ಶನಿವಾರ, ಜನವರಿ 28, 2023
24 °C
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯಿಂದ ವಿವಿಧ ಕಾರ್ಯಕ್ರಮ

27ಕ್ಕೆ ವಿವಿ ಸಾಗರಕ್ಕೆ ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಡಿಸೆಂಬರ್‌ 27ರಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯಿಂದ ‘ಭದ್ರೆಗೆ ಜನರ ಬಾಗಿನ ಸಮರ್ಪಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ ಜಿ.ಎಸ್‌. ಉಜ್ಜನಪ್ಪ ತಿಳಿಸಿದರು.

‘ಭದ್ರೆಗೆ ಗೌರವ ಸಮರ್ಪಣೆ ಮಾಡುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ. 89 ವರ್ಷಗಳ ನಂತರ ವಿವಿ ಸಾಗರ ಮೈದುಂಬಿದ್ದು, ಇದಕ್ಕೆ ಭದ್ರಾ ನೀರು ಹರಿದು ಬಂದಿರುವುದು ಮುಖ್ಯ ಕಾರಣ. ಸಮಿತಿ ಅಧ್ಯಕ್ಷ ಪಿ. ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಬಂಜಗೆರೆ ಜಯಪ್ರಕಾಶ್‌, ಜಿಲ್ಲೆಯ ಮಠಾಧೀಶರು, ಶಾಸಕರು, ಸಂಸದರು, ಜನಪ್ರತಿನಿಧಿಗಳು, ರೈತ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕೈದು ಸಾವಿರ ಜನರು ಸೇರುವ ನಿರೀಕ್ಷೆಯಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬಾಗಿನ ಸಮರ್ಪಣೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಡ
ತರಲಾಗುವುದು. ಸಮಗ್ರ ನೀರಾವರಿ, ಕೆರೆ-ಕಟ್ಟೆಗಳ ಅಭಿವೃದ್ಧಿ, ಗಿಡ ನೆಡುವುದು, ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಂವಾದ, ಮುಖ್ಯಮಂತ್ರಿ ಬಳಿ ನಿಯೋಗ ಹೀಗೆ ವಿವಿಧ ಹಂತದ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ. ಯೋಜನೆ ಜಾರಿಗೆ 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮತ್ತೊಂದು ಚಳವಳಿಗೆ ಮುಂದಡಿ ಇಟ್ಟಿದೆ’ ಎಂದರು.

‘ಭೂಮಿಯ ರಕ್ಷಣೆ ನಮ್ಮ ಹೊಣೆ ಕಾರ್ಯಕ್ರಮದ ಮೂಲಕ ಕೃಷಿಕರಲ್ಲಿ ಭೂಮಿ ಸತ್ವ ಕಾಪಾಡಿಕೊಳ್ಳುವಂತೆ, ಬಹುಬೆಳೆ ಪದ್ಧತಿ ಅಳವಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ. ಯೋಜನೆ
ಯಿಂದಾಗಿ ಮಲೆನಾಡು ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಕಾಡು ನಾಶವಾಗಲಿದ್ದು, ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಗಿಡ ಬೆಳೆಸುವ ಹೊಣೆಗಾರಿಕೆ ಜಿಲ್ಲೆಯ ಜನರ ಮೇಲಿದೆ’ ಎಂದು ಸಂಚಾಲಕ ಚಳ್ಳಕೆರೆ ಬಸವರಾಜ್ ಹೇಳಿದರು. 

‘ಶ್ರೀಮಂತರು ಜಿಲ್ಲೆಯ ಭೂಮಿ ಮೇಲೆ ಕಣ್ಣಿಟ್ಟಿದ್ದು, ದುಬಾರಿ ಬೆಲೆಯ ಆಸೆ ತೋರಿಸಿ ಜಮೀನು ಖರೀದಿ ಮಾಡುವ ಜಾಲ ಆರಂಭವಾಗಿದೆ. ಭೂಮಿ ಮಾರಾಟ ಮಾಡದಂತೆ ರೈತರಿಗೆ ಮನವರಿಕೆ ಮಾಡಲಾಗುತ್ತದೆ’ ಎಂದರು.

ಸಂಚಾಲಕರಾದ ಟಿ.ಶಿವಪ್ರಕಾಶ್‌, ಕೂನಿಕೆರೆ ರಾಮಣ್ಣ ಇದ್ದರು.

ಶೀಘ್ರದಲ್ಲೇ ಗುರು ತಿಪ್ಪೇರುದ್ರಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಕೆಂಪಮ್ಮ, ಬಿಚ್ಚುಗತ್ತಿ ಭರಮಣ್ಣ ನಾಯಕರ ಭಾವಚಿತ್ರಗಳೊಂದಿಗೆ ಜಿಲ್ಲಾದ್ಯಂತ ಜಾಥಾ ಪ್ರಾರಂಭವಾಗಲಿದೆ. ಹಿರಿಯೂರಿನಿಂದ ಆರಂಭವಾಗಿ ಮೊಳಕಾಲ್ಮುರಿನಲ್ಲಿ ಸಮಾರೋಪಗೊಳ್ಳಲಿದೆ.

–ಜೋಗಿಮಟ್ಟಿ ಈ.ಮಹೇಶ್‌ ಬಾಬು, ಸಮಿತಿ ಸಂಚಾಲಕ

ಬಯಲುಸೀಮೆ ಜಲಪಾತ್ರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಬೇಕು. ಯೋಜನೆಯಿಂದ ಕೈಬಿಟ್ಟು ಹೋಗಿರುವ ಮೊಳಕಾಲ್ಮುರು ಸೇರಿ ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತದೆ.
–ನರೇನಹಳ್ಳಿ ಅರುಣ್‌ ಕುಮಾರ್‌, ಸಂಚಾಲಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು