ಚಿತ್ರದುರ್ಗ: ನಗರದಲ್ಲಿ ವರ್ಷದಿಂದ ವರ್ಷಕ್ಕೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಅದರಲ್ಲೂ ಕಳೆದ ಮೂರು ವರ್ಷಗಳಲ್ಲಿ ಈ ಸಂಖ್ಯೆ ಸಾವಿರ ದಾಟಿದೆ.
ಬಡಾವಣೆಯ ಮುಖ್ಯ ರಸ್ತೆಗಳು, ಜನಸಂದಣಿಯ ಜಾಗಗಳು, ಪ್ರಮುಖ ವೃತ್ತಗಳು ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಬೀದಿ ಬದಿಯ ವ್ಯಾಪಾರಿಗಳು ಅದರಲ್ಲೂ ವಿಶೇಷವಾಗಿ ತರಕಾರಿ ವ್ಯಾಪಾರಸ್ಥರು ಕಾಣಿಸುತ್ತಿದ್ದಾರೆ. ಆದರೆ ಇವರದು ನೆಲೆಯಿಲ್ಲದ ಬದುಕಾಗಿದೆ.
ಚಳ್ಳಕೆರೆ ಟೋಲ್‌ಗೇಟ್, ಜೋಗಿಮಟ್ಟಿ ರಸ್ತೆ, ಜಿಲ್ಲಾ ಆಸ್ಪತ್ರೆ ಸಮೀಪ, ತಿಪ್ಪಜ್ಜಿ ಸರ್ಕಲ್, ತುರವನೂರು ರಸ್ತೆಯ ಬ್ಯಾಂಕ್ ಕಾಲೊನಿ, ಮೇದೆಹಳ್ಳಿ ರಸ್ತೆ, ದಾರುಕ ಬಡಾವಣೆ, ಐಯುಡಿಪಿ ಲೇಔಟ್, ಹೊಳಲ್ಕೆರೆ ರಸ್ತೆ, ಭೀಮಸಮುದ್ರ ರಸ್ತೆ, ಕೆಎಸ್‌ಆರ್‌ಟಿಸಿ ಬಡಾವಣೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಜೆಸಿಆರ್ ವೃತ್ತ, ಉಮಾಪತಿ ಕಲ್ಯಾಣ ಮಂಟಪ ಸಮೀಪ, ಹಳೆ ವೈಶಾಲಿ ಮುಂಭಾಗ ಹೀಗೆ ಪ್ರತಿ ಬಡಾವಣೆಗಳಲ್ಲಿ ಹೆಜ್ಜೆಗೊಬ್ಬರು ತರಕಾರಿ, ಹೂವು ಮಾರಾಟಗಾರರು ಸಿಗುತ್ತಿದ್ದಾರೆ.
ತಡರಾತ್ರಿಯಿಂದಲೇ ಜಿಲ್ಲೆಯ ಗ್ರಾಮೀಣ ಪ್ರದೇಶ, ಬೆಂಗಳೂರು, ತುಮಕೂರು, ದಾವಣಗೆರೆ, ಬಳ್ಳಾರಿ ಸೇರಿ ವಿವಿಧ ಭಾಗಗಳಿಂದ ತರಕಾರಿ ಚಿತ್ರದುರ್ಗ ಮಾರುಕಟ್ಟೆಗೆ ಬರುತ್ತದೆ. ಸಗಟು ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು ಖರೀದಿಸಿ ತಮ್ಮ ಜಾಗಗಳಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ವ್ಯಾಪಾರ ನಡೆಸುತ್ತಾರೆ.
ನಗರದಲ್ಲಿ ಬಹುತೇಕ ಕಡೆ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮರಗಳನ್ನು ತೆರವುಗೊಳಿಸಿದ ಪರಿಣಾಮ ನೆರಳಿನ ಆಸರೆಯಿಲ್ಲದೆ ಬಿಸಿಲಿನ ಧಗೆ, ಮಳೆಯ ನಡುವೆ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದು, ತರಕಾರಿ ರಕ್ಷಣೆ ಸವಾಲಾಗಿದೆ.
ಚಳ್ಳಕೆರೆ ಟೋಲ್‌ಗೇಟ್, ಸ್ಟೇಡಿಯಂ ಮುಂಭಾಗ, ಬ್ಯಾಂಕ್ ಕಾಲೊನಿ ತಿರುವು, ತ್ಯಾಗರಾಜ ಮಾರುಕಟ್ಟೆ ಹೀಗೆ ನಾನಾ ಕಡೆ ಬಿಡಾಡಿ ದನ, ವಾಹನಗಳ ಸಂಚಾರದಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ತರಕಾರಿ, ಸೊಪ್ಪು ಕೊಳೆತರೆ ಹಾಕಿದ ಬಂಡವಾಳ ಸಹ ವಾಪಸ್ಸು ಬರುವುದಿಲ್ಲ ಎಂಬ ಆತಂಕ ಸದಾ ವ್ಯಾಪಾರಸ್ಥರಲ್ಲಿ ಮನೆ ಮಾಡಿರುತ್ತದೆ.
ಈ ಬಾರಿ ಮಳೆ ನಿರಂತರವಾಗಿರುವ ಕಾರಣ ವ್ಯಾಪಾರಸ್ಥರು ನಿತ್ಯ ಆತಂಕದಲ್ಲೇ ಮಾರುಕಟ್ಟೆಗೆ ಬರುವಂತಾಗಿದೆ. ಮಳೆಯಿಂದ ತರಕಾರಿ ರಕ್ಷಣೆ ಮಾಡಲು ತಾತ್ಕಾಲಿಕ ಪ್ಲಾಸ್ಟಿಕ್ ಶೀಟ್ ಹಾಕಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ನಿಗದಿಗೊಳಿಸಿ ಶೌಚಾಲಯ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದರೆ ಬದುಕು ಅತಂತ್ರವಾಗಲಿದೆ ಎಂಬುದು ವ್ಯಾಪಾರಸ್ಥರ ನೋವಿನ ನುಡಿ.
ಚಿತ್ರದುರ್ಗ ನಗರದಲ್ಲಿ ಬೀದಿ ಬದಿ ತರಕಾರಿ ವ್ಯಾಪಾರಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಈಗಾಗಲೇ ಸ್ಥಳ ಗುರುತಿಸಿ ಯೋಜನೆ ಸಿದ್ಧಗೊಳಿಸಲಾಗಿದೆ. ಅಧ್ಯಕ್ಷರ ಚುನಾವಣೆ ಬಳಿಕ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ತರಕಾರಿ ಹಣ್ಣು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
-ಎಂ.ರೇಣುಕಾ ಪೌರಾಯುಕ್ತೆ
ನಮ್ಮ ಕಷ್ಟ ಯಾರಿಗೂ ಬೇಡ. ಬದುಕೇ ಬೀದಿ ಮೇಲೆ ಎನ್ನುವಂತಾಗಿದೆ. ರಸ್ತೆ ಬದಿ ಕುಳಿತು ತರಕಾರಿ ವ್ಯಾಪಾರ ಮಾಡುವವರಿಗೆ ನೆರಳು ನೀರು ಶೌಚಾಲಯದ ವ್ಯವಸ್ಥೆ ಮಾಡಬೇಕು.
-ಟಿ.ಲಕ್ಷ್ಮೀ ಬೀದಿ ಬದಿ ವ್ಯಾಪಾರಿ
ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ. ಸೊಪ್ಪು ಹೂವು ಮಾರಾಟ ಮಾಡುವ ವ್ಯಾಪಾರಿಗಳಿಗೂ ಕ್ಯೂ ಆರ್ ಕೋಡ್ ನೀಡಿ ಡಿಜಿಟಲ್ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಆರ್.ರಾಧಾ ಮುಖ್ಯಾಧಿಕಾರಿ ಪುರಸಭೆ ಹೊಳಲ್ಕೆರೆ
ನೆರಳಿನ ವ್ಯವಸ್ಥೆ ಕಲ್ಪಿಸಿ
-ಸಾಂತೇನಹಳ್ಳಿ ಸಂದೇಶ್ ಗೌಡ
ಹೊಳಲ್ಕೆರೆ: ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಬದುಕು ದಿನದಿಂದ ದಿನಕ್ಕೆ ನಿಕೃಷ್ಟವಾಗುತ್ತಿದೆ. ಮುಖ್ಯವೃತ್ತದಲ್ಲಿ ನಿತ್ಯ ಸೊಪ್ಪು ತರಕಾರಿ ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳಲ್ಲಿ ಮಹಿಳೆಯರೇ ಹೆಚ್ಚಿದ್ದು ಬಿಸಿಲು ಮಳೆ ಲೆಕ್ಕಿಸುತ್ತ ಕುಳಿತರೆ ಬದುಕಿನ ಬಂಡಿ ಸಾಗದ ಆತಂಕ ಇವರಲ್ಲಿದೆ. ಮಳೆ ಬಂದರೆ ಪಾಲಕ್ ಮೆಂತ್ಯೆ ಸಬ್ಬಸಿಗೆ ಕೊತ್ತಂಬರಿ ಪುದೀನ ಸೊಪ್ಪು ನೆನೆದು ಸಂಜೆಯ ವೇಳೆಗೆ ಕೊಳೆತು ಹೋಗುತ್ತವೆ. ಕೊಳೆತ ಸೊಪ್ಪನ್ನು ಯಾರೂ ಖರೀದಿಸುವುದಿಲ್ಲ. ಇದರಿಂದ ನಮಗೆ ಹೆಚ್ಚು ನಷ್ಟ ಆಗುತ್ತದೆ. ಬಿಸಿಲಿಗೂ ಸೊಪ್ಪು ತರಕಾರಿ ಬಾಡಿ ಹೋಗುತ್ತದೆ. ಆಗಲೂ ನಮಗೆ ನಷ್ಟ ತಪ್ಪಿದ್ದಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂದಿನ ಮಹಾತ್ಮ ಗಾಂಧಿ ವಾಣಿಜ್ಯ ಸಂರ್ಕೀಣದ ಮುಂದೆಯೂ ಮಹಿಳೆಯರು ವೃದ್ಧೆಯರು ಬಾಳೆ ಹಣ್ಣು ಮಾವಿನ ಹಣ್ಣು ಸೇವಂತಿಗೆ ಹಾಗೂ ಇತರೆ ಹೂ ಮಾರಾಟ ಮಾಡುತ್ತಾರೆ. ಮಳೆ ಬಂದಾಗ ಪ್ಲಾಸ್ಟಿಕ್ ಕವರ್ ಮುಚ್ಚುವುದು ಮಳೆ ಬಿಟ್ಟಾಗ ಕವರ್ ತೆಗೆದು ಮಾರಾಟ ಮಾಡುವುದು ಇವರಿಗೆ ಮಾಮೂಲಿಯಾಗಿದೆ. ‘ಲಕ್ಷಗಟ್ಟಲೆ ಹಣ ಇದ್ದವರು ಮಳಿಗೆ ಪಡೆದು ವ್ಯಾಪಾರ ಮಾಡುತ್ತಾರೆ. ದುಡ್ಡಿಲ್ಲದವರು ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತೇವೆ. ಬೀದಿಬದಿ ವ್ಯಾಪಾರಿಗಳಿಗೂ ಸೌಲಭ್ಯ ಕಲ್ಪಿಸಬೇಕು ಎಂಬ ನಿಯಮ ಇದ್ದರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಪೊಲೀಸರೂ ವಿನಾಕಾರಣ ತೊಂದರೆ ಕೊಡುತ್ತಾರೆ’ ಎಂದು ವ್ಯಾಪಾರಿಗಳು ಅಸಹನೆ ವ್ಯಕ್ತಪಡಿಸುತ್ತಾರೆ. ‘ಪುರಸಭೆಗೆ ನಾವೂ ಜಕಾತಿ (ತೆರಿಗೆ) ಕಟ್ಟುತ್ತೇವೆ. ಆದರೂ ನಮಗೆ ಅವರು ನೆರಳಿನ ವ್ಯವಸ್ಥೆ ಮಾಡಿಕೊಟ್ಟಿಲ್ಲ’ ಎಂದು ದೂರುತ್ತಾರೆ ಸೊಪ್ಪಿನ ವ್ಯಾಪಾರಿ ದುರುಗಮ್ಮ.
ಸೊಪ್ಪು ಮಾರಾಟಕ್ಕೆ ಜಕಾತಿ ರದ್ದುಪಡಿಸಿ
-ಕೊಂಡ್ಲಹಳ್ಳಿ ಜಯಪ್ರಕಾಶ
ಮೊಳಕಾಲ್ಮುರು: ‘ಸ್ವಾಮಿ ನಾವೇನೂ ದೊಡ್ಡ ವ್ಯಾಪಾರಿಗಳಲ್ಲ...ಕಪಿಲೆಯ ಬದುವಿನಲ್ಲಿ ಸ್ವಲ್ಪ ಸೊಪ್ಪಿನ ಬೀಜ ಚೆಲ್ಲಿಕೊಂಡು 30-40 ಕಟ್ಟನ್ನು ವಾರದ ಖರ್ಚಿಗೆ ಆಗ್ತದೆ ಅಂತಾ ಸಂತೆಗೆ ತಂದರೆ ಇಲ್ಲಿ ನೂರೊಂದು ಸಮಸ್ಯೆ. ಒಂದೊಂದು ಸಲ ಯಾಕಾದ್ರೂ ಬಂದೆವಪ್ಪಾ ಎನ್ನುವಂತಾಗುತ್ತೆ’.. ಇದು ವಾರದ ಸಂತೆಗಳಲ್ಲಿ ಸೊಪ್ಪು ಮಾರಾಟ ಮಾಡುವ ಪಾಪಕ್ಕನ ನೋವಿನ ನುಡಿ. ನೀರಿನ ಸಮಸ್ಯೆ ಗೊಬ್ಬರ ಕೂಲಿ ಆಳುಗಳ ಸಮಸ್ಯೆ ನಡುವೆ ಸೊಪ್ಪು ಬೆಳೆದು ಮಾರಾಟಕ್ಕೆ ತರುತ್ತಾರೆ. ಆದರೆ ಬೇಕಾಬಿಟ್ಟಿ ದರದಿಂದಾಗಿ ಬಂಡವಾಳ ಸಹ ಹಿಂತಿರುಗುತ್ತಿಲ್ಲ. ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವ ಇವರು ನಯಾಪೈಸೆ ಕಡಿಮೆಯಿಲ್ಲದೇ ಜಕಾತಿ ಕಟ್ಟಬೇಕು. ಬಿಸಿಲಿಗೆ ಸೊಪ್ಪು ಬಾಡುತ್ತಾ ಬಂದಂತೆ ಸಿಕ್ಕ ದರಕ್ಕೆ ಕೇಳುವುದು ಮಾಮೂಲಿಯಾಗಿದೆ. ವಿಧಿ ಇಲ್ಲದೇ ನೀಡಿ ಮನೆಗೆ ತೆರಳುವುದು ಸಾಮಾನ್ಯವಾಗಿದೆ. ಸೊಪ್ಪು ಕಟಾವು ಮಾಡಿದ 6 ರಿಂದ 8 ಗಂಟೆ ಒಳಗೆ ಮಾರಾಟ ಮಾಡಬೇಕು. ಇಲ್ಲವೇ ತಿಪ್ಪೆಗೆ ಹಾಕುವ ಸ್ಥಿತಿ ನಿರ್ಮಾಣವಾಗಲಿದೆ. ‘ಕೆಲ ಸಲ ಒಂದು ರೂಪಾಯಿಗೆ ಒಂದು ಕಟ್ಟು ಸೊಪ್ಪು ಮಾರಾಟ ಮಾಡಬೇಕಾಗುತ್ತದೆ. ಆಗ ಜಕಾತಿ ಕೊಡಲು 25ರಿಂದ 30 ಕಟ್ಟು ಸೊಪ್ಪಿನ ಹಣ ಬೇಕಾಗುತ್ತದೆ. 100 ಕಟ್ಟು ತಂದಿದ್ದಲ್ಲಿ ಜಕಾತಿ ಬಸ್ ಚಾರ್ಜ್ ಹಮಾಲಿಗೆ ಎಲ್ಲಾ ಸರಿ ಹೋಗುತ್ತದೆ. ನಮ್ಮಂತ ಸಣ್ಣ ವ್ಯಾಪಾರಿಗಳಿಗೆ ಜಕಾತಿ ರದ್ದು ಮಾಡಬೇಕು’ ಎಂದು ಮನವಿ ಮಾಡಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಮಾರಕ್ಕ. ‘ಸಗಟಾಗಿ ಕೊಂಡು ತರಕಾರಿ ಮಾರಾಟ ಮಾಡುವವರು ಸಂತೆಯಲ್ಲಿ ನಿರ್ದಿಷ್ಟ ಸ್ಥಳ ಹೊಂದಿರುತ್ತಾರೆ. ನಾವು ಸೊಪ್ಪು ಕೈಗೆ ಬಂದಾಗ ಮಾತ್ರ ತಂದು ಮಾರುವವರು. ಇದರಿಂದ ಸಂತೆಯಲ್ಲಿ ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲಿ ಕೂರಬೇಕು ಆದರೂ ಜಕಾತಿ ಮಾತ್ರ ದೊಡ್ಡ ವ್ಯಾಪಾರಿಗಳಂತೆ ಕೊಡಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಜತೆಗೆ ಸೊಪ್ಪಿನ ಬೀಜಗಳನ್ನು ತೋಟಗಾರಿಕೆ ಇಲಾಖೆ ಮೂಲಕ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎನ್ನುವುದು ಸೊಪ್ಪು ಮಾರಾಟಗಾರರ ಮನವಿ.
ಕೆಸರು ಗದ್ದೆಯಂತಿರುವ ನಗರಸಭೆ ಸಂತೆ ಮೈದಾನ
- ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ನಗರಸಭೆ ನಿರ್ಲಕ್ಷ್ಯದಿಂದ ಇಲ್ಲಿನ ಸಂತೆ ಮೈದಾನದ ಆವರಣದಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಅತಿ ಕಡಿಮೆ ಮಳೆ ಬಿದ್ದರೂ ಇಡೀ ಮೈದಾನ ಮಳೆ ನೀರಿನಿಂದ ಆವೃತವಾಗುವುದಲ್ಲದೆ ಕೆಸರು ಗದ್ದೆಯ ಸ್ವರೂಪ ಪಡೆಯುತ್ತದೆ. ಹೀಗಾಗಿ ಮಳೆ ಬಂತೆಂದರೆ ಇಲ್ಲಿನ ಗ್ರಾಹಕರು ಹಾಗೂ ವ್ಯಾಪಾರಸ್ಥರು ತೊಂದರೆ ಅನುಭವಿಸುವುದು ಮಾಮೂಲಿಯಾಗಿದೆ. ವಿವಿಧ ವಾರ್ಡ್‌ಗಳಿಂದ ಹರಿದು ಬಂದ ಕೊಳಚೆ ನೀರು ಮತ್ತು ಮೈದಾನದ ತಗ್ಗು ಪ್ರದೇಶದ ನೀರು ಹರಿದು ಹೋಗಲು ವ್ಯವಸ್ಥಿತ ಚರಂಡಿ ಇಲ್ಲದ ಕಾರಣ ಮೈದಾನದಲ್ಲಿ ಮಳೆನೀರು ತುಂಬಿಕೊಳ್ಳುತ್ತಿದೆ. ಇದರಿಂದ ಸಂತೆ ಮೈದಾನದಲ್ಲಿ ಕಾಲಿಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ‘ಮೈದಾನದಲ್ಲಿ ತುಂಬಿರುವ ಕೆಸರು ನೋಡಿದ ಗ್ರಾಹಕರು ತರಕಾರಿ ಕೊಳ್ಳದೆ ವಾಪಸ್ಸು ಹೋಗುತ್ತಾರೆ. ಮಳೆಗಾಲದಲ್ಲಿ ₹2000 ಕೂಡಾ ವ್ಯಾಪಾರ ಆಗುವುದಿಲ್ಲ’ ಎನ್ನುತ್ತಾರೆ ವ್ಯಾಪಾರಸ್ಥೆ ಗಂಗಮ್ಮ. ‘ಸಂತೆ ಹರಾಜು ಕೂಗಿಕೊಂಡವರು ಪ್ರತಿದಿನ ವಾರ ತಪ್ಪದೇ ನೆಲಬಾಡಿಗೆ ವಸೂಲಿ ಮಾಡುತ್ತಾರೆ. ಕೊಡದಿದ್ದಲ್ಲಿ ತಕ್ಕಡಿ ಕೆ.ಜಿ.ಕಲ್ಲು ಕಸಿದುಕೊಂಡು ದೌರ್ಜನ್ಯ ಮಾಡುತ್ತಾರೆ. ಆದರೆ ಸಂತೆ ಮೈದಾನ ಅಭಿವೃದ್ಧಿ ಕೇಳಿದರೆ ನಗರಸಭೆ ಹತ್ತಿರ ಹೋಗಿ’ ಎಂದು ಬೇಸರಿಸುತ್ತಾರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ವಿಜಯ ಕುಮಾರ್. ‘ಸಂತೆ ಮೈದಾನದ ಅರ್ಧ ಭಾಗದ ತಗ್ಗು-ಗುಂಡಿಗಳಿಗೆ ಮಣ್ಣು ತುಂಬಿಸಿ ಸಿಮೆಂಟ್ ಹಾಕಿಸಲಾಗಿದೆ. ಇನ್ನುಳಿದ ಭಾಗಕ್ಕೂ ಮಣ್ಣು ಹೇರಿಸಿ ಸಿಮೆಂಟ್ ಹಾಕಿಸಬೇಕು. ಮಳೆ-ಗಾಳಿ ತಡೆಯಲು ಹಾಗೂ ನೆರಳಿನ ವ್ಯವಸ್ಥೆಗೆ ಶೆಡ್ ನಿರ್ಮಾಣ ಮಾಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂಬುದು ವ್ಯಾಪಾರಸ್ಥರ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.