ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಉದ್ಯಾನ ನಿರ್ವಹಣೆ ಇಲ್ಲ, ಕಾಮಗಾರಿ ಮುಗಿದಿಲ್ಲ

ವಾಣಿ ವಿಲಾಸ ಜಲಾಶಯದ ಬಳಿ ಇರುವ ಉದ್ಯಾನದ ಸ್ಥಿತಿ; ಪ್ರವಾಸಿಗರಿಂದ ಹಿಡಿಶಾಪ
Last Updated 27 ಸೆಪ್ಟೆಂಬರ್ 2020, 12:27 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿರುವ ಪ್ರಕೃತಿವನ ಹಾಗೂ ಆರು ವರ್ಷದಿಂದ ಕಾಮಗಾರಿ ಪೂರ್ಣಗೊಳ್ಳದ ಮತ್ತೊಂದು ಉದ್ಯಾನ ನಿರ್ವಹಣೆ ಇಲ್ಲದೆ ವಿಕೃತರೂಪ ಪಡೆದಿವೆ.

ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೆ.ಎಚ್.ರಂಗನಾಥ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ (2004ರ ಏಪ್ರಿಲ್ 26) ವಾಣಿವಿಲಾಸ ಜಲಾಶಯದ ಅಣೆಕಟ್ಟೆ ಕೆಳಭಾಗದಲ್ಲಿ ‘ಪ್ರಕೃತಿ ವಿಹಾರ ವನ’ ಉದ್ಘಾಟನೆಗೊಂಡಿತ್ತು. ಅರಣ್ಯ ಇಲಾಖೆ ನಿರ್ಮಿಸಿದ್ದ ಈ ವನ ಯುವ ಜೋಡಿಗಳಿಗೆ, ವಿದ್ಯಾರ್ಥಿಗಳು, ಸ್ನೇಹಿತರು, ಕುಟುಂಬದ ಸದಸ್ಯರಿಗೆ ತಂಪೆರೆಯುವ ತಾಣವಾಗಿತ್ತು.

ಅಲ್ಲಿನ ರಾಶಿ ವನ, ಅಶೋಕವನ, ಮಾದರಿ ಗ್ರಾಮ, ನಂದನವನ, ಗುಲಾಬಿ ತೋಟ, ಜಪಾನೀಸ್ ಉದ್ಯಾನ, ಬೃಹತ್ ಪಂಚಾಯತ್ ವನ, ಸಪ್ತಸ್ವರ ವನ, ತ್ರಿಫಲವನ, ಗಾರ್ಡನ್ ಆಫ್ ಹಾರ್ಮೊನಿ, ತಾವರೆ, ನೆಲ್ಲಿ, ಔಷಧಿ ಗಿಡಗಳ ವನ, ಪುಟಾಣಿ ಮಕ್ಕಳ ಆಟಿಕೆಯ ವನ ಎಲ್ಲವೂ ಒಂದನ್ನೊಂದು ಮೀರಿಸುವಂತೆ ಪ್ರವಾಸಿಗರನ್ನು ಸೆಳೆಯುತ್ತಿದ್ದವು.

ಆದರೆ, ನಿರ್ವಹಣೆ ಕೊರತೆಯಿಂದ ಪ್ರಕೃತಿವನ ಹಾಳಾಗಿದೆ. ಪ್ರಕೃತಿವನದ ಎದುರು ಭಾಗದಲ್ಲಿ 2014ರ ಅ. 11ರಂದು ಅಂದಿನ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ₹5 ಕೋಟಿ ವೆಚ್ಚದಲ್ಲಿ ಮತ್ತೊಂದು ಉದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ವರ್ಷದೊಳಗೆ ಅಭಿವೃದ್ಧಿ ಪಡಿಸಿದ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ನಿರ್ಮಿತಿ ಕೇಂದ್ರಕ್ಕೆ ತಾಕೀತು ಮಾಡಲಾಗಿತ್ತು.

ಆದರೆ, ಆರು ವರ್ಷ ಗತಿಸಿದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಪೂರ್ಣಗೊಳಿಸದ ಕಾರಣ ಇಡೀ ಆವರಣದ ತುಂಬ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಹೈಟೆಕ್ ಶೌಚಾಲಯ ನಿರ್ಮಾಣವಾದರೂ ಪ್ರವಾಸಿಗರ ಬಳಕೆಗೆ ಲಭ್ಯವಾಗಿಲ್ಲ. ಪಾದಚಾರಿ ಮಾರ್ಗಕ್ಕೆ ಹಾಕಿರುವ ಟೈಲ್ಸ್‌ಗಳು ಹಾಳಾಗಿವೆ. ಒಂದೆರಡು ವಾರ ಮಳೆ ಬೀಳದಿದ್ದರೆ ಇಡೀ ಆವರಣ ಬೀಳು ಭೂಮಿಯಂತೆ ಕಾಣುತ್ತದೆ.

ವಾಣಿವಿಲಾಸ ಅಣೆಕಟ್ಟೆ ನೋಡಲು ನಿರ್ಬಂಧ ವಿಧಿಸಿರುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ. ಆದರೆ, ಕಣಿವೆ ಮಾರಮ್ಮ ದೇಗುಲಕ್ಕೆ ನಿತ್ಯ ನೂರಾರು ಭಕ್ತರು ಬರುತ್ತಾರೆ. ವಾಣಿವಿಲಾಸ ಜಲಾಶಯಕ್ಕೆ ಹೋಗುವ ಮಾರ್ಗದಲ್ಲಿರುವ ಈ ಎರಡೂ ಉದ್ಯಾನಗಳು ಆಡಳಿತ ನಡೆಸುವವರ ನಿರ್ಲಕ್ಷ್ಯಕ್ಕೆ ತಾಜಾ ಉದಾಹರಣೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT