ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ

‘ಡಿಚ್ಚಿ ಹಬ್ಬ’ದಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ
Last Updated 5 ಡಿಸೆಂಬರ್ 2022, 4:52 IST
ಅಕ್ಷರ ಗಾತ್ರ

ಹಿರಿಯೂರು:ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಭಾನುವಾರ ‘ಡಿಚ್ಚಿ ಹಬ್ಬ’ (ಪ್ರೀತಿಯ ಅಪ್ಪುಗೆ) ಎಂದೇ ಖ್ಯಾತಿ ಪಡೆದಿರುವ ಅಹೋಬಲ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಅತ್ತಿಗೆ ನಾದಿನಿಯರು ಮುಂದಲೆ ಹಿಡಿದು ಪರಸ್ಪರ ಡಿಚ್ಚಿ ಹೊಡೆಯುವ ಆಚರಣೆ ದಶಕಗಳಿಂದ ನಡೆದುಬಂದಿದೆ. ಇದು ಜಗಳದ ಬದಲಿಗೆ ಅತ್ತಿಗೆ ನಾದಿನಿಯರ ಬಾಂಧವ್ಯ ಬೆಸೆಯುವ ಮೂಲಕ ತವರಿನ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವೆಂದು ಹಿರಿಯರು ಅರ್ಥೈಸುತ್ತಾರೆ.

ತಾನು ಹುಟ್ಟಿದ ಮನೆಗೆ ಅತ್ತಿಗೆ ಬಂದ ಮೇಲೆ ತವರಿನ ಬಗ್ಗೆ ಮುನಿಸಿಕೊಳ್ಳುವ ಮಗಳನ್ನು ಓಲೈಸಿ ಕರೆತಂದು ಅತ್ತಿಗೆ–ನಾದಿನಿಯರ ನಡುವಿನ ಮನಸ್ತಾಪವನ್ನು ಶಮನಗೊಳಿಸಿ ಜೊತೆಗೂಡಿಸುವ ವಿಶೇಷ ಹಬ್ಬವಿದು.

ದೇವಸ್ಥಾನದ ಮುಂದೆ ಬೇಡರ ಪಶುಪಾಲನಾ ಸಂಸ್ಕೃತಿಯ ಪ್ರತೀಕವಾಗಿ ಟಗರಿನ ಡಿಚ್ಚಿ ನಡೆದ ನಂತರ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಮಗಳನ್ನು ಊರಿನ ಹೆಬ್ಬಾಗಿಲಿನಿಂದ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಒಂದು ಬದಿಯಿಂದ ಅತ್ತಿಗೆಯರು, ಮತ್ತೊಂದು ಬದಿಯಿಂದ ನಾದಿನಿಯರು ಎದುರೆದುರು ನಿಂತು ಓಡೋಡಿ ಬಂದು ಮುಂದಲೆ ಬಳಸಿ ಡಿಚ್ಚಿ ಹೊಡೆಯುತ್ತಾರೆ. ಕೊನೆಗೆ ಹಿರಿಯರು ಅತ್ತಿಗೆ–ನಾದಿನಿಯರನ್ನು ದೇವಸ್ಥಾನದಲ್ಲಿ ರಾಜಿ ಮಾಡಿಸುತ್ತಾರೆ. ಉತ್ಸವದ ನಂತರ ಎರಡೂ ಕುಟುಂಬಗಳು ಸೌಹಾರ್ದದಿಂದ ಬದುಕು ಸಾಗಿಸುತ್ತವೆ ಎಂಬ ನಂಬಿಕೆ ಇಂದಿಗೂ ಉಳಿದಿದೆ.

ಮದುವೆಯ ನಂತರ ಹೆಣ್ಣು ಮಕ್ಕಳು ಎಷ್ಟೇ ದೂರದ ಊರುಗಳಲ್ಲಿದ್ದರೂ ನರಸಿಂಹಸ್ವಾಮಿ ಉತ್ಸವಕ್ಕೆ ತಪ್ಪದೇ ಡಿಚ್ಚಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಉತ್ಸವಕ್ಕೆ ಬರದೇ ಹೋದರೆ ತವರು ಮನೆಯಲ್ಲಿ ನೆಮ್ಮದಿ ಕಳೆದುಹೋಗುತ್ತದೆ ಎಂಬ ನಂಬಿಕೆ ಹೆಣ್ಣು
ಮಕ್ಕಳಲ್ಲಿದೆ.

ಬೇಡ ನಾಯಕರು ನೆಲೆಸಿರುವ ಊರುಗಳಲ್ಲಿ ಅಹೋಬಲ ನರಸಿಂಹ ದೈವದ ಗುಡಿಗಳನ್ನು ಕಟ್ಟಿಕೊಂಡಿರುತ್ತಾರೆ. ಬೇಡ ಮೂಲ ನೆಲೆಯಿಂದ ಬಂದ ಇಂತಹ ಆರಾಧ್ಯ ದೈವಗಳ ನಂಬಿಕೆ ಮತ್ತು ಆಚರಣೆಗಳು ಊರ ಸಂಸ್ಕೃತಿಯಲ್ಲಿ ಮಿಳಿತಗೊಂಡಿದ್ದರ ದ್ಯೋತಕವಾಗಿ ವೈವಾಹಿಕ ಸಂಬಂಧದ ಮೂಲಕ ಬೆಳೆದ ಪರಿವಾರವೆಲ್ಲ ಇಂತಹ ದೈವೋಪಾಸನೆಯಲ್ಲಿ ತೊಡಗುವುದು ಸಹಜ ಎನ್ನುತ್ತಾರೆ ಕನ್ನಡ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ.

ಮೂರು ದಿನ ನಡೆಯುವ ಜಾತ್ರೆಯಲ್ಲಿ ಗಂಗಾಪೂಜೆ, ಉತ್ಸವಮೂರ್ತಿಯ ಮೆರವಣಿಗೆ, ಗುಡಿಕಟ್ಟಿನ ಅಣ್ಣತಮ್ಮಂದಿರಿಂದ ಅನ್ನಸಂತರ್ಪಣೆಯೊಂದಿಗೆ ಉತ್ಸವ ಸಮಾರೋಪಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT