ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರ ಕುಟುಂಬದ ಹಿತ ಕಾಯಬೇಕು

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೂಳಿ ಎಂ. ಪ್ರೇಮಾವತಿ
Last Updated 21 ಅಕ್ಟೋಬರ್ 2020, 12:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ತವ್ಯ ನಿರ್ವಹಿಸುತ್ತ ಹುತಾತ್ಮರಾದ ಪೊಲೀಸರ ಕುಟುಂಬದ ಹಿತ ಕಾಯುವ ಕೆಲಸವನ್ನು ಸಮಾಜ ಹಾಗೂ ಸರ್ಕಾರ ಮಾಡಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೂಳಿ ಎಂ. ಪ್ರೇಮಾವತಿ ಸಲಹೆ ನೀಡಿದರು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಆವರಣದ ಪೊಲೀಸರ ಹುತಾತ್ಮ ಸ್ಮಾರಕದ ಬಳಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ಸಮಯದಲ್ಲಿಯೂ ಪೊಲೀಸರು ಕೆಲಸ ಮಾಡಿದ್ದಾರೆ. ಮನೆಗಳಿಗೆ ಭೇಟಿ ನೀಡದೇ ಕರ್ತವ್ಯದಲ್ಲಿ ತೊಡಗಿಸಿಕೊಂಡ ನಿದರ್ಶನಗಳಿವೆ. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸರ ಬಗೆಗೆ ಕಾಳಜಿ ತೋರಬೇಕಿದೆ. ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ’ ಎಂದು ಹೇಳಿದರು.

‘ಸೈನಿಕರು ದೇಶದ ಗಡಿ ಕಾಯುವಂತೆ, ದೇಶದೊಳಗೆ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಕಾನ್‌ಸ್ಟೆಬಲ್‌ ಹುದ್ದೆಯೂ ಸವಾಲಿನಿಂದ ಕೂಡಿದೆ. ಇಡೀ ಸಮಾಜ ಹಬ್ಬದ ಸಂಭ್ರಮದಲ್ಲಿ ಇರುವಾಗ ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಸಮಾಜದ ಹಿತಾಸಕ್ತಿಗಾಗಿ ಪೊಲೀಸರು ಕೆಲಸ ಮಾಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ‘2019ರ ನವೆಂಬರ್‌ನಿಂದ ಈವರೆಗೆ ಕರ್ನಾಟಕದಲ್ಲಿ 17 ಹಾಗೂ ದೇಶದಲ್ಲಿ 264 ಪೊಲೀಸರು ಹುತಾತ್ಮರಾಗಿದ್ದಾರೆ. ಅವರ ಕರ್ತವ್ಯ ಹಾಗೂ ಬಲಿದಾನವನ್ನು ಸ್ಮರಿಸುವ ಅಗತ್ಯವಿದೆ. 1959ರಲ್ಲಿ ಚೀನಾ ಸೈನಿಕರ ಜತೆಗಿನ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣೆಯೊಂದಿಗೆ ಇದು ಮುನ್ನೆಲೆಗೆ ಬಂದಿತು’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ, ರೋಷನ್ ಜಮೀರ್, ತಿಪ್ಪೇಸ್ವಾಮಿ, ರಮೇಶ್, ಸಿಪಿಐಗಳಾದ ಫೈಜುಲ್ಲಾ, ನಯೀಮ್ ಅಹಮ್ಮದ್, ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT