ಮೊಳಕಾಲ್ಮುರು: ಜಿಲ್ಲೆಯ 2ನೇ ಅತಿದೊಡ್ಡ ಜಾತ್ರೆ ಎಂದು ಗುರುತಿಸಿಕೊಂಡಿರುವ ವಿಧಾನಸಭಾ ಕ್ಷೇತ್ರದ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಸಿದ್ಧತೆಗಳನ್ನು ಶಾಸಕ ಎನ್.ವೈ. ಗೋಪಾಲಕೃಷ್ಣ ಬುಧವಾರ ಪರಿಶೀಲಿಸಿದರು.
ಸೆ.3 ರಂದು ತುಂಬಲು ಜಾತ್ರೆ ನಡೆಯಲಿದ್ದು, ಭಾನುವಾರ ಹುತ್ತಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಜಾತ್ರೆ ಕಾರ್ಯಕ್ರಮ ಆರಂಭವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ನೆರೆಯ ಆಂಧ್ರಪ್ರದೇಶದಿಂದ ಲಕ್ಷಾಂತರ ಜನರು ಜಾತ್ರೆಗೆ ಬರುವ ಕಾರಣ ಪೂರ್ವಸಭೆಯಲ್ಲಿ ಸೂಚಿಸಿರುವ ಎಲ್ಲಾ ಸಿದ್ಧತೆಗಳನ್ನು ಚಾಚೂ ತಪ್ಪದೇ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆ ನಡೆಯುವ ತುಂಬಲಿನಲ್ಲಿ ಈಗಾಗಲೇ ಸ್ವಚ್ಛತೆ ಕಾರ್ಯ ಪೂರ್ಣಗೊಳಿಸಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆಯನ್ನು ಭಾನುವಾರಕ್ಕೆ ಪೂರ್ಣಗೊಳಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗೆ 2 ಕೊಳವೆಬಾವಿ ಕೊರೆಯಿಸಲಾಗಿದ್ದು, ಎರಡರಲ್ಲೂ ನೀರು ಸಿಕ್ಕಿದೆ. ಒಂದಕ್ಕೆ ಮೋಟರ್ ಅಳವಡಿಸಿದ್ದು ಇನ್ನೊಂದು ಬಾವಿಗೂ ಮೋಟರ್ ಅಳವಡಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾಹಿತಿ ನೀಡಿದರು.
ದೇವರು ಗ್ರಾಮದಿಂದ ತುಂಬಲು ಸ್ಥಳಕ್ಕೆ ಹೋಗುವ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತೆ ಕೈಗೊಳ್ಳಬೇಕು. ಮುಳ್ಳು ಗಿಡ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಂದು ನೂಕು ನುಗ್ಗಲು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ವೀರಣ್ಣ, ತಿಪ್ಪೇಸ್ವಾಮಿ, ಪಿಡಿಒ ಹನುಮಂತರಾಯ ಇದ್ದರು.