳು ಊರಿನ ಒಳಗೆ ಬಾರದಂತೆ ತಡೆಯಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ.ಇ. ಜಾನಕೀರಾಮ್ ಮಾಹಿತಿ ನೀಡಿದರು.
‘ರಸ್ತೆಗಳ ಬದಿ ಸ್ವಚ್ಛತೆ, ಗ್ರಾಮದಲ್ಲಿದ್ದ 26 ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದು ಪಿನಾಯಿಲ್, ಬ್ಲೀಚಿಂಗ್ ಪುಡಿ ಸಿಂಪರಣೆ ಮಾಡಲಾಗಿದೆ. ಟ್ಯಾಂಕರ್‌ಗಳನ್ನು ಕ್ಲೋರಿನೇಷನ್ ಮಾಡಲಾಗಿದ್ದು, ಬೆಳಿಗ್ಗೆ, ಸಂಜೆ ಇದರ ಮಾಹಿತಿ ಪಡೆಯಲಾಗುತ್ತಿದೆ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 78 ವರ್ಷ ವಯಸ್ಸಿನ ವೃದ್ಧೆ ಹೆಚ್ಚು ನಿತ್ರಾಣವಾಗಿರುವ ಮಾಹಿತಿ ಇದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.