ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಕ್ವಾರಂಟೈನ್‌ನಲ್ಲಿರುವವರು ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿಲ್ಲ

ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಸ್ಪಷ್ಟನೆ
Last Updated 1 ಏಪ್ರಿಲ್ 2020, 13:57 IST
ಅಕ್ಷರ ಗಾತ್ರ

ಹಿರಿಯೂರು:ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೂ ಹಿರಿಯೂರಿನಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ 9 ಜನರಿಗೂ ಯಾವುದೇ ಸಂಬಂಧವಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ನಗರದ ಬೈಪಾಸ್ ರಸ್ತೆಯಲ್ಲಿರುವ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಬುಧವಾರ ಫೀವರ್ ಫ್ಲೂ ಕ್ಲಿನಿಕ್‌ಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ನಗರದ ಬಿಲಾಲ್ ಮಸೀದಿ ಆವರಣದಲ್ಲಿ ಮಾರ್ಚ್ 21 ರಿಂದ ಹೋಂ ಕ್ವಾರಂಟೈನ್ ನಲ್ಲಿರುವ 9 ಜನರಲ್ಲಿ ಯಾವುದೇ ಕೊರೊನಾ ಲಕ್ಷಣಗಳಿಲ್ಲ. ಅವರು ವಿದೇಶದಿಂದ ಬಂದಿದ್ದವರು ಎಂಬ ಕಾರಣಕ್ಕೆ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. 9 ಜನರಲ್ಲಿ 8 ಜನ ಸೌದಿಅರೇಬಿಯಾಕ್ಕೆ ಹೋಗಿದ್ದವರಾಗಿದ್ದರು. ಅಲ್ಲಿಂದ ಕತ್ತಾರ್, ಮುಂಬೈ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ಬಂದು, ಅಲ್ಲಿಂದ ಮಾರುತಿ ವ್ಯಾನಿನಲ್ಲಿ ಹಿರಿಯೂರಿಗೆ ಬಂದಿದ್ದಾರೆ. ಅವರಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಟಿಕೆಟ್ ಇದೆ. ಬೆಂಗಳೂರಿನಿಂದ ಕರೆದುಕೊಂಡು ಬಂದ ಕಾರಣಕ್ಕೆ ವ್ಯಾನ್ ಚಾಲಕ ಸೇರಿ 9 ಜನರನ್ನು ಕಳೆದ ಮಾರ್ಚ್ 21 ರಿಂದಲೇ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅವರ ಮೇಲೆ ನಮ್ಮ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸಂದೇಹಕ್ಕೆ ಕಾರಣವಾದ ಯಾವುದೇ ಪರಿಸ್ಥಿತಿ ಕಂಡು ಬಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ವಿದೇಶದಿಂದ ಬಂದವರ ಹೋಂಕ್ವಾರಂಟೈನ್ ಅವಧಿ ಮುಗಿಯುತ್ತಾ ಬಂದಿದ್ದು, 12 ನೇ ದಿನದಲ್ಲಿ ಅವರೆಲ್ಲರ ಗಂಟಲು ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಒಂಬತ್ತು ಶಂಕಿತರನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ನಿರ್ಮಿಸಿರುವ ಹೋಂಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಾರ್ಚ್ 28 ರಂದು ಫೀವರ್ ಕ್ಲಿನಿಕ್ ಆರಂಭಿಸಿದ್ದು, ಹೆಚ್ಚುವರಿಯಾಗಿ ಹತ್ತು ಹಾಸಿಗೆಗಳಿರುವ ಮತ್ತೊಂದನ್ನು ಕಲ್ಯಾಣ ಮಂಟಪದಲ್ಲಿ ಆರಂಭಿಸಿದ್ದೇವೆ. ಜ್ವರ, ಕೆಮ್ಮು, ನೆಗಡಿ ಇರುವವರು ಇಲ್ಲಿಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಹೊರರಾಜ್ಯ, ಜಿಲ್ಲೆಗಳಿಂದ ಬಂದಿರುವವರು ತಾವು ಬಂದಿರುವುದನ್ನು ಮುಚ್ಚಿಡದೆ ಫೀವರ್ ಕ್ಲಿನಿಕ್ ಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

ತಹಶೀಲ್ದಾರ್ ಸತ್ಯನಾರಾಯಣ, ತಾಲ್ಲೂಕು ಪಂಚಾಯಿತಿ ಇಒ ಹನುಮಂತಪ್ಪ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಜಿ. ದಾದಾಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT