ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಗಮನ ಸೆಳೆವ ಪ್ರಕೃತಿ ಸೊಬಗಿನ ಸರ್ಕಾರಿ ಶಾಲೆ

ಚಿಗತನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಎಚ್.ರಂಗನಾಥ್‍ ಶ್ರಮದ ಫಲ
Last Updated 5 ಫೆಬ್ರುವರಿ 2021, 2:12 IST
ಅಕ್ಷರ ಗಾತ್ರ

ಚಳ್ಳಕೆರೆ: ಕಾಲಿಟ್ಟರೆ ಸಾಕು ಮನಸಿಗೆ ಮುದ ನೀಡುವ ಹಸಿರು ಪರಿಸರ. ಶಾಲಾ ಆವರಣದಲ್ಲಿ ಗಿಡ-ಮರಗಳ ನೆರಳು, ತಂಪಾದ ಗಾಳಿ.

ಗಿಡ, ಮರಗಳ ನೆರಳನ್ನು ಕಂಡು ದಾರಿ ಹೋಕರು ಕ್ಷಣ ಹೊತ್ತು ನಿಂತು ಮುಂದೆ ಸಾಗುತ್ತಾರೆ.

ಇಂತಹ ಸ್ವಚ್ಛಂದ ಹಸಿರು ವನಕ್ಕೆ ಸಾಕ್ಷಿಯಾಗಿರುವುದು ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಚಿಗತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಇಲ್ಲಿನ 1ರಿಂದ 5ನೇ ತರಗತಿವರೆಗೆ 30ಕ್ಕೂ ಹೆಚ್ಚು ಮಕ್ಕಳಿಗೆ ನಿತ್ಯ ಪಾಠ ಪ್ರವಚನ ನೀಡುವುದರ ಜತೆಗೆ ಆವರಣದಲ್ಲಿ ನೂರಾರು ಹಸಿರು ಗಿಡಗಳನ್ನು ನೆಟ್ಟುಮಕ್ಕಳಂತೆ ಪೋಷಣೆ ಮಾಡುತ್ತಿರುವವರು ಮುಖ್ಯಶಿಕ್ಷಕ ಎಚ್.ರಂಗನಾಥ್‍.

ಅವರ ಪರಿಸರದ ಸೇವೆ ಇತರ ಶಿಕ್ಷಕರಿಗೆ ಮಾದರಿಯಾಗಿದೆ.

ಆರಂಭದಲ್ಲಿ ಕೇವಲ ಮೂರೇ ಗಿಡಗಳಿಂದ ಬಿಕೊ ಅನ್ನುವಂತಿದ್ದ ಶಾಲಾ ಆವರಣ, ಈಗ ವಿವಿಧ ಜಾತಿಯ ನೂರಾರು ಹೂ, ಗಿಡಗಳಿಂದ ಕಂಗೊಳಿಸುತ್ತಿದೆ.

ಗುಲ್‍ಮೋಹರ್‌, ದಾಸವಾಳ, ಕನಗಲು, ಕನಕಾಂಬರ, ಬಸವನಪಾದ, ಮುಳ್ಳುಜಾಜಿ, ಸೇವಂತಿಗೆ ಇನ್ನು ಮುಂತಾದ ಬಣ್ಣ ಬಣ್ಣದ ಹೂ ಗಿಡಗಳು ನೋಡುಗರನ್ನು ಸೆಳೆಯುತ್ತಿವೆ. ಹೂ, ಗಿಡಗಳು ಜೇನು ನೊಣಗಳನ್ನು ಆಕರ್ಷಿಸುತ್ತಿದ್ದು, ಹಣ್ಣಿನ ಮರಗಳಲ್ಲಿ ಅಲ್ಲಲ್ಲಿ ಗೂಡು ಕಟ್ಟಿವೆ.

ಬುಗುರಿ, ಬೇಲ, ಬೇವು, ಮಾವು, ಹೊಂಗೆ, ಹುಣಸೆ, ತೆಂಗು, ಬೆಟ್ಟದ ನೆಲ್ಲಿ, ನಿಂಬೆ, ಪಪ್ಪಾಯಿ, ಹಲಸು, ಸೀತಾಫಲ ಮುಂತಾದ ಮರಗಳು ಬೆಳೆದು ಫಲ ನೀಡಲು ಶುರುಮಾಡಿವೆ. ಶಾಲಾ ಆವರಣದಲ್ಲಿ ಬೆಳೆಸಿದ ಸೊಪ್ಪು ಮತ್ತು ತರಕಾರಿ ಮಕ್ಕಳ ಬಿಸಿಯೂಟಕ್ಕೆ ನಿತ್ಯ ಬಳಕೆಯಾಗುತ್ತದೆ.

ಮಲೆನಾಡಿನ ಪರಿಸರ: ‘ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಕಲಿತ ನನಗೆ ಅಲ್ಲಿನ ಗಿಡ, ಮರ, ಬಳ್ಳಿ ಹಾಗೂ ದಟ್ಟವಾದ ಮಲೆನಾಡು ಪರಿಸರ ಬಾಲ್ಯದಿಂದಲೇ ಆಕರ್ಷಿಸಿತು. ಇದರಿಂದಾಗಿ ಮುಂದೊಂದು ದಿನ ಹಸಿರು ಗಿಡ-ಮರಗಳನ್ನು ಬೆಳೆಸಬೇಕು ಎನ್ನುವ ಹಂಬಲ ಮನಸಿನಲ್ಲಿ ಸದಾ ಕಾಡುತ್ತಿತ್ತು.ಶಿಕ್ಷಕ ವೃತ್ತಿ ಸೇರಿದ ನಂತರ ಬಯಲು ಪ್ರದೇಶದಲ್ಲಿ ಶಾಲಾ ಸ್ವಚ್ಛತೆಯ ಜತೆಗೆ ಹಸಿರು ವನ ನಿರ್ಮಿಸಿ ಮಾದರಿ ಶಾಲೆಯನ್ನಾಗಿಸುವ ಕನಸು ನನಸಾಗಿಸಲು ಅರಣ್ಯ ಇಲಾಖೆ, ಗ್ರಾಮದ ಜನರು ಹಾಗೂ ಸಹ ಶಿಕ್ಷಕ ಗಂಗಾಧರರವರು ಪ್ರೋತ್ಸಾಹ ನೀಡಿ ಮತ್ತಷ್ಟು ಉತ್ಸಾಹ ತುಂಬಿದ್ದಾರೆ’ ಎಂದರು ಮುಖ್ಯಶಿಕ್ಷಕ ಎಚ್.ರಂಗನಾಥ್‍.

ನಿರ್ವಹಣೆ: ಹೂ, ಗಿಡ, ಬಳ್ಳಿಗಳಗೆ ನೀರು, ಗೊಬ್ಬರ ಮತ್ತು ಕೀಟನಾಶಕ ಸಿಂಪಡಣೆ ಮತ್ತು ಸೂಕ್ತ ನಿರ್ವಹಣೆಯ ಜವಾಬ್ದಾರಿಯನ್ನು ಶಾಲಾ ಮಕ್ಕಳು ಹಾಗೂ ಪೋಷಕರೇ ನೋಡಿಕೊಳ್ಳುವುದು ವಿಶೇಷ. ಇದರಿಂದ ಗಿಡ ಮರಗಳು ಚೆನ್ನಾಗಿ ಬೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಎಚ್.ರಂಗನಾಥ್.

ಸ್ವಚ್ಛತೆಗೆ ಒತ್ತು ಕೊಡುವ ಮಕ್ಕಳು: ಶಾಲಾ ಆವರಣದಲ್ಲಿ ಬಿದ್ದ ಹಸಿ, ಒಣ ಮತ್ತು ವಿಷಕಾರಿ ಕಸ ವಿಂಗಡಣೆ ಮಾಡುವ ಮೂಲಕ ಮಕ್ಕಳೇ ನಿತ್ಯ ಕಸವನ್ನು ವಿಲೇವಾರಿ ಮಾಡುತ್ತಾರೆ. ಇದರಿಂದ ಆವರಣ ಸುಂದರವಾಗಿ ಕಾಣುವುದಲ್ಲದೆ ಮಕ್ಕಳಿಗೂ ಜವಾಬ್ದಾರಿಯ ಅರಿವು ಮೂಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT