ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಬೆಳಕಿನ ಹಬ್ಬದಲ್ಲಿ ಕುಗ್ಗಿದ ಶಬ್ದ ಮಾಲಿನ್ಯ

Published 23 ನವೆಂಬರ್ 2023, 6:22 IST
Last Updated 23 ನವೆಂಬರ್ 2023, 6:22 IST
ಅಕ್ಷರ ಗಾತ್ರ

ಚಿತ್ರದುರ್ಗ: ದೀಪಾವಳಿ ಬಂತೆಂದರೆ ಸಾಕು ಪಟಾಕಿ ಅಬ್ಬರ ಜೋರು. ಪಟಾಕಿ ಸಿಡಿಸಲು ಸಾಕಷ್ಟು ನಿಬಂಧನೆಗಳಿದ್ದರೂ ಪಾಲನೆ ಮಾತ್ರ ದೂರದ ಮಾತಾಗಿತ್ತು. ಆದರೆ, ಈ ಬಾರಿ ಜಿಲ್ಲೆಯ ಜನ ಅಬ್ಬರಿಸುವ ಪಟಾಕಿಯಿಂದ ಬಹುತೇಕ ದೂರ ಉಳಿದು ಬೆಳಕಿನ ಹಬ್ಬ ಆಚರಿಸಿರುವುದು ವಿಶೇಷ.

ಬೆಂಗಳೂರು ಬಳಿಯ ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದಾಗುವ ಶಬ್ದ ಮಾಲಿನ್ಯ ಸರಾಸರಿ ಕುಸಿತ ಕಂಡಿದೆ. ಈ ಬಾರಿ ದೀಪಾವಳಿ ಹಬ್ಬದಲ್ಲಿ ಸರಾಸರಿ 67 ಡೆಸಿಬಲ್‌ ಶಬ್ದ ದಾಖಲಾಗಿದ್ದರೆ, ಕಳೆದ ಬಾರಿ ಸರಾಸರಿ 71.69 ಡೆಸಿಬಲ್‌ ದಾಖಲಾಗಿತ್ತು.

ಕಳೆದ ವರ್ಷ ₹ 5 ಕೋಟಿಯಷ್ಟು ಪಟಾಕಿ ಮಾರಾಟವಾಗಿತ್ತು. ಈ ಬಾರಿ ₹ 3 ಕೋಟಿಯಷ್ಟು ಮಾರಾಟವಾಗಿದೆ. ಈ ಬಾರಿ ಶೇ 60 ಮಾತ್ರ ಪಟಾಕಿ ಮಾರಾಟವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಟಾಕಿ ಮಾರಾಟಗಾರರೊಬ್ಬರು ತಿಳಿಸಿದರು.

ಈ ಬಾರಿ ಹಸಿರು ಪಟಾಕಿ ಮಾರಾಟದಲ್ಲೂ ಕೊಂಚ ಏರಿಕೆಯಾಗಿದೆ. ಇದರಿಂದ ಶಬ್ದ ಮಾಲಿನ್ಯ ಕಡಿಮೆಯಾಗಿದೆ. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಂಕಿ ಅಂಶಗಳ ಪ್ರಕಾರ ಐಯುಡಿಪಿ ಬಡಾವಣೆಯ ವ್ಯಾಪ್ತಿಯಲ್ಲಿನ ಜನವಸತಿ ಪ್ರದೇಶದ ಶಬ್ದಮಾಪಕ ಘಟಕದಲ್ಲಿ ನ.12ರಂದು 64.10, ನ.13ರಂದು 69.63 ಹಾಗೂ ನ.14ರಂದು 67.57 ಡೆಸಿಬಲ್‌ ಶಬ್ದ ದಾಖಲಾಗಿದೆ. ಕಳೆದ ವರ್ಷ ಹಬ್ಬದ ಮೊದಲ ದಿನದ ಅಂದರೆ ಅ.24ರಂದು 66.73, ಅ.25ರಂದು 60.29 ಹಾಗೂ ಅ. 26ರಂದು 71.69 ಡೆಸಿಬಲ್‌ ಶಬ್ದ ದಾಖಲಾಗಿತ್ತು.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಪರವಾನಗಿ ನೀಡಲಾಗಿತ್ತು. ಶಾಲೆ– ಕಾಲೇಜುಗಳಲ್ಲಿ ಪಟಾಕಿಯಿಂದಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸಿದ್ದರ ಪರಿಣಾಮ ಕಳೆದ ವರ್ಷಕ್ಕಿಂತ ಈ ಬಾರಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ. ಈ.
ಪ್ರಕಾಶ್‌, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ನ.12ರಿಂದ ನ.14ರವರೆಗಿನ (ದೀಪಾವಳಿ ಅವಧಿ) ಮೂರು ದಿನಗಳನ್ನು ಪರಿಗಣಿಸಿದರೆ ಚಿತ್ರದುರ್ಗದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಸರಾಸರಿ 67 ಡೆಸಿಬಲ್‌ ದಾಖಲಾಗಿದೆ. ಹಬ್ಬಕ್ಕೆ ಆರು ದಿನಗಳ ಹಿಂದೆ ಪರೀಕ್ಷಿಸಿದಾಗ ಶಬ್ದ ಪ್ರಮಾಣ 52.13 ಡೆಸಿಬಲ್‌ ಇತ್ತು. ಸಾಮಾನ್ಯ ದಿನಗಳಲ್ಲಿ ವಸತಿ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯದ ಪ್ರಮಾಣ 55ರಿಂದ 65 ಡೆಸಿಬಲ್‌ ಇರುತ್ತದೆ. ಇಷ್ಟು ಪ್ರಮಾಣದ ಮಾಲಿನ್ಯವನ್ನು ಸಾಮಾನ್ಯ ಎಂದು ಗುರುತಿಸಲಾಗುತ್ತದೆ.

125 ಡೆಸಿಬಲ್‌ಗಳಿಗಿಂತಲೂ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿತ್ತು. ಜತೆಗೆ ಹಬ್ಬದ ಸಮಯದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿ ಸುಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಇದರ ಜತೆಗೆ ಪಟಾಕಿ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪಟಾಕಿಗಳನ್ನು ವಶಕ್ಕೆ ಪಡೆದಿದ್ದರಿಂದ ಜನರು ಎಚ್ಚೆತ್ತು ಪಟಾಕಿಗಳಿಂದ ದೂರ ಉಳಿದಿರುವ ಸಾಧ್ಯತೆ ಇದೆ.

ಕೆಲ ಭಾಗಗಳಲ್ಲಿ ರಾತ್ರಿ 10ರಿಂದ 12ರವರೆಗೂ ಪಟಾಕಿ ಸಿಡಿಸಿರುವುದು ಶಬ್ದಮಾಪಕ ಘಟಕದಲ್ಲಿ ದಾಖಲಾಗಿದೆ. ರಾತ್ರಿಯ ಕೆಲ ಸಮಯ ಮಾತ್ರ 96.48 ಡೆಸಿಬಲ್‌ಗೆ ಶಬ್ದ ಮಾಲಿನ್ಯ ತಲುಪಿದೆ. ಕಳೆದ ವರ್ಷ ಇದರ ಪ್ರಮಾಣ 98.45 ರವರೆಗೂ ದಾಖಲಾಗಿತ್ತು.

ಅಧಿಕಾರಿಗಳ ತಂಡದ ನಿರಂತರ ದಾಳಿಯ ನಡುವೆಯೂ ಕೆಲವು ಕಡೆ ನಿಷೇಧಿತ ಪಟಾಕಿಗಳ ಮಾರಾಟ ನಡೆದಿತ್ತು. ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತ, ಪರಿಸರ ಮಾಲಿನ್ಯ ಇಲಾಖೆ ಹಾಗೂ ನಗರಸಭೆಯಿಂದ 2021ರಲ್ಲಿ 12, 2022 ರಲ್ಲಿ 22 ಮಳಿಗೆಗಳನ್ನು ಹಾಕಲಾಗಿತ್ತು. ಈ ಬಾರಿ 24 ಮಳಿಗೆಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿತ್ತು. ಆದರೂ ಪಟಾಕಿಗಳ ಸದ್ದು ಅಷ್ಟಾಗಿ ಇರಲಿಲ್ಲ.

ಹಿರಿಯೂರು ನಗರದ ನೆಹರೂ ಮೈದಾನ, ಚಳ್ಳಕೆರೆಯ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಆವರಣ, ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಕನ್ನಡ ಮತ್ತು ಉರ್ದು ಪಾಠಶಾಲೆ ಆವರಣ, ಹೊಸದುರ್ಗ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ, ಮೊಳಕಾಲ್ಮುರು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದ ಬಯಲು ಪ್ರದೇಶದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಜಿಲ್ಲಾ ಕೇಂದ್ರ ಸೇರಿ ಉಳಿದ ಕಡೆಯೂ ಪಟಾಕಿ ವ್ಯಾಪಾರ ಈ ಬಾರಿ ಕುಗ್ಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT