ಮಂಗಳವಾರ, ಜೂನ್ 2, 2020
27 °C
ಬೆಲೆ ಇಳಿಕೆಗೆ ತತ್ತರಿಸಿದ ರೈತರು l ಎಪಿಎಂಸಿ ಕಡೆಗೆ ಸುಳಿಯದ ಬೆಳೆಗಾರರು

ಮಳಿಗೆ ತೆರೆದರೂ ನಡೆಯದ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಅಗತ್ಯ ವಸ್ತುಗಳನ್ನು ಪೂರೈಸುವ ಹಾಗೂ ಕೃಷಿ ಚಟುವಟಿಕೆಗೆ ನೆರವಾಗುವ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಬುಧವಾರ ಪ್ರಾರಂಭವಾದರೂ, ನಿರೀಕ್ಷಿತ ವಹಿವಾಟು ನಡೆಯಲಿಲ್ಲ. ಬೆರಳೆಣಿಕೆಯ ರೈತರು ಮಾರುಕಟ್ಟೆಗೆ ಭೇಟಿ ನೀಡಿ ಮೆಕ್ಕೆಜೋಳ, ಶೇಂಗಾ ಮತ್ತು ಕಡಲೆ ಮಾರಾಟ ಮಾಡಿದರು.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಚಿತ್ರದುರ್ಗದ ಎಪಿಎಂಸಿಯಲ್ಲಿ ಮಾರ್ಚ್‌ 22ರಿಂದ ವಹಿವಾಟು ಸ್ಥಗಿತಗೊಂಡಿತ್ತು. ಕೃಷಿ ಉತ್ಪನ್ನಗಳನ್ನು ರೈತರು ಮಾರುಕಟ್ಟೆಗೆ ತರುತ್ತಿರಲಿಲ್ಲ. ವರ್ತಕರು ಮಳಿಗೆಯನ್ನು ತೆರೆದಿರಲಿಲ್ಲ. ಹೀಗಾಗಿ, ವಾರದಿಂದ ಎಪಿಎಂಸಿ ಆವರಣ ಜನರಿಲ್ಲದೇ ಭಣಗುಡುತ್ತಿತ್ತು.

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು, ವರ್ತಕರು ಹಾಗೂ ಪೊಲೀಸರು ಸಭೆ ನಡೆಸಿದ್ದರು. ಅಗತ್ಯ ವಸ್ತುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ರೈತರು ಪಾಸ್‌ ಪಡೆಯುವ ಅಗತ್ಯವಿಲ್ಲ. ಉತ್ಪನ್ನ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ ಬಿಲ್‌ ತೋರಿಸಿ ಊರಿಗೆ ಮರಳಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಜನರಿಲ್ಲದೇ ಬಿಕೊ ಎನ್ನುತ್ತಿದ್ದ ಮಾರುಕಟ್ಟೆಯಲ್ಲಿ ಗುರುವಾರ ಚಟುವಟಿಕೆ ಕಾಣಿಸಿಕೊಂಡಿತು. ಶೇಂಗಾ, ಕಡಲೆ ಮತ್ತು ಮೆಕ್ಕೆಜೋಳವನ್ನು ತಂದಿದ್ದ ರೈತರು ಮಳಿಗೆಗಳ ಎದುರು ತೂಕ ಮಾಡುತ್ತಿದ್ದರು. ಬಾಗಿಲು ತೆರೆದಿದ್ದ ಮಳಿಗೆಗಳಲ್ಲಿ ಸಣ್ಣ ಮಟ್ಟಿನ ವಹಿವಾಟು ನಡೆಯಿತು. ಖರೀದಿಸಿದ ಉತ್ಪನ್ನಗಳನ್ನು ಬೇರೆಡೆಗೆ ರವಾನೆ ಮಾಡಲು ಅಗತ್ಯವಿರುವ ಪಾಸ್ ಅನ್ನು ಎಪಿಎಂಸಿ ವಿತರಣೆ ಮಾಡಿತು. ಮೊದಲ ದಿನ ಮಾರುಕಟ್ಟೆಗೆ ಬಂದಿದ್ದ 1241 ಚೀಲ ಮೆಕ್ಕೆಜೋಳ, 15 ಚೀಲ ಶೇಂಗಾ ಮಾರಾಟವಾದವು.

ಮನೆ ಬಾಗಿಲಿಗೆ ತರಕಾರಿ

ನಗರ ಪ್ರದೇಶದ ಜನರಿಗೆ ಅನುಕೂಲ ‌ಮಾಡಿಕೊಡಲು ರೈತರಿಂದ ಖರೀದಿಸಿದ ತಾಜಾ ತರಕಾರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು ಹಾಪ್‌ಕಾಮ್ಸ್‌ ಮುಂದಾಗಿದೆ.

ಬುಧವಾರ ತರಕಾರಿ ವಾಹನವೊಂದು ನಗರದ ರೈಲ್ವೆ ನಿಲ್ದಾಣ, ಪಿ ಅಂಡ್ ಟಿ ಕ್ವಾರ್ಟರ್ಸ್‌, ಹೊಳಲ್ಕೆರೆ ರಸ್ತೆ, ಬಿವಿಕೆಎಸ್ ಬಡಾವಣೆಯಲ್ಲಿ ಸಂಚರಿಸಿತು. ಮೂರು ವಾಹನಗಳು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಲಿವೆ. ಸಾರ್ವಜನಿಕರಿಂದ ಉತ್ತಮ‌ ಸ್ಪಂದನೆ ದೊರೆತರೆ ಮತ್ತಷ್ಟು ವಾಹನಗಳ ಸಂಚಾರಕ್ಕೆ ಹಾಪ್‌ಕಾಮ್ಸ್ ಉತ್ಸಾಹ ತೋರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.