ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ₹60 ಲಕ್ಷ ವಾಪಸ್

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಆರೋಪ
Last Updated 2 ಅಕ್ಟೋಬರ್ 2020, 3:00 IST
ಅಕ್ಷರ ಗಾತ್ರ

ಹೊಳಲ್ಕೆರೆ: ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ₹ 60 ಲಕ್ಷ ಬಳಕೆಯಾಗದೇ ವ್ಯರ್ಥವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಆರೋಪಿಸಿದರು.

ತಾಲ್ಲೂಕಿನ ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಚೆಕ್‌ ಡ್ಯಾಂ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ಕಾಮಗಾರಿ ನಡೆಸಲು ₹60 ಲಕ್ಷ ನಿಗದಿ ಮಾಡಲಾಗಿತ್ತು. ಈ ಯೋಜನೆಯಲ್ಲಿ 17 ಕಾಮಗಾರಿ ಗುರುತಿಸಿದ್ದರೂ ಕೇವಲ 3 ಕಾಮಗಾರಿ ಮಾತ್ರ ಮಾಡಿದ್ದಾರೆ. ₹60 ಲಕ್ಷದಲ್ಲಿ ಕೇವಲ ₹ 6.38 ಲಕ್ಷ ಬಳಕೆ ಆಗಿದ್ದು, ಉಳಿದ ಹಣ ವಾಪಸ್ ಹೋಗಿದೆ. ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿ ಮುಗಿಸಿದ್ದರೆ, ಪೂರ್ತಿ ಹಣ ಬಳಸಿಕೊಳ್ಳಬಹುದಿತ್ತು. 17 ಚೆಕ್ ಡ್ಯಾಂ ನಿರ್ಮಿಸಿದ್ದರೆ ಅಂತರ್ಜಲ ಹೆಚ್ಚುತ್ತಿತ್ತು. ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸರಿಯಾಗಿ ಬಳಕೆ ಮಾಡದೆ ಅಸಡ್ಡೆ ತೋರಿದ್ದಾರೆ’ ಎಂದು ದೂರಿದರು.

ಪಟ್ಟಣದ ಕೃಷಿ ಇಲಾಖೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಶಶಿಕಲಾ ಅವರು, ‘ಸರಿಯಾಗಿ ಲೆಕ್ಕಪತ್ರ ನಿರ್ವಹಿಸಿಲ್ಲ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿವಿಧ ಯೋಜನೆಗಳಿಗೆ ಸರಿಯಾಗಿ ಕ್ರಿಯಾಯೋಜನೆ ತಯಾರಿಸಿಲ್ಲ. ತಾಂತ್ರಿಕ ಯೋಜನೆಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ದಾಖಲೆಗಳು ಸರಿಯಿಲ್ಲ’ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ‘ಬೇರೆ ತಾಲ್ಲೂಕುಗಳಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಶೇ 100ರಷ್ಟು ಬಳಕೆ ಮಾಡಲಾಗಿದೆ. ಆದರೆ, ಇಲ್ಲಿ ಮಾತ್ರ ಸರಿಯಾಗಿ ಕೆಲಸ ಮಾಡಿಲ್ಲ. ಸಕಾಲದಲ್ಲಿ ಕಾಮಗಾರಿ ಮುಗಿಸಿ ಹಣ ಪಡೆಯಬಹುದಿತ್ತು. ನಡೆದಿರುವ ಕಾಮಗಾರಿಗಳ ಗುಣಮಟ್ಟವೂ ಸರಿಯಾಗಿಲ್ಲ’ ಎಂದು ಆರೋಪಿಸಿದರು.

ಕೃಷಿ ಇಲಾಖೆಯ ನಿರ್ದೇಶಕ ಹುಲಿರಾಜ್, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಉಮೇಶ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲೋಕೇಶ್, ಮಂಜು ಇದ್ದರು.

***

ನಿಗದಿತ ಅವಧಿ ಒಳಗೆ ಕಾಮಗಾರಿ ನಡೆಸದಿದ್ದರೆ ಸರ್ಕಾರದ ಅನುದಾನ ವಾಪಸ್ ಹೋಗುತ್ತದೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಚುರುಕಿನಿಂದ ಕೆಲಸ ಮಾಡಬೇಕು.
-ಶಶಿಕಲಾ ಸುರೇಶ್ ಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT