ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನ, ಸಿರಿತನದಲ್ಲಿರಲಿ ಸಹಜತೆ: ಸಾಣೇಹಳ್ಳಿ ಶ್ರೀ

Last Updated 4 ಮೇ 2022, 4:40 IST
ಅಕ್ಷರ ಗಾತ್ರ

ಹೊಸದುರ್ಗ: ‘ಅಧಿಕಾರ, ಸಂಪತ್ತು, ಕೀರ್ತಿಯ ಮದಗಳು ಮನುಷ್ಯನ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ. ಅವರನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂದು ಬಸವಣ್ಣ ನಂಬಿದ್ದರು. ಬಡತನ, ಸಿರಿತನದಲ್ಲಿ ಸಹಜತೆ ಇರಬೇಕು. ಬಸವಣ್ಣ ಎಂದೂ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಅವರಿಗೆ ಅಧಿಕಾರಕ್ಕಿಂತ ಆದರ್ಶಗಳೇ ಮುಖ್ಯವಾಗಿದ್ದವು. ಅವರು ತೋರಿದ ಹಾದಿಯಲ್ಲೇ ನಾವು ನಡೆಯಬೇಕು’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ತಿಳಿಸಿದರು.

ಸಾಣೇಹಳ್ಳಿ ಶ್ರೀಮಠದ ಆವರಣದಲ್ಲಿನ ವಚನ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು ಮಾತನಾಡಿದರು.

ಬಸವಣ್ಣ ಪ್ರಜಾಪ್ರಭುತ್ವಕ್ಕೆ ಬೀಜಾಂಕುರ ಮಾಡಿದ ಮೊದಲ ಪ್ರಜಾಪ್ರಭುತ್ವವಾದಿ. ಮಾನವರೆಲ್ಲ ಒಂದು ಎನ್ನುವ ಭಾವನೆ ಅವರಲ್ಲಿ ಇತ್ತು. ಹೀಗಾಗಿ ಅವರು ಸಮ ಸಮಾಜಕ್ಕೆ ಮುನ್ನಡಿ ಇಟ್ಟರು. ಇಂದು ಬಸವ ಚೇತನ ಕೊಟ್ಟಿರುವ ತತ್ವ–ಸಿದ್ಧಾಂತಗಳನ್ನು ಯಥಾವತ್ತಾಗಿ ಆಚರಣೆಗೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

‘ಪ್ರಾಮಾಣಿಕ, ಸತ್ಯಸಂಧರಾಗಿ ಬದುಕುವುದೇ ಇಂದು ಕಷ್ಟವಾಗಿದೆ. ನಮ್ಮ ದೇಶ ಧರ್ಮದ ನಾಡು, ಸಾಧು–ಸಂತರ ನೆಲವೀಡು. ಆದರೆ, ಇಂಥ ಪವಿತ್ರ ನೆಲ ಸ್ವಾರ್ಥಕ್ಕೆ ದುರ್ಬಳಕೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ‘ಬಸವಣ್ಣ ಮಹಾ ಮಾನವತಾವಾದಿ. ಮಾನವತೆಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬ ಕಷ್ಟ ಸಾಧ್ಯ. ಆದರೆ, ಬಸವಣ್ಣ ಆಚರಿಸಿ ತೋರಿಸಿದ ಮಹಾತ್ಮರು’ ಎಂದು ಸ್ಮರಿಸಿದರು.

‘ಶರಣರ ತತ್ವದಂತೆ ನಡೆದರೆ ನಿರುದ್ಯೋಗದ ಪ್ರಶ್ನೆಯೇ ಬರುವುದಿಲ್ಲ. ಕೆಲಸ ಮಾಡದೆ ಕೂತು ಉಣ್ಣುವ ಪರಂಪರೆ ಶರಣರಲ್ಲಿ ಇಲ್ಲ. ಶರಣರ ದಾಸೋಹ ಪರಿಕಲ್ಪನೆ ಅದ್ಭುತವಾದುದು. ಶರಣರಲ್ಲಿ ಸಂಗ್ರಹ ಬುದ್ಧಿ ಇರಲಿಲ್ಲ. ಇದನ್ನೇ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವೆಂದು ಉಲ್ಲೇಖಿಸಲಾಗಿದೆ’ ಎಂದರು.

ಸಂಜೆ ಮಠದಿಂದ ಆರಂಭವಾದ ಬಸವಣ್ಣನವರ ಪ್ರತಿಮೆಯ ಮೆರವಣಿಗೆ, ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಕಡೆಗೆ ವಚನ ಮಂಟಪದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಅಲಕೃಂತ ಎತ್ತುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಾಣೇಹಳ್ಳಿಯ ವೀರಗಾಸೆ ತಂಡದವರು ವೀರಗಾಸೆ ಪ್ರದರ್ಶಿಸಿದರು.

ಎ.ಸಿ. ಚಂದ್ರಣ್ಣ, ಎಸ್.ಸಿದ್ಧಪ್ಪ ಹಾಜರಿದ್ದರು. ಗ್ರಾಮಸ್ಥರು, ಶಿವಸಂಚಾರ ಮತ್ತು ರಂಗ ಪ್ರಯೋಗಶಾಲೆಯ ಕಲಾವಿದರು ಮತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT