ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಸಂಚಾರ ತಡೆಗೆ ನಾಕಬಂದಿ

ಬ್ಯಾರಿಕೇಡ್‌, ಪೋಲ್ಸ್‌ ಬಳಸಿ ರಸ್ತೆ ನಿರ್ಬಂಧಿಸಿದ ‍ಪೊಲೀಸರು
Last Updated 9 ಮೇ 2021, 14:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲಿ ನಿತ್ಯವೂ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಸಂಬಂಧ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಬಂದೋಬಸ್ತ್‌ ಸಿದ್ಧತೆಯಲ್ಲಿ ತೊಡಗಿದೆ. ನಗರ, ಪಟ್ಟಣಗಳಲ್ಲಿ ‘ನಾಕಬಂದಿ’ ನಿರ್ಮಾಣ ಮಾಡಲಾಗಿದೆ.

ಜನರ ಅನಗತ್ಯ ಸಂಚಾರವನ್ನು ನಿರ್ಬಂಧಿಸಲು ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನಗರ ವ್ಯಾಪ್ತಿಯ ಮುಖ್ಯ ರಸ್ತೆ, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಗೂ ಪೋಲ್ಸ್‌ಗಳನ್ನು ಅಡ್ಡವಾಗಿ ಕಟ್ಟುವ ಮೂಲಕ ನಾಕಬಂದಿ ನಿರ್ಮಿಸಿದ್ದಾರೆ.

ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ದಾವಣಗೆರೆ ರಸ್ತೆ ಮಾರ್ಗಗಳಲ್ಲಿ ಬೆಳಿಗ್ಗೆಯೇ ನಿರ್ಬಂಧ ವಿಧಿಸಲಾಗಿತ್ತು. ಸಂತೆಹೊಂಡದ ರಸ್ತೆ, ವಾಸವಿ ಮಹಲ್‌ ಮಾರ್ಗದಲ್ಲೂ ಪೋಲ್ಸ್‌ಗಳಿಂದ ನಾಕಬಂದಿ ಹಾಕಲಾಗಿದೆ. ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಕೋಟೆ ರಸ್ತೆ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಚಿಕ್ಕಪೇಟೆ, ಜೆಸಿಆರ್‌ ಬಡಾವಣೆ, ಬ್ಯಾಂಕ್‌ ಕಾಲೊನಿ, ಕೆಳಗೋಟೆ, ಮುನ್ಸಿಪಲ್ ಕಾಲೊನಿ, ಚರ್ಚ್ ರಸ್ತೆ, ಭದ್ರಾ ಮೇಲ್ದಂಡೆ ಕಚೇರಿ ಮುಂಭಾಗದ ರಸ್ತೆ, ತುರುವನೂರು ರಸ್ತೆ ಮಾರ್ಗ, ಬುರುಜನಹಟ್ಟಿ, ಚಳ್ಳಕೆರೆ ಗೇಟ್‌ ಸೇರಿ ಎಲ್ಲಾ ರಸ್ತೆಗಳಲ್ಲೂ ನಾಕಬಂದಿ ನಿರ್ಮಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಕಳೆದ ವರ್ಷದಂತೆ ಈ ಬಾರಿಯೂ ಜನಸಂಚಾರ ನಿರ್ಬಂಧಿಸಲು ಸಜ್ಜಾಗಿದೆ. ಸೋಂಕು ಹರಡದಂತೆ ತಡೆಯಲು ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಬೆಳಿಗ್ಗೆ 10ರ ನಂತರ ಜನಸಂಚಾರ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT