ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ 6ಕೋಟಿ ನಿರುದ್ಯೋಗ ಸೃಷ್ಟಿ: ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ

Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪ್ರತಿ ವರ್ಷ 2ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರ ಆಡಳಿತದಿಂದ ಉದ್ಯೋಗಸ್ಥರು ಕೆಲಸ ಕಳೆದುಕೊಂಡು 6 ಕೋಟಿ ನಿರುದ್ಯೋಗ ಸೃಷ್ಟಿಯಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಆರೋಪಿಸಿದರು.

‘ಸಿಎಎ, ಎನ್‌ಆರ್‌ಸಿ ಸೇರಿ ಈವರೆಗೂ ಬಿಜೆಪಿಯಿಂದ ಜಾರಿಯಾದ ನೀತಿಗಳನ್ನು ಮೋದಿ, ಅಮಿತ್ ಶಾ ಅವರಿಂದ ಕಾಣದ ಕೈಗಳು ಮಾಡಿಸುತ್ತಿವೆ. ದೇಶದ ಪ್ರಜೆಗಳು ಪೌರತ್ವ ಸಾಬೀತು ಪಡಿಸಲು ಕಚೇರಿಗಳ ಮುಂದೆ 10 ವರ್ಷ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ರಾಷ್ಟ್ರದಲ್ಲಿ ಮನುಸ್ಮೃತಿ ಪದ್ಧತಿ ತರಲು ಆರ್‌ಎಸ್‌ಎಸ್‌ ಮುಂದಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ನೋಟು ಅಮಾನ್ಯೀಕರಣದಂತೆ ಸಿಎಎ, ಎನ್‌ಆರ್‌ಸಿ ಅವಿವೇಕತನದ ನಿರ್ಧಾರಗಳು. ಅಧಿಕಾರ ನಡೆಸುವವರಿಗೆ ಅಲ್ಪ ಜ್ಞಾನವೂ ಇಲ್ಲದ ಕಾರಣ ದೇಶದಾದ್ಯಂತ ಪ್ರತಿಭಟನೆ ಎದುರಿಸುವಂಥ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ಕೂಡಲೇ ಇದನ್ನು ಹಿಂಪಡೆದು ಆರ್ಥಿಕ ಪರಿಸ್ಥಿತಿ ಪ್ರಗತಿಯತ್ತ ಕೊಂಡೊಯ್ಯಲು ಮೋದಿ ಮುಂದಾಗಬೇಕಿದೆ’ ಎಂದು ಒತ್ತಾಯಿಸಿದರು.

‘ಅನಂತಕುಮಾರ್ ಹೆಗ್ಡೆ, ತೇಜಸ್ವಿ ಸೂರ್ಯ ಅವರ ಮಾತುಗಳನ್ನು ಕೇಳಿದರೆ ಬಿಜೆಪಿಯವರು ಅಂಬೇಡ್ಕರ್ ಸಂವಿಧಾನ ಬುಡಮೇಲು ಮಾಡುವುದು ಖಚಿತ ಎನಿಸುತ್ತಿದೆ. ಇವರು ಗಾಂಧಿವಾದಿಗಳಲ್ಲ, ವಿರೋಧಿಗಳು. ದೇಶಕ್ಕೆ ಗಂಡಾಂತರ ಪರಿಸ್ಥಿತಿ ಎದುರಾದರೂ ಅಚ್ಚರಿ ಇಲ್ಲ’ ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅನೇಕ ಮಂದಿ ರಾಜಾಹುಲಿ ಎಂದು ಕರೆಯುತ್ತಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ರಾಜಾ ಇಲಿಯಾಗಿದ್ದಾರೆ’ ಎಂದು ಪುನರುಚ್ಚರಿಸಿದ ಅವರು, ಮುಖ್ಯಮಂತ್ರಿಗಳ ಯಾವ ಬೇಡಿಕೆಗೂ ಕೇಂದ್ರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಮುಖಂಡರಾದ ಶಿವುಯಾದವ್, ನರಸಿಂಹರಾಜು, ಅಲ್ಲಾಭಕ್ಷಿ, ವಸೀಂ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT