ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ಕಿರುಕುಳ ನೀಡಬೇಡಿ

ಬಗರ್‌ಹುಕುಂ ಸಭೆಯಲ್ಲಿ ಆರ್‌ಎಫ್‌ಒಗೆ ಶಾಸಕ ಎಂ. ಚಂದ್ರಪ್ಪ ಸೂಚನೆ
Last Updated 31 ಜುಲೈ 2022, 6:10 IST
ಅಕ್ಷರ ಗಾತ್ರ

ಹೊಳಲ್ಕೆರೆ: ಅರಣ್ಯದ ಅಂಚಿನಲ್ಲಿ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಕಿರುಕುಳ ನೀಡಬಾರದು ಎಂದು ಶಾಸಕ ಎಂ. ಚಂದ್ರಪ್ಪ ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ಅವರಿಗೆ ಸೂಚಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ನಡೆದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕಾನೂನಿನ ನೆಪ ಇಟ್ಟುಕೊಂಡು ರೈತರ ಕೃಷಿ ಕಾರ್ಯಗಳಿಗೆ ತೊಂದರೆ ನೀಡಬಾರದು. ಅರಣ್ಯ ಪ್ರದೇಶ ಹೊರತುಪಡಿಸಿ ಲಭ್ಯವಿರುವ ಜಮೀನನ್ನು ಹಂಚಿಕೆ ಮಾಡಲು ಸಹಕಾರ ನೀಡಬೇಕು. ಅರಣ್ಯ ವ್ಯಾಪ್ತಿಯ ಗಡಿ ಗುರುತಿಸಿ ಉಳಿದ ಜಮೀನು ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ನೇರಲಕಟ್ಟೆ, ತಣಿಗೆ ಹಳ್ಳಿ, ಕೇಶವಾಪುರ, ಸಾದರಹಳ್ಳಿ, ಹಿರೇಕಂದವಾಡಿ ಗ್ರಾಮಗಳ ವ್ಯಾಪ್ತಿಯ ಅರಣ್ಯ ಪ್ರದೇಶದ ಗಡಿ ಗುರುತಿಸಿ ಮಾಹಿತಿ ನೀಡಬೇಕು’ ಎಂದು ಸೂಚನೆ ನೀಡಿದರು.

‘ಜಾನುವಾರು ಸಂಖ್ಯೆಗೆ ಅನುಗುಣವಾಗಿ ಗೋಮಾಳ ಮೀಸಲಿಡಬೇಕಿದೆ. ಹಿಂದೆ ಗ್ರಾಮಗಳಲ್ಲಿ ಹೆಚ್ಚು ಜಾನುವಾರು ಇದ್ದವು. ಈಗ ಸಂಖ್ಯೆ ಕಡಿಮೆ ಆಗಿದೆ. ಹಳೆಯ ಅಂಕಿ ಅಂಶ ತೋರಿಸದೆ ಹೊಸದಾಗಿ ಸಮೀಕ್ಷೆ ನಡೆಸಿ ಮಾಹಿತಿ ನೀಡಬೇಕು’ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ ಅವರಿಗೆ ಸೂಚಿಸಿದರು.

‘ಕಾಗಳಗೆರೆಯಲ್ಲಿ 641 ಎಕರೆ ಗೋಮಾಳ ಇದೆ. ಈ ಗ್ರಾಮದಲ್ಲಿ ಪರಿಶಿಷ್ಟರೇ ಹೆಚ್ಚಿದ್ದು, ಜಮೀನು ಹಂಚಿಕೆಗೆ ಸ್ಕೆಚ್ ತಯಾರಿಸಬೇಕು. ಗಂಜಿಗಟ್ಟೆ, ಶಿವಗಂಗಾ, ಕೊಮಾರನಹಳ್ಳಿ ಮತ್ತಿತರ ಕಡೆ ಜರೂರಾಗಿ ಸ್ಕೆಚ್ ತಯಾರಿಸಬೇಕು. ರೈತರ ಹೆಸರಿಗೆ ಜಮೀನು ಇಲ್ಲದಿರುವುದರಿಂದ ಅವರು ತೋಟ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ಸಭೆಯ ಒಳಗೆ ನಾಲ್ಕೂ ಹೋಬಳಿಗಳ ಸ್ಕೆಚ್ ತಯಾರಿಸಿರಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ತಾಲ್ಲೂಕಿನ ಅರಸನ ಘಟ್ಟ, ಗುಂಡೇರಿ, ಗುಂಡೇರಿ ಕಾವಲು, ಗೊಲ್ಲರಹಳ್ಳಿ, ಬ್ರಹ್ಮಪುರ, ಪಂಪಾಪುರ, ಅಮೃತಾಪುರ, ಹಾಲೇನಹಳ್ಳಿ, ಕಣಿವೆ ಜೋಗಿಹಳ್ಳಿ, ಕೊಳಾಳು, ಕಸವನಹಳ್ಳಿ, ಬಸವಾಪುರ, ದಂಡಿಗೇನಹಳ್ಳಿ, ಶೃಂಗೇರಿ ಹನುಮನ ಹಳ್ಳಿ, ಕೊರಚರ ಹಟ್ಟಿ ಗ್ರಾಮಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಅನುಮೋದನೆ ದೊರೆತಿದೆ. ₹ 16 ಕೋಟಿ ವೆಚ್ಚದಲ್ಲಿ ಈ ಗ್ರಾಮಗಳಲ್ಲಿ ಆಶ್ರಯ ಬಡಾವಣೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಅಕ್ರಮ ಸಕ್ರಮ ಸಮಿತಿಯ ಸದಸ್ಯೆ ಅಂಗಡಿ ಹಾಲಮ್ಮ, ತಹಶೀಲ್ದಾರ್ ರಮೇಶಾಚಾರಿ, ಗ್ರಾಮ ಲೆಕ್ಕಾಧಿಕಾರಿಗಳು, ಸರ್ವೆ ಇಲಾಖೆ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT