ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರಲ್ಲ, ನೂರು ಪತ್ರಕ್ಕೂ ಹೆದರಲ್ಲ: ಸಾಹಿತಿ ಬಿ.ಎಲ್‌. ವೇಣು

ಸಾಹಿತಿ ಬಿ.ಎಲ್‌. ವೇಣು ಅವರಿಗೆ ನೈತಿಕ ಧೈರ್ಯ ತುಂಬಿದ ಆಂಜನೇಯ, ರಘುಮೂರ್ತಿ
Last Updated 26 ಜುಲೈ 2022, 3:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾವರ್ಕರ್‌ ಕುರಿತು ಸತ್ಯವನ್ನೇ ಮಾತನಾಡಿದ್ದೇನೆ. ಕ್ಷಮೆ ಕೇಳುವಂತ ತಪ್ಪು ಮಾಡಿಲ್ಲ. ಬರವಣಿಗೆಯನ್ನು ನಿರ್ಭೀತಿಯಿಂದ ಮುಂದುವರಿಸುತ್ತೇನೆ. ಮೂರಲ್ಲ, ನೂರು ಪತ್ರ ಬಂದರೂ ಹೆದರುವುದಿಲ್ಲ ಎಂದು ಕಾದಂಬರಿಕಾರ ಬಿ.ಎಲ್‌.ವೇಣು ದೃಢವಾಗಿ ಮಾತನಾಡಿದರು.

ಇಲ್ಲಿನ ಮುನಿಸಿಪಲ್‌ ಕಾಲೊನಿಯ ಬಿ.ಎಲ್‌.ವೇಣು ಅವರ ಮನೆಗೆ ಸೋಮವಾರ ಭೇಟಿ ನೀಡಿ ನೈತಿಕ ಧೈರ್ಯ ತುಂಬಿದ ಮಾಜಿ ಸಚಿವ ಎಚ್‌.ಆಂಜನೇಯ ಹಾಗೂ ಶಾಸಕ ಟಿ.ರಘುಮೂರ್ತಿ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದರು.

‘ಸಹಿಷ್ಟು ಹಿಂದೂ ಎಂಬ ಹೆಸರಿನಲ್ಲಿ ಪತ್ರ ಬರೆಯುವ ವ್ಯಕ್ತಿಗೆ ಸಹಿಷ್ಣುತೆಯೇ ಇಲ್ಲ. ಸಾಮಾಜಿಕ ವ್ಯವಸ್ಥೆ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ಬರೆದಿದ್ದೇನೆ. ನಮ್ಮೆಲ್ಲರಿಗೂ ಬೇಕಿರುವುದು ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್‌. ಆದರೆ, ನಾಥೂರಾಮ್‌ ಗೂಡ್ಸೆ ಹಿರೋ ಅಗಿರುವುದು ದುರಂತ. ಇಂತಹ ವ್ಯವಸ್ಥೆಯ ಬಗ್ಗೆ ಧ್ವನಿಯತ್ತಿದರೆ ಮತ್ತೊಂದು ಪತ್ರ ಬರುತ್ತದೆ. ಅಂತಹ ಪತ್ರಗಳು ಇನ್ನೂ ಬರಲಿ’ ಎಂದರು.

‘ಬೆದರಿಕೆ ಪತ್ರಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರೆ ಆರೋಪಿಗಳು ಸೆರೆಯಾಗುತ್ತಾರೆ. ಅವರು ಮಾತನಾಡುವುದನ್ನು ಕಲಿತರೆ ಬೆದರಿಕೆ ಪತ್ರದ ಸಮಸ್ಯೆ ಇತ್ಯರ್ಥವಾಗುತ್ತದೆ. ಸರ್ಕಾರ ಸೂಚನೆ ನೀಡಿದರೆ ಆರೋಪಿಗಳು ಸೆರೆಯಾಗುತ್ತಾರೆ. ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರಲಿ ಎಂಬ ಉದ್ದೇಶ ಸರ್ಕಾರಕ್ಕೆ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿರುವಂತೆ ಕಾಣುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚಳವಳಿಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಹೋರಾಟ ನಡೆಯುವ ಮುನ್ಸೂಚನೆಗಳು ಇದ್ದಿದ್ದರೆ ಪರಿಸ್ಥಿತಿ ಇಷ್ಟು ಹಾಳಾಗುತ್ತಿರಲಿಲ್ಲ. ಭಾರತೀಯ ಬ್ರಿಟಿಷರು ದೇಶ ಆಳುತ್ತಿದ್ದಾರೆ. ಹೀಗಾಗಿ, ಸರ್ಕಾರವನ್ನು ಪ್ರಶ್ನೆ ಮಾಡುವವರಿಗೆ ದೇಶದ್ರೋಹಿಪಟ್ಟ ಕಟ್ಟಲಾಗುತ್ತಿದೆ’ ಎಂದು ಹೇಳಿದರು.

ಪತ್ರದ ಜಾಡು ಪತ್ತೆ

ಕಾದಂಬರಿಕಾರ ಬಿ.ಎಲ್‌.ವೇಣು ಅವರ ಮನೆಗೆ ಬಂದಿರುವ ಬೆದರಿಕೆ ಪತ್ರಗಳ ಜಾಡು ಪತ್ತೆಯಾಗಿದೆ. ಮೂರು ಪತ್ರಗಳು ಮೂರು ಜಿಲ್ಲೆಗಳಿಂದ ರವಾನೆಯಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

‘ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ದಾವಣಗೆರೆಯಿಂದ ಎರಡು ಪತ್ರ ಹಾಗೂ ಶಿವಮೊಗ್ಗದಿಂದ ಮೂರನೇ ಪತ್ರ ಅಂಚೆ ಪೆಟ್ಟಿಗೆಗೆ ಬಿದ್ದಿರುವುದು ಗೊತ್ತಾಗಿದೆ. ಅಂಚೆ ಪೆಟ್ಟಿಗೆ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆ ಸ್ಥಳದಲ್ಲಿ ಕಾರ್ಯನಿರ್ವಹಿಸಿದ ಮೊಬೈಲ್‌ ಫೋನುಗಳ ಮೇಲೂ ನಿಗಾ ಇಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಅವರು ಶಾಸಕ ಟಿ.ರಘುಮೂರ್ತಿ ಅವರಿಗೆ ದೂರವಾಣಿಯಲ್ಲಿ ಮಾಹಿತಿ ನೀಡಿದರು.

‘ಅಘೋಷಿತ ತುರ್ತು ಪರಿಸ್ಥಿತಿ’

ಬ್ರಿಟಿಷರ ಕಾಲದಲ್ಲಿ ಕವಿ, ಸಾಹಿತಿಗಳ ಮೇಲೆ ನಿರ್ಬಂಧವಿತ್ತು. ಸ್ವಾತಂತ್ರ್ಯ ಬಂದಾಗಿನಿಂದಲೂ ಬರವಣಿಗೆ ಹಾಗೂ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆರೋಪಿಸಿದರು.

‘ಇಂದಿರಾಗಾಂಧಿ ಕಾಲದ ತುರ್ತುಪರಿಸ್ಥಿತಿಯಲ್ಲಿ ಸರ್ಕಾರವನ್ನು ಟೀಕಿಸಿದವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಲಾಗಿದೆ. ಇಂದು ಹೀಗೆ ಟೀಕೆ ಮಾಡುವವರನ್ನು ಗುರಿ ಮಾಡಲಾಗುತ್ತಿದೆ. ಸಾಹಿತಿಗಳು ಧ್ವನಿಯತ್ತದಂತೆ ಬೆದರಿಕೆ ಹಾಕುತ್ತಿರುವುದು ಖಂಡನೀಯ. ಇಂಥವರನ್ನು ಮಟ್ಟಹಾಕುವ ಬದಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸಮಾಜಘಾತುಕ ಶಕ್ತಿಗಳು ಭಯದ ವಾತಾವರಣ ಸೃಷ್ಟಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಹಲವು ಸಾಹಿತಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರ ಇನ್ನೂ ಆರೋಪಿಗಳನ್ನು ಪತ್ತೆ ಮಾಡದಿರುವುದು ವಿಪರ್ಯಾಸ. ಪೊಲೀಸ್‌ ವರಿಷ್ಠಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸಲಾಗಿದ್ದು, ತನಿಖೆ ಚುರುಗೊಳ್ಳಬೇಕಿದೆ.

ಟಿ. ರಘುಮೂರ್ತಿ, ಶಾಸಕ, ಚಳ್ಳಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT