ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಜವನಗೊಂಡನಹಳ್ಳಿಯಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಕೃಷಿ ಸಚಿವ

‘ಪಿಎಂ ಕಿಸಾನ್‌’: ಜಿಲ್ಲೆಗೆ ₹ 906 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜವನಗೊಂಡನಹಳ್ಳಿ (ಹಿರಿಯೂರು): ‘ಪ್ರಸ್ತುತ ಸಾಲಿನಲ್ಲಿ ಸಾವಯವ ಕೃಷಿಗೆ ಸರ್ಕಾರ ₹ 500 ಕೋಟಿ ಮೀಸಲಿಟ್ಟಿದೆ. ಪಿಎಂ ಕಿಸಾನ್ ಯೋಜನೆಯ ಅಡಿ ಚಿತ್ರದುರ್ಗ ಜಿಲ್ಲೆಗೆ ₹ 906 ಕೋಟಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಜಿಲ್ಲೆಗೆ 1.83 ಲಕ್ಷ ಆಹಾರದ ಕಿಟ್‌ಗಳನ್ನು 23 ಸಾವಿರ ಕುಟುಂಬಗಳಿಗೆ ವಿತರಿಸಿದೆ’ ಎಂದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೂತನ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಯಲ್ಲಿ ಬದಲಾವಣೆ ತರುವುದಕ್ಕಾಗಿ ಮಂಡ್ಯ ಜಿಲ್ಲೆಯಿಂದ ಅಧ್ಯಯನ ಆರಂಭಿಸಿದ್ದು, ಎಂಟು ಜಿಲ್ಲೆಗಳ ಪ್ರವಾಸ ಮುಗಿಸಿದ್ದೇನೆ. ಹಿರಿಯೂರು ತಾಲ್ಲೂಕಿನಲ್ಲಿ ರೈತರ ಜೊತೆ ಇಡೀ ಒಂದು ದಿನವಿದ್ದು, ಸಮಸ್ಯೆ ಅರಿಯುತ್ತೇನೆ’ ಎಂದು ಸಚಿವರು ತಿಳಿಸಿದರು.

‘ರೈತರಿಗೆ ನೀಡುವ ಯಾವುದೇ ಯೋಜನೆಗಳನ್ನು ತಡೆ ಹಿಡಿಯದಂತೆ ಸಿಎಂ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ರೈತರು ಕೃಷಿಗೆ ಮಾತ್ರ ಸೀಮಿತಗೊಳ್ಳದೇ ಉಪಕಸುಬುಗಳ ಕಡೆ ಗಮನ ಹರಿಸಬೇಕು. ವೈಜ್ಞಾನಿಕ ಕೃಷಿ ಅಳವಡಿಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

‘35 ವರ್ಷಗಳ ಹಿಂದೆ ಹಿರಿಯೂರಿನಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದಾಗ, ವಾಣಿ ವಿಲಾಸ ಜಲಾಶಯದಲ್ಲಿ ನೀರಿನ ಮಟ್ಟ 70 ಅಡಿ ದಾಟಿರಲಿಲ್ಲ. ಯಡಿಯೂರಪ್ಪ ಸಿಎಂ ಆದ ನಂತರ ಸಾಕಾರಕ್ಕೆ ಬಂದಿರುವ ಭದ್ರಾ ಯೋಜನೆಯಿಂದ, ಶಾಸಕಿ ಪೂರ್ಣಿಮಾ ಪ್ರಯತ್ನದಿಂದ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಜೆ.ಜಿ ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯಕ್ಕೆ ವಾಣಿವಿಲಾಸದಿಂದ ನೀರು ಹರಿಸುವ ಬಗ್ಗೆ ಪೂರ್ಣಿಮಾ ಅವರೊಂದಿಗೆ ಸಿಎಂ ಭೇಟಿ ಮಾಡಿ ಚರ್ಚಿಸುತ್ತೇವೆ’ ಎಂದು ಸಚಿವರು ಭರವಸೆ
ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ‘ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ತಾಲ್ಲೂಕಿಗೆ ಕೃಷಿ ಇಲಾಖೆಯಿಂದ ಹೆಚ್ಚಿನ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಬಾನ ಪರ್ವೀನ್, ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷ ರಾಜಣ್ಣ, ಉಪ ವಿಭಾಗಾಧಿಕಾರಿ ಚಂದ್ರಪ್ಪ, ತಹಶೀಲ್ದಾರ್ ಶಿವಕುಮಾರ್, ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಹರೀಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಉಲ್ಫತ್ ಜೈಬಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು