ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಚಿತ್ರಕಲೆ ಸ್ಪರ್ಶ

ಕ್ಯಾಂಪಸ್‌ ಟು ಕಮ್ಯುನಿಟಿ ಸಂಸ್ಥೆಯಿಂದ ಕಾರ್ಯಕ್ರಮ
Last Updated 8 ಮೇ 2022, 2:45 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬೆಂಗಳೂರಿನ ಯುವಕ ಸಂಘದ ‘ಕ್ಯಾಂಪಸ್ ಟು ಕಮ್ಯುನಿಟಿ’ ಸಂಸ್ಥೆಯಿಂದ ಸರ್ಕಾರಿ ಶಾಲೆಗೆ ಉಚಿತವಾಗಿ ಬಣ್ಣ ಬಳಿದು ಚಿತ್ರ ಬಿಡಿಸಿ, ಶಾಲೆಯ ಅಂದವನ್ನು ಇಮ್ಮಡಿಗೊಳಿಸಲಾಗಿದೆ.

ಇಲ್ಲಿನ ಜನತಾ ಕಾಲೊನಿಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಬೆಂಗಳೂರಿನ ಯುವಕ ಸಂಘದ ಕ್ಯಾಂಪಸ್ ಟು ಕಮ್ಯುನಿಟಿ ಸಂಸ್ಥೆ ‘ಸ್ಕೂಲ್‌ಬೆಲ್‌75’ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನ ಆರ್‌.ವಿ.ಐ.ಟಿ.ಎಂ. ದೃಶ್ಯಕಲಾ ಮಹಾವಿದ್ಯಾಲಯ ಹಾಗೂ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಕಲಾ ತಂಡ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಸುಮಾರು 45 ಸದಸ್ಯರ ತಂಡ ಶಾಲೆಯ ಒಳ ಭಾಗ ಹಾಗೂ ಹೊರ ಭಾಗದಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ.

ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯವಲ್ಲದ ಕಲಿಕಾ ಸಾಮಗ್ರಿ ಚಿತ್ರಗಳು, ಗಣಿತ, ವಿಜ್ಞಾನ, ಸುಲಭ ಇಂಗ್ಲಿಷ್‌ ಹಾಗೂ ಭಾಷಾ ಕಲಿಕೆ, ಅಕ್ಷರ ಜ್ಞಾನ, ಬೌದ್ಧಿಕ, ಮಾನಸಿಕ, ಭಾವನಾತ್ಮಕ, ಯೋಗ, ಐತಿಹಾಸಿಕ ಪುರುಷರು, ಶಾಲೆಯ ಹಾಗೂ ಪರಿಸರದ ಸ್ವಚ್ಛತೆ ಅರಿವು, ವಿದ್ಯಾರ್ಥಿಯ ಕಲಿಕಾ ಬೆಳವಣಿಗೆ ಮತ್ತಿತರ ಚಿತ್ರಗಳನ್ನು ಬಿಡಿಸಿ, ಶಾಲೆಗೆ ಹೊಸ ಆಯಾಮವನ್ನು ನೀಡಿದ್ದಾರೆ. ಇದರಿಂದಾಗಿ ಶಾಲೆ ಹೊಸರೂಪ ಪಡೆದುಕೊಂಡಿದೆ.

‘ಯುವಕರು ಬಿಡಿಸಿರುವ ಚಿತ್ರಕಲೆ ನಿಜವಾಗಿಯೂ ಪ್ರತಿಯೊಂದು ಮಗುವಿನ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸಾಮಾನ್ಯ ಶಾಲೆಯಂತೆ ಇದ್ದ, ತರಗತಿಗಳ ಕೊಠಡಿಗಳನ್ನು ಇಷ್ಟೊಂದು ಅದ್ಭುತವಾಗಿ ಬಣ್ಣಗಳಿಂದ ಚಿತ್ರ ವಿನ್ಯಾಸಗೊಳಿಸಿ, ಯಾವುದೇ ಪ್ರತಿಫಲಾಕ್ಷೆ ಇಲ್ಲದೆ, ಮಕ್ಕಳ
ಕಲಿಕೆಗೆ ಬೆಂಬಲ ನೀಡಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ಹೇಳುತ್ತಾರೆ.

‘ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಶಿಕ್ಷಣದ ಮೂಲಕ ವಿದ್ಯಾರ್ಥಿ ಜ್ಞಾನ ಪಡೆಯಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯ ಹೋರಾಟಗರ ಬಿ.ಎಂ. ಚನ್ನಬಸವಯ್ಯ ಸ್ಮರಣಾರ್ಥ ಸಂಸ್ಥೆ ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಾಲೆಗೆ ಹೊಸರೂಪದ ಜೊತೆ, ವಿದ್ಯಾರ್ಥಿಗಳ ಕಲಿಕೆಗೆ ಹೊಸ ಆಯಾಮವನ್ನು ನೀಡುವುದು ಸಂಸ್ಥೆಯ ಉದ್ದೇಶ, ಅಲ್ಲದೇ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಮರಳಿ ಕರೆತರುವ ನಿಟ್ಟಿನಲ್ಲಿ ಚಿಕ್ಕಜಾಜೂರಿನ ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ತಂಡದ ಸದಸ್ಯ ನಿರಂಜನ್‌ ತಿಳಿಸಿದರು.

ತಂಡದ ಸಹ ಸದಸ್ಯರಾದ ಮಹೇಶ್‌, ವಿನೋದ, ಗುರುಪ್ರಸಾದ್‌ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಬಿ.ಆರ್‌. ವಿನಾಯಕ್‌, ಯಶವಂತ್‌, ಅಮಿತ್‌, ನವೀನ್‌ ಅವರು ಮೂರು ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಬಣ್ಣ ಬಳಿಯುವುದು ಹಾಗೂ ಚಿತ್ರಕಲೆ ಬಿಡಿಸುವುದರಲ್ಲಿ ನಿರತರಾಗಿದ್ದರು. ಶಾಲೆಯನ್ನು ಪುನಶ್ಚೇತನಗೊಳಿಸಲು ಬಂದ ತಂಡಕ್ಕೆ ಶಾಲೆಯ ದತ್ತು ದಾನಿ ಡಿ.ಸಿ. ಮೋಹನ್‌ ತಂಡಕ್ಕೆ ಬೇಕಾದ ಸಹಕಾರವನ್ನು ನೀಡಿದರು. ಎಸ್‌ಡಿಎಂಸಿ ಸದಸ್ಯರು ತಂಡದ ಸದಸ್ಯರಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದರು.

ದಾವಣಗೆರೆಯ ಲಕ್ಷ್ಮೀವೆಂಕಟೇಶ್ವರ ಗ್ರಾನೈಟ್ಸ್ ಮಾಲೀಕ ಜಿ.ಎಚ್‌. ಇಂದ್ರಪ್ಪ ಅವರು ತಂಡದ ಪ್ರತಿಯೊಬ್ಬ ಸದಸ್ಯರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT