ಭಾನುವಾರ, ನವೆಂಬರ್ 29, 2020
20 °C
ಮೂರು ಗ್ರಾಮಗಳ ಆಯ್ಕೆ, 105 ಹೆಕ್ಟೇರ್‌ನಲ್ಲಿ ಬಿತ್ತನೆ

ನೈಸರ್ಗಿಕ ಪದ್ಧತಿಯಲ್ಲಿ ಹೆಚ್ಚು ಶೇಂಗಾ ಇಳುವರಿ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ನೈಸರ್ಗಿಕ ಕೃಷಿ ಪದ್ಧತಿಯ ಶೇಂಗಾ ರಾಸಾಯನಿಕ ಪದ್ಧತಿ ಶೇಂಗಾಕ್ಕೆ ಹೋಲಿಸಿದರೆ ಆರೋಗ್ಯಪೂರ್ಣ ಬೆಳವಣಿಗೆ ಕಂಡಿದೆ.

ಕೇಂದ್ರ ಸರ್ಕಾರದ ‘ಶೂನ್ಯ ಬಂಡವಾಳ ಯೋಜನೆ’ ಅಡಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಮಾದರಿ ಶೇಂಗಾ ಹೊಲಗಳಲ್ಲಿ ಬೆಳೆದಿರುವ ಶೇಂಗಾ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ಜಾರಿಗೆ ಬಂದಿದ್ದ ಶೂನ್ಯ ಬಂಡವಾಳ ಯೋಜನೆ ಹೆಸರನ್ನು ಈ ವರ್ಷ ‘ನೈಸರ್ಗಿಕ ಕೃಷಿ ಪದ್ಧತಿ’ ಎಂದು ಹೆಸರು ಬದಲಾಯಿಸಲಾಗಿದೆ.

‘ನೈಸರ್ಗಿಕ ಪದ್ಧತಿಯಲ್ಲಿ ಬಿತ್ತನೆ ಮಾಡಲು ಈ ವರ್ಷ ಸಿದ್ದಯ್ಯನಕೋಟೆ, ಸೂಲೇನಹಳ್ಳಿ, ಸೋಮೇನಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ಗ್ರಾಮದಲ್ಲಿ 35 ಹೆಕ್ಟೇರ್‌ನಂತೆ ಒಟ್ಟು ಮೂರು ಗ್ರಾಮಗಳಿಂದ 105 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₹ 3,600 ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಲ್ಲಿ ಕೃಷಿಗೆ ಅಗತ್ಯವಿರುವ ಜೀವಾಮೃತ ಸಿದ್ಧತೆಯನ್ನು ಸ್ವತಃ ರೈತರು ಮಾಡಿಕೊಳ್ಳಬೇಕಿದೆ’ ಎಂದು ಕೃಷಿ ಇಲಾಖೆ ಸಾವಯವ ಅಧಿಕಾರಿ ರಾಜಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಸಕ್ತ ವರ್ಷ ಪ್ರತಿ ರೈತರ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ರೈತರ ಸಾಮಾನ್ಯ ಪದ್ಧತಿ ಹಾಗೂ ಅದರ ಪಕ್ಕದಲ್ಲಿ ನೈಸರ್ಗಿಕ ಪದ್ಧತಿಯಂತೆ ಬಿತ್ತನೆ ಮಾಡಿಸಲಾಗಿತ್ತು. ಸಾಮಾನ್ಯ ಪದ್ಧತಿ ಶೇಂಗಾ ಗಿಡಗಳಲ್ಲಿ ಪ್ರತಿ ಗಿಡಕ್ಕೆ 5-8 ಕಾಯಿಗಳಿದ್ದರೆ, ನೈಸರ್ಗಿಕ ಪದ್ಧತಿಯಲ್ಲಿ 20ಕ್ಕೂ ಹೆಚ್ಚು ಕಾಯಿಗಳು ಕಟ್ಟಿವೆ. ಆರೋಗ್ಯಪೂರ್ಣವಾಗಿವೆ. ಸಾಮಾನ್ಯ ಪದ್ಧತಿ ಕೃಷಿಯಲ್ಲಿ ಪ್ರತಿ ಎಕರೆಗೆ ₹ 8 ಸಾವಿರ ಖರ್ಚು ಬರುತ್ತದೆ. ನೈಸರ್ಗಿಕ ಪದ್ಧತಿಯಲ್ಲಿ ರೈತರು ಸಹಾಯಧನದಲ್ಲಿ ಸಗಣಿ, ಬೆಲ್ಲ, ಸುಣ್ಣ ಬಳಸಿ ಜೀವಾಮೃತ ಮಾಡಿಕೊಂಡು ಹಾಕುವ ಕಾರಣ ಖರ್ಚು ತೀರಾ ಕಡಿಮೆ’ ಎಂದು
ಹೇಳಿದರು.

ಗೋಪಾಲ್‌, ನಾಗರಾಜ್ ಅವರ ಹೊಲದಲ್ಲಿ ಈ ಬೆಳವಣಿಗೆ ಕಾಣಬಹುದು.

ನೈಸರ್ಗಿಕ ಪದ್ಧತಿ ಆಗು ಹೋಗುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಂಕಿ-ಅಂಶ ಸಹಿತ ಸಾಬೀತು ಆಗಿಲ್ಲ. ಇನ್ನು ಸಂಶೋಧನೆ ಹಂತದಲ್ಲಿದೆ. ಆದರೆ, ನಶಿಸುತ್ತಿರುವ ಮಣ್ಣಿನ ಫಲವತ್ತತೆ ಕಾಪಾಡಲು ಈ ಪದ್ಧತಿ ಸಹಕಾರಿಯಾಗಿದೆ. ಜಾನುವಾರು ಹೊಂದಿರುವ ರೈತರು ಇದನ್ನು ಕೈಗೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು