ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಮುದ್ದಿನ ಶ್ವಾನಕ್ಕೂ ಸಿಕ್ಕಿತು ಬೋರ್ಡಿಂಗ್‌

Last Updated 5 ಫೆಬ್ರುವರಿ 2021, 11:38 IST
ಅಕ್ಷರ ಗಾತ್ರ

ಚಿತ್ರದುರ್ಗ: ವೃತ್ತಿಯಲ್ಲಿ ವಕೀಲರಾಗಿದ್ದ ವ್ಯಕ್ತಿ ಕುಟುಂಬ ಸಮೇತ ಹೊರರಾಜ್ಯಕ್ಕೆ ತೆರಳಬೇಕಿತ್ತು. ಮುದ್ದಿನ ನಾಯಿಯನ್ನು ಜೊತೆಯಲ್ಲಿ ಕರೆದೊಯ್ಯುವುದು ಅಸಾಧ್ಯವಾಗಿತ್ತು. ವಾರಗಟ್ಟಲೆ ಮನೆಗೆ ಬಂದು ಊಟ ಹಾಕುವಂತೆ ಸ್ನೇಹಿತರ ಸಹಾಯ ಕೋರುವುದು ಕಷ್ಟವಾಗಿತ್ತು. ‘ಸಾಗಿ ಡಾಗ್ ಬೋರ್ಡಿಂಗ್‌’ ಶ್ವಾನಪ್ರಿಯರ ಇಂತಹ ಸಮಸ್ಯೆಗೆ ಪರಿಹಾರ ಒದಗಿಸಿದೆ.

ಸಾಕು ನಾಯಿಗಳ ವಾಸ್ತವ್ಯಕ್ಕೆ ಇಲ್ಲಿ ಸ್ಥಳಾವಕಾಶ ಕಲ್ಪಿಸಿದೆ. ಊಟ, ವಸತಿ, ಆರೈಕೆ ಎಲ್ಲವೂ ಬೋರ್ಡಿಂಗ್‌ನಲ್ಲಿ ಸಿಗಲಿದೆ. ಕೆಲವೇ ತಿಂಗಳಲ್ಲಿ ಇದು ಜನಪ್ರಿಯವಾಗಿದ್ದು, ಹಲವು ಜನರಿಗೆ ಸೇವೆ ಒದಗಿಸಿದೆ. ತುರ್ತು ಕಾರ್ಯನಿಮಿತ್ತ ಹೊರ ಊರಿಗೆ ತೆರಳುವವರು, ಅನಾರೋಗ್ಯದಿಂದ ನಾಯಿ ಆರೈಕೆ ಮಾಡಲು ಸಾಧ್ಯವಾಗದವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಚಳ್ಳಕೆರೆ ರಸ್ತೆಯ ಮಹೇಶ್ವರಿ ಬಡಾವಣೆಯ ವಿದ್ಯಾಸಾಗರ್‌ ಸಾಕು ನಾಯಿ ಬೋರ್ಡಿಂಗ್‌ ಶುರು ಮಾಡಿದ್ದಾರೆ. ಐಟಿಐ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗ ಹಿಡಿದಿದ್ದ ಇವರಿಗೆ ಲಾಕ್‌ಡೌನ್‌ ಬಳಿಕ ಇದು ಆಸರೆಯಾಗಿದೆ. ಪ್ರವೃತ್ತಿಯಾಗಿದ್ದ ನಾಯಿ ಆರೈಕೆ ಹೊಸ ಬದುಕು ನೀಡಿದೆ. ಬೇರೆ ಊರಿಗೆ ತೆರಳುವವರು ಬೋರ್ಡಿಂಗ್‌ನಲ್ಲಿ ನಾಯಿ ಬಿಡುತ್ತಿದ್ದಾರೆ. ಇದಕ್ಕೆ ಸೂಕ್ತ ವ್ಯವಸ್ಥೆಯೂ ಇಲ್ಲದೆ.

20X60 ಅಡಿ ಸುತ್ತಳತೆಯ ಮನೆಯ ಟೆರೆಸ್ ನಾಯಿ ಬೋರ್ಡಿಂಗ್‌ಗೆ ಮೀಸಲಿದೆ. ನಾಯಿಗಳಿಗೆ 4X4 ಅಡಿಯ ಬೋನುಗಳನ್ನು ನಿರ್ಮಿಸಲಾಗಿದೆ. 25 ಬೋನುಗಳಲ್ಲಿ ನಾಯಿಗೆ ಅಗತ್ಯವಿರುವ ಸೌಕರ್ಯ ಒದಗಿಸಲಾಗಿದೆ. ವಿಶ್ರಾಂತಿ ಪಡೆಯಲು, ಮಲಗಲು ಸರಿಯಾದ ವ್ಯವಸ್ಥೆ ಇದೆ. ಬೇರೆ ನಾಯಿಗಳೊಂದಿಗೆ ಕಿತ್ತಾಡದಂತೆ ನೋಡಿಕೊಳ್ಳಲಾಗುತ್ತದೆ. ನಿತ್ಯ ಮೂರರಿಂದ ಐದು ಬಾರಿ ಆಹಾರ ನೀಡಲಾಗುತ್ತದೆ.

‘ಮನೆಯ ಸುತ್ತ ಜಾನುವಾರು ಸಂಚರಿಸುತ್ತವೆ. ಹಸು, ಮೇಕೆ, ಕುರಿಯಲ್ಲಿರುವ ಉಣ್ಣೆ ನಾಯಿಗೂ ಅಂಟುವ ಸಾಧ್ಯತೆ ಹೆಚ್ಚು. ಹೀಗಾಗಿ, ಮನೆಯ ಟೆರಸ್‌ ಆಯ್ಕೆ ಮಾಡಿಕೊಳ್ಳಲಾಗಿದೆ. ಮನೆಯ ನಾಲ್ಕು ನಾಯಿಗಳೊಂದಿಗೆ ಇತರ ನಾಯಿಗಳಿಗೂ ಆಶ್ರಯ ನೀಡಲಾಗುತ್ತಿದೆ. ನಿತ್ಯ ನಾಲ್ಕಾರು ಜನರು ಸೇವೆ ಪಡೆಯುತ್ತಿದ್ದಾರೆ. ಪ್ರತಿ ನಾಯಿಗೆ ದಿನವೊಂದಕ್ಕೆ ₹ 350 ರಿಂದ ₹ 550 ರವರೆಗೆ ದರ ನಿಗದಿ ಮಾಡಲಾಗಿದೆ’ ಎನ್ನುತ್ತಾರೆ ವಿದ್ಯಾಸಾಗರ್.

ವಿದ್ಯಾಸಾಗರ್‌ ಅವರಿಗೆ ಚಿಕ್ಕಂದಿನಿಂದಲೂ ನಾಯಿ ಅಚ್ಚುಮೆಚ್ಚು. ಶಾಲೆ–ಕಾಲೇಜು ದಿನಗಳಲ್ಲಿಯೇ ಅವರು ನಾಯಿ ಆರೈಕೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಸಾಕು ನಾಯಿಗಳ ಬೋರ್ಡಿಂಗ್‌ ನೋಡಿದ ಅವರಿಗೆ ಚಿತ್ರದುರ್ಗದಲ್ಲಿಯೂ ಇಂತಹದೊಂದು ವ್ಯವಸ್ಥೆ ಕಲ್ಪಿಸಿದರೆ ಹೇಗೆ ಎಂಬ ಆಲೋಚನೆ ಮೊಳೆತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಗೆ ಮರಳಿದಾಗ ಈ ಆಲೋಚನೆ ಸ್ಪಷ್ಟ ರೂಪ ಪಡೆದುಕೊಂಡಿದೆ. ಒಬ್ಬರೇ ಎಲ್ಲ ನಾಯಿಗಳನ್ನು ಆರೈಕೆ ಮಾಡುತ್ತಾರೆ.

‘ಮನುಷ್ಯರಂತೆ ನಾಯಿಗೂ ದಿನಚರಿ ಇದೆ. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಆಟವಾಡಲು ಹೊರಗೆ ಬಿಡಲಾಗುತ್ತದೆ. ಆಟಕ್ಕೆ ಇಷ್ಟವಾದ ಪರಿಕರಗಳು ಬೋರ್ಡಿಂಗ್‌ನಲ್ಲಿವೆ. ಕೊಳೆಯಾಗಿದ್ದರೆ ಸ್ನಾನ ಮಾಡಿಸಿ ಊಟ ನೀಡಲಾಗುತ್ತದೆ. ದಿನದಲ್ಲಿ ಒಮ್ಮೆ ಮಾಂಸಾಹಾರ ಒದಗಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ವಿದ್ಯಾಸಾಗರ್‌.

ದೆಹಲಿಗೆ ತೆರಳುತ್ತಿದ್ದ ವಕೀಲರೊಬ್ಬರು ಜ.31ರಂದು ನಾಯಿಯನ್ನು ಬೋರ್ಡಿಂಗ್‌ನಲ್ಲಿ ಬಿಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಸಾಕು ನಾಯಿಗೆ ತಿಂಗಳಿಂದ ಇಲ್ಲಿಯೇ ಆರೈಕೆ ನಡೆಯುತ್ತಿದೆ. ಷಫರ್ಡ್‌, ಡಾಬರ್‌ಮನ್‌ ಸೇರಿದಂತೆ ಹಲವು ತಳಿಯ ಸಾಕು ನಾಯಿಗಳು ಇಲ್ಲಿ ಆಶ್ರಯ ಪಡೆದಿವೆ. ಅನಾರೋಗ್ಯ ಕಾಣಿಸಿಕೊಂಡರೆ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

‘ಸಾಮಾನ್ಯವಾಗಿ ನಾಯಿ ಹೊಸ ಸ್ಥಳಕ್ಕೆ ಬಂದಾಗ ಹೊಂದಿಕೊಳ್ಳುವುದು ಕಷ್ಟ. ಇತರ ನಾಯಿಗಳೊಂದಿಗೆ ಕಿತ್ತಾಡುವುದು ಸಹಜ. ನಾಯಿಯ ದಿನಚರಿ ಸೇರಿದಂತೆ ಇತರ ಮಾಹಿತಿ ಪಡೆಯುತ್ತೇವೆ. ಮಾಲೀಕರನ್ನು ಕಾಣದ ನಾಯಿ ಬೇಸರ ತೋರಿಸಿಕೊಳ್ಳುತ್ತವೆ. ಇದನ್ನು ಅರಿತು ಆರೈಕೆ ಮಾಡುವ ಕಲೆ ಸಿದ್ಧಿಸಿದೆ’ ಎನ್ನುತ್ತಾರೆ ವಿದ್ಯಾಸಾಗರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT