ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಗನ್ನಡ ಸಾಹಿತ್ಯದ ತೊಟ್ಟಿಲು ‘ತಳಕು’

Published 30 ಆಗಸ್ಟ್ 2023, 11:22 IST
Last Updated 30 ಆಗಸ್ಟ್ 2023, 11:22 IST
ಅಕ್ಷರ ಗಾತ್ರ

‘ತಳಕು’ ಎಂದ ತಕ್ಷಣ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ ಮತ್ತು ಟಿ.ಎಸ್. ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಾಲಯ ಕಣ್ಮುಂದೆ ಬರುತ್ತವೆ. ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ತಳಕಿಗೆ ಸಲ್ಲುತ್ತದೆ. ತ.ರಾ.ಸು ಕುಟುಂಬದ ತವರೂರು ಇದೇ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮ.

ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಉತ್ತರ ದಿಕ್ಕಿಗೆ 15ಕಿ.ಮೀ. ದೂರದಲ್ಲಿರುವ ತಳಕು ಗ್ರಾಮಕ್ಕೆ ‘ತಳುಕು’ ಎಂಬ ಹೆಸರು ಬರಲು ಹಲವು ಐತಿಹ್ಯ ಕಥೆಗಳಿವೆ. ಹಿಂದೊಮ್ಮೆ ಎರಡು ಹೋರಿಗಳು ಒಂದರ ಕೊಂಬಿನಲ್ಲಿ ಇನ್ನೊಂದು ತಳುಕು ಹಾಕಿಕೊಂಡು ಕಾದಾಟ ನಡೆಸಲು ಪ್ರಾರಂಭಿಸಿದ್ದವು. ಎಷ್ಟೇ ಪ್ರಯತ್ನಿಸಿದರೂ ಅವುಗಳು ಸೆಣೆಸಾಟ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಅಂದಿನ ಪಾಳೆಯಗಾರರು, ಇದು ಗಂಡು ಮೆಟ್ಟಿನ ನೆಲ ಎಂದೂ ಘೋಷಿಸಿ ಅದೇ ಜಾಗದಲ್ಲಿ ಹೊಸ ಗ್ರಾಮವೊಂದನ್ನು ನಿರ್ಮಿಸಿ ಅದಕ್ಕೆ ‘ತಳುಕು’ ಎಂದು ಹೆಸರು ನೀಡಿದರು ಎಂಬ ಕಥೆಯನ್ನು ಹೇಳಲಾಗುತ್ತದೆ. ಸುಮಾರು 16ನೇ ಶತಮಾನದಲ್ಲಿ ವಿಜಯನಗರ ಕಾಲದ ಶಾಸನವೊಂದರಲ್ಲಿ ಈ ಗ್ರಾಮದ ಬಗ್ಗೆ ಉಲ್ಲೇಖವಿದ್ದು, ತಳಕು ಗ್ರಾಮವು ಮೊದಲಿಗೆ ನಿಡುಗಲ್ಲು ಪ್ರಾಂತ್ಯಕ್ಕೆ ಸೇರಿದ್ದು, ನಂತರ ಚಿತ್ರದುರ್ಗದ ಪಾಳೆಯಗಾರರ ಆಳ್ವಿಕೆಗೆ ಒಳಪಟ್ಟಿದೆ ಎಂದು ಪಾಳೆಯಗಾರರ ಹಲವು ದಾಖಲೆಗಳಲ್ಲಿ ದೊರೆಯುತ್ತದೆ.

ತಳಕು ಗ್ರಾಮದ ಭೌಗೋಳಿಕ ಸ್ಥಿತಿಗತಿಯನ್ನು ಅವಲೋಕಿಸಿದಾಗ 100 ವರ್ಷಗಳಲ್ಲಿ 60ವರ್ಷಗಳ ಕಾಲ ಬರಪೀಡಿತವಾಗಿದೆ ಎಂಬ ಕಟುವಾಸ್ತವ ಕಣ್ಣೆದುರಿಗೆ ಗೋಚರಿಸುತ್ತದೆ. ಬಯಲುಸೀಮೆ ಪ್ರದೇಶವಾದ ಈ ಭಾಗಕ್ಕೆ ಪ್ರಕೃತಿ ಬಿಸಿಲನ್ನು ಯತೇಚ್ಛವಾಗಿ ನೀಡಿದೆ. ಇಂತಹ ಬೆಂಗಾಡಿನಲ್ಲಿ ತ.ರಾ.ಸು ಕುಟುಂಬ ಜನ್ಮತಳೆದು ಇಡೀ ತಳುಕು ಗ್ರಾಮಕ್ಕೆ ಸಾಹಿತ್ಯಿಕ, ಸಾಂಸ್ಕೃತಿಕ ಗೌರವವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ತಳಕು ಗ್ರಾಮದಲ್ಲಿರುವ ಜನರ ಮೂಲ ಕಸುಬು ಕೃಷಿ. ಹಿಂದೂ, ಮುಸ್ಮಿಂ, ಕ್ರಿಶ್ಚಿಯನ್ ಸೇರಿ ಹಲವು ಜಾತಿ ಜನಾಂಗಗಳ ಜನರು ಗ್ರಾಮದಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹಲವು ಕುಟುಂಬಗಳು ಸುಶಿಕ್ಷಿತವಾಗಿವೆ. ಇದಕ್ಕೆ ಕಾರಣ ತ.ರಾ.ಸು ಕುಟುಂಬ.

18ನೇ ಶತಮಾನದ ಉತ್ತರಾರ್ಧ ಮತ್ತು 19ನೇ ಶತಮಾನದಲ್ಲಿ ಈ ಕುಟುಂಬದಲ್ಲಿ ಜನಿಸಿದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು ಮತ್ತು ತಳಕಿನ ರಾಮಸ್ವಾಮಯ್ಯ ಸುಬ್ಬರಾವ್ (ತರಾಸು) ಹುಟ್ಟಿದ್ದು, ಬೆಳದು ದೊಡ್ಡವರಾಗಿ ಶಿಕ್ಷಣ, ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಈ ತ್ರಿಮೂರ್ತಿಗಳು ತಳುಕು ಗ್ರಾಮಕ್ಕೆ ಶಾಶ್ವತವಾದ ಕೀರ್ತಿಯನ್ನು ತಂದಿದ್ದಾರೆ.

ದೈವಭಕ್ತಿ ಮತ್ತು ಶುದ್ಧ ಜೀವನ ಮೌಲ್ಯಗಳನ್ನೇ ಆಸ್ತಿಯಾಗಿಸಿಕೊಂಡಿದ್ದ ತರಾಸು ಕುಟುಂಬವು ತಳಕು ಗ್ರಾಮವನ್ನು ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದರು. ಟಿ.ಎಸ್.ವೆಂಕಣ್ಣಯ್ಯನವರು ಕನ್ನಡದ ಪ್ರಸಿದ್ಧ ಕುವೆಂಪು, ತೀ.ನಂ.ಶ್ರೀ, ಡಿ.ಎಲ್.ನರಸಿಂಹಾಚಾರ್, ಎಂ.ವಿ.ಸೀತಾರಾಮಯ್ಯ, ಎಸ್.ವಿ.ಪರಮೇಶ್ವರ ಭಟ್ ಅವರಂತಹ ಮಹಾನ್ ವಿದ್ವಾಂಸರು, ಕವಿಗಳಿಗೆ ಗುರುವಾಗಿ, ಮಾರ್ಗದರ್ಶಕರಾಗಿದ್ದರು. ಇವರು ಕನ್ನಡದ ಮೊದಲ ಪ್ರಾಧ್ಯಾಪಕರು ಎಂಬ ಮನ್ನಣೆಯನ್ನು ಸಹ ಗಳಿಸಿದರು.

ನಾಡಿನಾಧ್ಯಂತ ಅಪಾರ ಶಿಷ್ಯಕೋಟಿಯನ್ನು ಹೊಂದಿದ್ದ ಇವರು, ಶ್ರೀರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ, ಬಂಗಾಳಿ ಭಾಷೆಯಿಂದ ಶ್ರೀರಾಮಕೃಷ್ಣ ಪರಮಹಂಸರ ಲೀಲಾಪ್ರಸಂಗ ಎಂಬ ಅನುವಾದಿತ ಕೃತಿ, ಬಸವದೇವರಾಜ ರಗಳೆ, ಕರ್ನಾಟಕ ಕಾದಂಬರಿ ಸಂಗ್ರಹ, ಹರಿಶ್ಚಂದ್ರಕಾವ್ಯ ಸಂಗ್ರಹ, ಕುಮಾರವ್ಯಾಸ ಭೀಷ್ಮಪರ್ವ ಸಂಗ್ರಹ ಸಿದ್ಧರಾಮಚರಿತೆಯಂತಹ ಹಲವು ಮೌಲ್ಯಯುತ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿ ಟಿ.ಎಸ್.ವೆಂಕಣ್ಣಯ್ಯನವರನ್ನು ಎಷ್ಟೋ ದಶಕಗಳ ನಂತರವೂ ಅವರನ್ನು ಪ್ರೀತಿಯಿಂದ ಇಲ್ಲಿನ ಓದಗರು ಸ್ಮರಿಸಿಕೊಳ್ಳುತ್ತಾರೆ.

ತ.ಸು.ಶಾಮರಾಯರು ಕನ್ನಡ ವ್ಯಾಕರಣ, ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶೆ, ಅಜಿತ ಪುರಾಣ ಸಂಗ್ರಹ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ತರಾಸು ಎಂದೇ ಖ್ಯಾತಿಗಳಿಸಿರುವ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಅವರು ಕನ್ನಡದ ಖ್ಯಾತ ಕಾದಂಬರಿಕಾರರಾಗಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಕಾದಂಬರಿಗಳನ್ನು ರಚಿಸಿ ನಾಡಿನಾದ್ಯಂತ ಅಪಾರ ಓದುಗ ವಲಯವನ್ನು ಸೃಷ್ಟಿಸಿಕೊಂಡರು. ಹೀಗೆ ತರಾಸು ಕುಟುಂಬದ ಕುಡಿಗಳೆಂದೇ ಖ್ಯಾತಿ ಗಳಿಸಿದ ಇವರು ತಮ್ಮ ಹುಟ್ಟುರಾದ ತಳುಕು ಗ್ರಾಮಕ್ಕೆ ಕಳಸಪ್ರಾಯವಾದರು.

ಇಂದಿಗೂ ಅವರು ಕುಟುಂಬ ಸದಸ್ಯರು ತಳಕು ಗ್ರಾಮಕ್ಕೆ ಭೇಟಿನೀಡಿ ತಮ್ಮ ಪೂರ್ವಿಕರು ವಾಸಿಸಿದ್ದ ಸ್ಥಳದಲ್ಲಿ ಓಡಾಡುತ್ತಾ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಟಿ.ಎಸ್.ವೆಂಕಣ್ಣಯ್ಯ ಸ್ಮರಣಾರ್ಥವಾಗಿ ನಿರ್ಮಿಸಿರುವ ಗ್ರಂಥಾಲಯ ಓದುವ ಹವ್ಯಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಬರಪೀಡಿತ ಪ್ರದೇಶವಾಗಿದ್ದ ತಳಕು ಗ್ರಾಮವು ಇಂತಹ ಕವಿ, ಕಾದಂಬರಿಕಾರರಿಂದ ಪ್ರೇರಣೆ ಪಡೆದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿದೆ. ಇದರ ಫಲವಾಗಿ ಹಲವರು ಉನ್ನತ ಶಿಕ್ಷಣಪಡೆದು ದೇಶದಾಧ್ಯಂತ ಸೇವೆ ಸಲ್ಲಿಸುತ್ತಿದ್ದಾರೆ.

ಟಿ.ಎಸ್.ವೆಂಕಣ್ಣಯ್ಯ ಅವರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕ ಗ್ರಂಥಾಲಯ
ಟಿ.ಎಸ್.ವೆಂಕಣ್ಣಯ್ಯ ಅವರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕ ಗ್ರಂಥಾಲಯ
ತರಾಸು ಪುತ್ಥಳಿ
ತರಾಸು ಪುತ್ಥಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT