ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಯೋಗ ಪ್ರಜ್ಞೆ ಇದ್ದರೆ ದೇವರು ನೆಲೆಸುತ್ತಾನೆ: ಶಿವಮೂರ್ತಿ ಮುರುಘಾ ಶರಣ

Last Updated 10 ಮಾರ್ಚ್ 2021, 12:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿವಯೋಗ ಪ್ರಜ್ಞೆಯೊಂದಿಗೆ ಸಾಗಿದರೆ ಬಯಲರೂಪಿ, ನಿರಾಕಾರ ಸ್ವರೂಪಿ ಶಿವ ಅಂತರಂಗದಲ್ಲಿ ನೆಲೆಸುತ್ತಾನೆ. ಅಂತರಂಗದಲ್ಲಿ ಶಿವತ್ವ ಆಸ್ವಾದಿಸದವರು ಅನಾಹುತ ಆಮಂತ್ರಣ ಮಾಡಿಕೊಳ್ಳುತ್ತಾರೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ನೀಲಕಂಠೇಶ್ವರ ದೇಗುಲದ ಗರ್ಭಗುಡಿ ಬಾಗಿಲು ಬೆಳ್ಳಿ ಕವಚ ಉದ್ಘಾಟಿಸಿದ ಅವರು ವೀರಶೈವ ಸಮಾಜ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

‘ಅಂಗದ ಮೇಲೆ ಲಿಂಗ ಇಲ್ಲದವರಿಗೆ ದೇವಾಲಯ ನಿರ್ಮಿಸಲಾಗಿದೆ. ಇಷ್ಟಲಿಂಗ ಧರಿಸಿ ದಿನವೂ ಧ್ಯಾನ, ಶಿವಯೊಗ ಮಾಡುವವರು ನಡೆದಾಡುವ ಶಿವಾಲಯ ಆಗುತ್ತಾರೆ. ಇಷ್ಟ ಲಿಂಗ ನಮ್ಮೊಳಗೆ ಅಂತರಂಗ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಇದು ಪೂಜೆಗಿಂತ ದೊಡ್ಡದು’ ಎಂದು ಹೇಳಿದರು.

‘ಬಸವಾದಿ ಶರಣರು ಸಮಾಜವನ್ನು ಜಡ ಸಂಸ್ಕೃತಿಯಿಂದ ಹೊರಗೆ ತರುವ ಪ್ರಯತ್ನ ಮಾಡಿದರು. ದೇವಾಲಯದಿಂದ ಜೀವಾಲಯ ಸಂಸ್ಕೃತಿಯತ್ತ ಗಮನ ಹರಿಸಿದರು. ಶಿವನ ಮತ್ತೊಂದು ಪೌರಾಣಿಕ ಪರಿಕಲ್ಪನೆ ನೀಲಕಂಠ. ನಿಲಕಂಠೇಶ್ವರ ದೇಗುಲಕ್ಕೆ ಬೆಳ್ಳಿಯ ಕವಚ ನೀಡಿದ್ದು ಖುಷಿ ಪಡುವ ಸಂಗತಿ’ ಎಂದರು.

‘ಜಾಗರಣೆ ಅಂದರೆ ಜಾಗೃತ ವ್ಯವಸ್ಥೆ. ಶಿವರಾತ್ರಿಯ ದಿನ ಕೆಲವರು ಸಿನಿಮಾ ನೋಡಿ ಜಾಗರಣೆ ಮಾಡುತ್ತಾರೆ. ಒಂದು ದಿನ ಹೀಗೆ ಜಾಗರಣೆ ಮಾಡಿವರಿಗೆ 364 ದಿನ ಅಂಧರಾತ್ರಿ ಆಗಬಾರದು. ಹೀಗಾಗಿ, ಭಕ್ತರಿಗೆ ಸಂಸ್ಕಾರ ನೀಡುವ ಕಾರ್ಯವನ್ನು ಮಠಗಳು ಮಾಡುತ್ತಿವೆ’ ಎಂದು ಹೇಳಿದರು.

ಉದ್ಯಮಿ ಪಟೇಲ್ ಶಿವಕುಮಾರ್, ಸೋನಿ ಸಮಾಜದ ರಾಜೇಶ್ ಕುಮಾರ್, ಹೀರಾಚಂದ್, ಜಿ.ಆರ್.ವೆಂಕಟೇಶ್, ರವಿ ಇದ್ದರು.

****

ಕೊರೊನಾ ಕಾಣಿಸಿಕೊಂಡಾಗ ಬೆಳ್ಳಿ ಬೆಲೆ ಇಳಿಕೆಯಾಗಿತ್ತು. ಆಗ 35 ಕೆಜಿ ಬೆಳ್ಳಿ ಖರೀದಿ ಮಾಡಿದೆವು. ಸೋನಿ ಸಮಾಜ ಕೂಡ 25 ಕೆಜಿ ಬೆಳ್ಳಿ ನೀಡಿದರು. ದಾನಿಗಳ ನೆರವಿನಿಂದ ಬಾಗಿಲಿಗೆ ಬೆಳ್ಳಿ ಕವಚ ಮಾಡಿಸಲಾಯಿತು.

- ಜಯಣ್ಣ, ಅಧ್ಯಕ್ಷರು,ವೀರಶೈವ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT